Site icon Vistara News

HD Kumaraswamy : ಒಮ್ಮೆ ಚಂದ್ರಯಾನ ಮುಗೀಲಿ; ಆಮೇಲೆ ನೈಸ್‌ನ ಎಲ್ಲ ದಾಖಲೆ ಬಿಚ್ಚಿಡ್ತೀನಿ: ಎಚ್.ಡಿ. ಕುಮಾರಸ್ವಾಮಿ

DK Shivakumar and HD Kumaraswamy

ಬೆಂಗಳೂರು: ನೈಸ್ ಹಗರಣ (Nice Project Scandal) ದಾಖಲೆಗಳನ್ನು ಇನ್ನೊಂದೆರಡು ದಿನದಲ್ಲಿ ಬಿಡುಗಡೆ ಮಾಡುತ್ತೇನೆ. ನಾಳೆ ಚಂದ್ರಯಾನ – 3 (Chandrayana 3) ಲ್ಯಾಂಡಿಂಗ್ ಇದೆ. ಎರಡು ಮೂರು ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಹೇಳಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೈಸ್‌ ಅಕ್ರಮದ ಬಗ್ಗೆ ವರದಿ ನೀಡಿರುವ, ಯೋಜನೆಯನ್ನು ರದ್ದು ಮಾಡಿ ಎಂದು ಶಿಫಾರಸು ಮಾಡಿರುವ ಟಿ.ಬಿ. ಜಯಚಂದ್ರ (TB Jayachandra) ಅವರನ್ನು ನಾನು ಅಭಿನಂದಿಸುತ್ತೇನೆ. ರೈತರ ಜಮೀನು ವಾಪಸ್ ಪಡೆದು, ನೈಸ್ ಯೋಜನೆಯನ್ನು ಸರ್ಕಾರ ವಾಪಸ್‌ ಪಡೆಯಲಿ ಎಂದು ಅವರು ವರದಿಯಲ್ಲಿ ಹೇಳಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ:Education Policy : SEP ಅಂದರೆ ಸೋನಿಯಾ ಗಾಂಧಿ ಶಿಕ್ಷಣ ನೀತಿಯೇ? ಡಿಕೆಶಿಗೆ ಬಿ.ಸಿ. ನಾಗೇಶ್‌ ಪ್ರಶ್ನೆ

ದಾಖಲೆಗಳನ್ನು ಬಿಡುಗಡೆ ಮಾಡಲಿ ನಾನೇನು ಹೆದರಿಕೊಳ್ಳುತ್ತೇನಾ? ಎಂಬ ಡಿಕೆಶಿ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಎಚ್.ಡಿ. ಕುಮಾರಸ್ವಾಮಿ, ಡಿಕೆಶಿ ಯಾರಿಗೂ ಹೆದರಿಕೊಳ್ಳಲ್ಲ. ಅವರು ಎಲ್ಲರನ್ನೂ ಕೊಂಡುಕೊಳ್ಳುತ್ತಾರೆ. ಬಿಜೆಪಿಯ ಡೆಲ್ಲಿ ನಾಯಕರನ್ನು (BJP Delhi leaders) ಕೊಂಡುಕೊಂಡರೂ ಅಚ್ಚರಿ ಇಲ್ಲ. ಬಿಜೆಪಿಯ ಡೆಲ್ಲಿಯ ನಾಯಕರನ್ನು ಖರೀದಿ ಮಾಡಿರುವುದರಲ್ಲಿ ಅಚ್ಚರಿ ಇಲ್ಲ. ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ (Former Prime Minister HD Deve Gowda) ಕುಟುಂಬವನ್ನು ಬಿಟ್ಟು ಎಲ್ಲರನ್ನೂ ಖರೀದಿ ಮಾಡುತ್ತಾರೆ ಎಂದು ಕುಟುಕಿದರು.

ಇನ್ನಾದರೂ ಲೂಟಿ ಹೊಡೆಯೊದನ್ನು ನಿಲ್ಲಿಸಿ

ಕಾವೇರಿ ಹಾಗೂ ಮಹದಾಯಿ ಜಲವಿವಾದಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಕರೆದಿರುವ ಸರ್ವಪಕ್ಷ ಸಭೆಗೆ ಹೋಗುತ್ತೇನೆ. ನಾನೇ ಸಭೆ ಕರೆಯಲು ಹೇಳಿದ್ದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಆದರೆ, ನೀರಾವರಿ ಸಚಿವರು ನನ್ನ ಟ್ವೀಟ್‌ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅಣ್ಣ-ತಮ್ಮಂದಿರ ರೀತಿ ಇರಬೇಕೆಂದು ಹೇಳಿದ್ದೇನೆ. ನೀರು ಬಿಡುತ್ತೇನೆ ಎಂದು ಹೇಳಿದ್ದೇನಾ? ಆ ಸ್ಥಾನದ ಗಾಂಭೀರ್ಯತೆ ಕಾಪಾಡಿಕೊಳ್ಳಿ. ಬಿಚ್ಚೋದು ಬಿಚ್ಚೋದು ಎಂದು ಹೇಳುತ್ತಾರೆ. ಹಿಂದೆ ಮಾಡಿಕೊಂಡಿದ್ದು ಸಾಕು, ತಿಹಾರ್ ಜೈಲಿಗೆ ಹೋಗಿದ್ದು ಸುಮ್ಮನೇನಾ? ಇನ್ನಾದರೂ ಲೂಟಿ ಹೊಡೆಯೊದು ನಿಲ್ಲಿಸಿ. ಅಣ್ಣ ಎಂದು ಹೇಳುತ್ತೀರಲ್ಲವೇ, ನನ್ನ ಮಾತನ್ನು ಸ್ವಲ್ಪ ಕೇಳಿ. ಇನ್ನಾದರೂ ಲೂಟಿ ಹೊಡೆಯೊದನ್ನು ನಿಲ್ಲಿಸಿ ಎಂದು ಕಿವಿಮಾತು ಹೇಳಿದರು.

