ಮೈಸೂರು: ಮುರುಘಾ ಮಠದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಜತೆಗೆ, ಇಬ್ಬರು ಬಾಲಕಿಯರ ಅಕ್ರಮ ವಶದ ದೂರು ಕೂಡ ದಾಖಲಾಗಿದೆ. ಇದೀಗ ಮೈಸೂರಿನ ಒಡನಾಡಿ ಸಂಸ್ಥೆ ಈ ಬಗ್ಗೆ ಇನ್ನೊಂದು ದೂರು ನೀಡಿದೆ.
ಮಠದ ಮುಖ್ಯಸ್ಥರು ಹಾಗೂ ಚಿತ್ರದುರ್ಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿರುದ್ಧ ಒಡನಾಡಿ ಸಂಸ್ಥೆ ಸಮಗ್ರ ಮಕ್ಕಳ ರಕ್ಷಣಾ ಯೋಜನೆ ನಿರ್ದೇಶಕರಿಗೆ ದೂರು ನೀಡಿದೆ. ಮೂರು ಮಕ್ಕಳ ವಿಚಾರದಲ್ಲಿ ದೂರು ನೀಡಲಾಗಿದೆ. ಮಠದಲ್ಲಿ ಪತ್ತೆಯಾದ 16.5 ವರ್ಷದ ಹಾಗೂ 4.5 ವರ್ಷದ ಬಾಲಕಿಯರ ಪೋಷಕರ ಪತ್ತೆ ಆಗಬೇಕು. ಈ ಬಗ್ಗೆ ದತ್ತು ಪ್ರಕ್ರಿಯೆ ನಡೆದಿಲ್ಲ ಎಂದರೆ ಪೋಷಕರು ಇದ್ದಾರೆ ಎಂದರ್ಥ. ಪೋಷಕರ ಪತ್ತೆಗೆ ಡಿಎನ್ಎ ಪರೀಕ್ಷೆ ಆಗಬೇಕು. ಈ ಬಗ್ಗೆ ಆರೋಪಿಗಳ ಮಂಪರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
ಎರಡು ವರ್ಷಗಳ ಹಿಂದೆ ಮಠದಿಂದ ಹೊರ ಹೋಗಿದ್ದ ಬಾಲಕಿಯೊಬ್ಬಳ ಅತ್ಯಾಚಾರ ನಡೆದಿದ್ದು, ಕೊಲೆಯಾಗಿ ಪತ್ತೆಯಾಗಿದ್ದಳು. ಇಲ್ಲಿವರೆಗೂ ಈ ಬಗ್ಗೆ ಸಿಡಬ್ಲ್ಯೂಸಿ ಯಾವುದೇ ಕ್ರಮ ಕೈಗೊಂಡಿಲ್ಲ. ಮಠದ ಮುಖ್ಯಸ್ಥರೂ ಕೂಡ ಯಾವುದೇ ಲಿಖಿತ ಹೇಳಿಕೆ ನೀಡಿಲ್ಲ. ಹೀಗಾಗಿ ಸಿಡಬ್ಲ್ಯೂಸಿಯನ್ನೂ ಪಾರ್ಟಿ ಮಾಡಿ ತನಿಖೆ ನಡೆಸುವಂತೆ ಒಡನಾಡಿ ಸಂಸ್ಥೆ ಮುಖ್ಯಸ್ಥರು ಪತ್ರ ಬರೆದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | ಮುರುಘಾ ಮಠದಲ್ಲಿ ಮಕ್ಕಳ ಅಕ್ರಮ ಪಾಲನೆ, ಶ್ರೀ ವಿರುದ್ಧ ಮತ್ತೊಂದು ದೂರು