ಬೆಂಗಳೂರು: ಹೈಕೋರ್ಟ್ ನಿರ್ದೇಶನದ ಅನ್ವಯ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆಯನ್ನು ರದ್ದುಪಡಿಸಿರುವ ರಾಜ್ಯ ಸರ್ಕಾರ, ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಈ ಹಿಂದೆ ನೀಡಲಾಗಿದ್ದ ತನಿಖಾ ಅಧಿಕಾರವನ್ನು ಮರುಸ್ಥಾಪಿಸಿ ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದೆ.
ಭ್ರಷ್ಟಾಚಾರ ತಡೆ ಅಧಿನಿಯಮ-1988 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ ಹಾಗೂ ಪ್ರಕರಣಗಳನ್ನು ಸ್ವತಂತ್ರವಾಗಿ ತನಿಖೆ ಮಾಡಲು ವಿವಿಧ ವೃಂದದ ಹುದ್ದೆಗಳೊಂದಿಗೆ 2016ರ ಮಾರ್ಚ್ 14ರಂದು ಕಾಂಗ್ರೆಸ್ ಸರ್ಕಾರದಿಂದ ಒಂದು ಪ್ರತ್ಯೇಕ ಭ್ರಷ್ಟಾಚಾರ ನಿಗ್ರಹ ದಳವನ್ನು ಸೃಜಿಸಲಾಗಿತ್ತು. ಆದರೆ ಹೈಕೋರ್ಟ್ ಆ.11ರಂದು ಎಸಿಬಿ ರಚನೆ ರದ್ದು ಗೊಳಿಸಲು ಆದೇಶ ನೀಡಿತ್ತು. ಇದರ ಅನ್ವಯ ಎಸಿಬಿ ರಚನೆಯನ್ನು ಅಧಿಕೃತವಾಗಿ ರಾಜ್ಯ ಸರ್ಕಾರ ರದ್ದುಗೊಳಿಸಿದೆ.
ಇದನ್ನೂ ಓದಿ | 3 ತಿಂಗಳಲ್ಲಿ ಬೆಂಗಳೂರು ಸ್ಕೈಬಸ್ ಸರ್ವೇ: CM ಬೊಮ್ಮಾಯಿಗೆ ʼಹಣ ತರುವ ಮಂತ್ರʼ ಬೋಧಿಸಿದೆ ಎಂದ ನಿತಿನ್ ಗಡ್ಕರಿ !
ಎಸಿಬಿ ತನಿಖೆ ನಡೆಸುತ್ತಿರುವ ಪ್ರಕರಣಗಳು ಹಾಗೂ ಎಸಿಬಿ ಸಿಬ್ಬಂದಿಯನ್ನು ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸುವಂತೆಯೂ ಹೋಕೋರ್ಟ್ ಆದೇಶ ನೀಡಿರುವುದರಿಂದ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ತಡೆ ಅಧಿನಿಯಮ-1988ರ ಉಪಬಂಧಗಳಡಿ ನೀಡಲಾಗಿದ್ದ ತನಿಖಾಧಿಕಾರವನ್ನು ಹಾಗೂ ದಂಡ ಪ್ರಕ್ರಿಯಾ ಸಂಹಿತೆ-1973ರ ಉಪಬಂಧ 2(ಎಸ್)ರನ್ವಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಪೊಲೀಸ್ ಠಾಣಾಧಿಕಾರವನ್ನು ನೀಡಿ ಆದೇಶಿಸಿದ ಸರ್ಕಾರದ ಅಧಿಸೂಚನೆಗಳನ್ನು ಪುನರುಜ್ಜೀವನಗೊಳಿಸಿ ಸರ್ಕಾರ ಆದೇಶಿಸಿದೆ.
ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿರುವುದರಿಂದ ಈ ಹಿಂದೆ ಸರ್ಕಾರದ ಅಧಿಸೂಚನೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಲಾಗಿದ್ದ ತನಿಖಾಧಿಕಾರ, ಪೊಲೀಸ್ ಠಾಣೆಗಳೆಂದು ಘೋಷಿಸಿ ರಾಜ್ಯವ್ಯಾಪ್ತಿ ಅಧಿಕಾರ ನೀಡಿರುವ ಆದೇಶಗಳನ್ನು ಹಿಂಪಡೆದಿರುವುದರಿಂದ ಭ್ರಷ್ಟಾಚಾರ ದಳದಲ್ಲಿ ಪ್ರಸ್ತುತ ಬಾಕಿಯಿರುವ ನಿಗ್ರಹ ತನಿಖೆಗಳು, ವಿಚಾರಣೆಗಳು, ಇತರ ಶಿಸ್ತು ಪಕರಣಗಳು ಹಾಗೂ ಖಾಸಗಿ ದೂರುದಾರರ ಪ್ರಕರಣಗಳನ್ನು ಸಂಪೂರ್ಣವಾಗಿ ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.
ಎಸಿಬಿ ರಚಿಸಿದ್ದ ಸಿದ್ದರಾಮಯ್ಯ ಸರ್ಕಾರ
ಕಾಂಗ್ರೆಸ್‌ನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು 2016ರ ಮಾರ್ಚ್ 14ರಂದು ಎಸಿಬಿ ರಚಿಸಿ ಆದೇಶ ಹೊರಡಿಸಿತ್ತು. ಆದರೆ, ಇದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೋರ್ಟ್‌ಗೆ ಸಲ್ಲಿಕೆಯಾಗಿದ್ದವು. ಅಲ್ಲದೆ, ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಸಲುವಾಗಿಯೇ ಎಸಿಬಿಯನ್ನು ರಚನೆ ಮಾಡಲಾಗಿತ್ತು ಎಂಬ ಆರೋಪ ಬಲವಾಗಿ ಕೇಳಿಬಂದಿತ್ತು. ಈ ಬಗ್ಗೆ ಆ.೧೧ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆಯನ್ನು ರದ್ದುಪಡಿಸಿ, ಹಾಲಿ ಇರುವ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲು ಆದೇಶಿಸಿತ್ತು.
ಇದನ್ನೂ ಓದಿ | Janaspandana | ಜನಸ್ಪಂದನಕ್ಕೆ 3 ಲಕ್ಷ ಜನ ಬರ್ತಾರೆ ಎಂದ ಸಚಿವ ಡಾ.ಕೆ. ಸುಧಾಕರ್