ಎಸ್‌.ಟಿ. ಸೋಮಶೇಖರ್‌ ಮೇಲೆ ಕಿಡಿ

ಯಶವಂತಪುರ ಶಾಸಕರಾದ ಎಸ್‌.ಟಿ. ಸೋಮಶೇಖರ್‌ ಅವರನ್ನು ಬಿಜೆಪಿ ಸೇರಿಸಿಕೊಂಡು ಒಳ್ಳೆಯ ಸ್ಥಾನಮಾನವನ್ನು ಕೊಟ್ಟಿದ್ದರು. ಮೂರೂವರೆ ವರ್ಷ ಅವರಿಗೆ ಬೇಕಾದ್ದೆಲ್ಲ ಕೊಟ್ಟರಲ್ಲ. ಈಗ ಮತ್ತೆ ಕ್ಷೇತ್ರಕ್ಕೆ ಅನುದಾನ ಸಿಗುತ್ತಿಲ್ಲ ಎಂದು ಹೊರಟಿದ್ದಾರೆ. ಹಾಗಾದರೆ, ಬಿಜೆಪಿ ಸರ್ಕಾರದಲ್ಲಿ ಅವರು ಏನೂ ಅಭಿವೃದ್ಧಿ ಮಾಡಿಲ್ಲವೇ? ಯಶವಂತಪುರ ಶಾಸಕರು ಏನು ಮಾಡಿಲ್ಲವೇ? ಈಗ ಮತ್ತೆ ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದು ಹೇಳುತ್ತಿದ್ದಾರೆ. ಇಂಥವರನ್ನು ತೆಗೆದುಕೊಂಡು ರಾಜ್ಯವನ್ನು ಹೇಗೆ ಉದ್ದಾರ ಮಾಡ್ತೀರಾ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಕಾಂಗ್ರೆಸ್‌ನವರು ಬಿಜೆಪಿ ಮತ್ತು ಜೆಡಿಎಸ್‌ನ ಮುಖಂಡರನ್ನು ಸೆಳೆಯುತ್ತಿದ್ದಾರೆ. ಕಾಂಗ್ರೆಸ್‌ನವರು ಅನುಕೂಲ ಸಿಂಧು ರಾಜಕಾರಣ ಮಾಡುತ್ತಿದ್ದಾರೆ. ಕೆಲವರನ್ನು ಬೆದರಿಸಿ, ಆಮಿಷ ತೋರಿಸಿ ಸೆಳೆಯುತ್ತಿದ್ದಾರೆ. ಅಧಿಕಾರ ದುರುಪಯೋಗದ ಹಿನ್ನೆಲೆಯಲ್ಲಿ ನನ್ನ ಕಾರ್ಯಕರ್ತರನ್ನು ಕೆಲವರು ಡಿಸ್ಟರ್ಬ್ ಮಾಡುತ್ತಿದ್ದಾರೆ. ನಿಮ್ಮ ಸ್ವಾಭಿಮಾನ ಕಡಿಮೆಯಾಗದೆ ಹೋರಾಟ ಮಾಡಿ ಎಂದು ಹೇಳಲು ಬಂದಿದ್ದೇನೆ. ಯಶವಂತಪುರದಲ್ಲಿ ಚುನಾವಣೆ ನಡೆಸುವುದು ಬಹಳ ಕಷ್ಟ. ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: Operation Hasta : ಬಂಗಾರಪ್ಪ ಕುಟುಂಬ ಒಂದು ಮಾಡಲು ಡಿಕೆಶಿ ಪ್ಲ್ಯಾನ್!‌ ಕುಮಾರ್‌ಗೆ ಶಿವಮೊಗ್ಗ ಟಿಕೆಟ್?

ನಮ್ಮವರು ನಿಷ್ಠಾವಂತ ಕಾರ್ಯಕರ್ತರು

ಇಂದು ತಾವರೆಕರೆ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಯಾವುದೋ ಉಪ ಚುನಾವಣೆ ಬರುತ್ತೆ ಅಂತ ಅಲ್ಲ. ಸ್ಥಳೀಯ ಚುನಾವಣೆ ತಯಾರಿ ಮಾಡಬೇಕಾಗಿದೆ. ಯಶವಂತಪುರವನ್ನು ತನ್ನ ವಶಕ್ಕೆ ಪಡೆಯಲು ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್‌ನವರು ಹಲವು ಆಸೆ ತೋರಿಸುತ್ತಿದ್ದಾರೆ. ಅಧಿಕಾರಿಗಳನ್ನು ಉಪಯೋಗಿಸಿಕೊಂಡು ನಮ್ಮ. ಕಾರ್ಯಕರ್ತರನ್ನು ಡಿಸ್ಟರ್ಬ್ ಮಾಡುತ್ತಿದ್ದಾರೆ. ಇಲ್ಲಿ ನಮ್ಮ ಕಾರ್ಯಕರ್ತರು ನಿಷ್ಠಾವಂತರಿದ್ದಾರೆ. ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅಭಿಮಾನಿಗಳು ಇದ್ದಾರೆ.

Exit mobile version