Site icon Vistara News

Cab Fares | ಬೆಂಗಳೂರಿನಲ್ಲಿ ಕ್ಯಾಬ್‌ಗಳ ಬಾಡಿಗೆ ಸುಲಿಗೆ, ಓಲಾ, ಉಬರ್‌ ವಿರುದ್ಧ 292 ಕೇಸ್‌ ದಾಖಲು

Ola

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜೋರು ಮಳೆ ಬಂದರೆ, ರಾತ್ರಿ ೧೦ ಗಂಟೆಯಾದರೆ ಓಲಾ, ಉಬರ್‌ ಸೇರಿ ಹಲವು ಕ್ಯಾಬ್‌ಗಳ ದರವು ಧುತ್ತನೆ ಏರಿಕೆಯಾಗುತ್ತದೆ ಎಂಬ ದೂರಿದೆ. ಇತ್ತೀಚೆಗಂತೂ ಕ್ಯಾಬ್‌ ಸಂಸ್ಥೆಗಳು ಬೇಕಾಬಿಕ್ಕಟ್ಟಿಯಾಗಿ ಬಾಡಿಗೆ ದರ (Cab Fares) ಹೆಚ್ಚಿಸಿವೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಅಧಿಕ ಬಾಡಿಗೆ ವಿಧಿಸಿದ ಕಾರಣ ಓಲಾ (Ola), ಉಬರ್‌ (Uber) ಸೇರಿ ಹಲವು ಕ್ಯಾಬ್‌ ಸಂಸ್ಥೆಗಳ ವಿರುದ್ಧ ೨೯೨ ಪ್ರಕರಣ ದಾಖಲಾಗಿವೆ.

ಬೆಂಗಳೂರಿನ ಪ್ರಯಾಣಿಕರು ಬೆಲೆಯೇರಿಕೆ ವಿರುದ್ಧ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಈ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಯಾಣಿಕರು ಸಾರಿಗೆ ಇಲಾಖೆ ಜತೆಗೆ ಮುಖ್ಯಮಂತ್ರಿ ಅವರಿಗೆ ದೂರುಗಳನ್ನು ಇ-ಮೇಲ್‌ ಮಾಡಿದ್ದಾರೆ. ಹಾಗೆಯೇ, ಸಾರಿಗೆ ಇಲಾಖೆಯು ಓಲಾ, ಉಬರ್‌ ಸೇರಿ ಹಲವು ಸಂಸ್ಥೆಗಳ ವಿರುದ್ಧ ೨೯೨ ಕೇಸ್‌ ದಾಖಲಿಸಿದೆ.

“ಟ್ಯಾಕ್ಸಿ ಸಂಸ್ಥೆಗಳಿಗೆ ಇದಕ್ಕೂ ಮೊದಲು ಸಾರಿಗೆ ಇಲಾಖೆಯು ಇಷ್ಟೇ ಬಾಡಿಗೆ ವಿಧಿಸಬೇಕು ಎಂದು ಸ್ಲ್ಯಾಬ್‌ ನಿರ್ಧರಿಸಲಾಗಿತ್ತು. ಅದರಂತೆಯೇ ಕ್ಯಾಬ್‌ ಸಂಸ್ಥೆಗಳು ದರ ನಿಗದಿ ಮಾಡಬೇಕು. ಆದರೆ, ಈ ನಿಯಮ ಉಲ್ಲಂಘನೆಯಾದ ಕಾರಣ ದೂರು ದಾಖಲಿಸಲಾಗಿದೆ” ಎಂದು ಸಾರಿಗೆ ಇಲಾಖೆ ಆಯುಕ್ತ ಟಿ.ಎಚ್‌.ಎಂ. ಕುಮಾರ್‌ ತಿಳಿಸಿದ್ದಾರೆ.

ವಿಮಾನ ಪ್ರಯಾಣದಷ್ಟೇ ದುಬಾರಿ ಎಂದು ಆಕ್ರೋಶ

ಬೆಂಗಳೂರಿನಿಂದ ದೇವನಹಳ್ಳಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಕ್ಯಾಬ್‌ಗಳ ಬಾಡಿಗೆಯು ವಿಮಾನ ಪ್ರಯಾಣದಷ್ಟೇ ಇದೆ ಎಂದು ಕೆಲ ಕಂಪನಿಗಳ ಸಿಇಒಗಳು ಸಾರಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಿ ಕೆನ್‌ ಕಂಪನಿ ಸಿಇಒ ರೋಹಿನ್‌ ಧರ್ಮಕುಮಾರ್‌ ಅವರೂ ಕ್ಯಾಬ್‌ ಬಾಡಿಗೆ ದರದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ವಿಮಾನ ನಿಲ್ದಾಣಕ್ಕೆ ತೆರಳಲು ಒಂದು ಗಂಟೆ ಪ್ರಯಾಣಿಸಬೇಕು. ಅಲ್ಲಿಂದ ಮುಂಬೈಗೆ ವಿಮಾನದಲ್ಲಿ ಒಂದೂವರೆ ಗಂಟೆ ಪ್ರಯಾಣ ಇದೆ. ಆದರೆ, ವಿಮಾನ ಪ್ರಯಾಣದ ದರದ ಶೇ.೬೦-೧೩೦ರಷ್ಟು ಹಣವನ್ನು ಕ್ಯಾಬ್‌ಗಳಿಗೇ ನೀಡಬೇಕು” ಎಂದಿದ್ದಾರೆ.

ರೋಹಿನ್‌ ಧರ್ಮಕುಮಾರ್‌ ಅವರ ಟ್ವೀಟ್‌ಗೆ ಮತ್ತೊಬ್ಬರು ಪ್ರತಿಕ್ರಿಯಿಸಿದ್ದು, “ಬೆಂಗಳೂರಿನಲ್ಲಿ ಕ್ಯಾಬ್‌ಗಳಿಗಿಂತ ಬಸ್‌ನಲ್ಲಿ ಓಡಾಡುವುದೇ ಉತ್ತಮ. ಅದರಲ್ಲೂ, ೨೯೦ ರೂ. ಕೊಟ್ಟರೆ ಬಸ್‌ನಲ್ಲಿಯೇ ವಿಮಾನ ನಿಲ್ದಾಣಕ್ಕೆ ತೆರಳಬಹುದು. ಹಾಗಾಗಿ, ಬಿಎಂಟಿಸಿ ಬಸ್‌ ಬಳಸಿ” ಎಂದಿದ್ದಾರೆ.

ಇದನ್ನೂ ಓದಿ | ಓಲಾ ಮತ್ತು ಉಬರ್‌ ವಿಲೀನಕ್ಕೆ ಮಾತುಕತೆ? ವರದಿ ನಿರಾಕರಿಸಿದ ಭವೀಶ್‌ ಅಗ್ರವಾಲ್

Exit mobile version