ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಾರ ನಡೆಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. “ರಾಹುಲ್ ಗಾಂಧಿ ಅವರು ಒಂದು ದಿನ ಸದ್ದಾಂ ಹುಸೇನ್ ಅವರಂತೆ ಕಾಣುತ್ತಾರೆ, ಮತ್ತೊಂದು ದಿನ ಅಮುಲ್ ಬೇಬಿ ರೀತಿ ಕಾಣುತ್ತಾರೆ” ಎಂದು ಟೀಕಿಸಿದರು. ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ವೇಳೆ ಗಡ್ಡ ಬಿಟ್ಟು, ನಂತರ ಅದನ್ನು ತೆಗೆದ ಹಿನ್ನೆಲೆಯಲ್ಲಿ ಹಿಮಂತ ಬಿಸ್ವಾ ಶರ್ಮಾ ಟೀಕಿಸಿದರು.
“ರಾಹುಲ್ ಗಾಂಧಿ ಒಂದೊಂದು ದಿನ ಒಂದೊಂದು ರೀತಿ ಕಾಣುತ್ತಾರೆ. ಒಂದು ದಿನ ಸದ್ದಾಂ ಹುಸೇನ್ ರೀತಿ ಕಾಣುತ್ತಾರೆ. ಇನ್ನೊಂದು ದಿನ ಅಮುಲ್ ಬೇಬಿ ರೀತಿ ಕಾಣುತ್ತಾರೆ. ರಾಹುಲ್ ಗಾಂಧಿ ಏಳಿಗೆ ಹೊಂದಬೇಕು, ಏನನ್ನಾದರೂ ಸಾಧಿಸುವಂತಾಗಬೇಕು ಎಂದು ಸೋನಿಯಾ ಗಾಂಧಿ ಅವರು ಕಳೆದ 20 ವರ್ಷದಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ, ರಾಹುಲ್ ಗಾಂಧಿ ಅವರು ಮನಸ್ಸಿಗೆ ಬಂದಿದ್ದನ್ನು ಮಾಡುತ್ತಾರೆ. ಒಬ್ಬ ವ್ಯಕ್ತಿಗೆ ತನ್ನ ಬಗ್ಗೆ ತನಗೇ ಗ್ಯಾರಂಟಿ ಇಲ್ಲ. ಹೀಗಿರುವಾಗ ಅವರು ರಾಜ್ಯಕ್ಕೆ ಏನು ಗ್ಯಾರಂಟಿ ಕೊಡುತ್ತಾರೆ” ಎಂದು ಕುಟುಕಿದರು.
ಹಿಮಂತ ಬಿಸ್ವಾ ಶರ್ಮಾ
“ಕರ್ನಾಟಕದಲ್ಲೀಗ ಕಾಂಗ್ರೆಸ್ ಹಲವು ಗ್ಯಾರಂಟಿ ಘೋಷಿಸುತ್ತಿದೆ. ಆದರೆ, ಗ್ಯಾರಂಟಿ ಕೊಡಲು ರಾಹುಲ್ ಗಾಂಧಿ ಯಾರು? ನೀವು ಹಿಮಾಚಲ ಪ್ರದೇಶದಲ್ಲೂ ಗ್ಯಾರಂಟಿ ನೀಡಿದ್ದೀರಿ. ಆದರೆ, ಏನೂ ಉಪಯೋಗ ಆಗಲಿಲ್ಲ. ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ಸೋಲುತ್ತಾರೆ. ಬಳಿಕ ಕೇರಳಕ್ಕೆ ಓಡುತ್ತಾರೆ. ಅವರ ಬಗ್ಗೆ ಅವರಿಗೇ ಗ್ಯಾರಂಟಿ ಇಲ್ಲ. ಆದರೆ, ಇವರು ಕರ್ನಾಟಕಕ್ಕೆ ಗ್ಯಾರಂಟಿ ಕೊಡುತ್ತಿದ್ದಾರೆ” ಎಂದು ಟೀಕಿಸಿದರು.
ಇದನ್ನೂ ಓದಿ: Karnataka Election: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ; ಕೊನೆಯ ದಿನ ಕಸರತ್ತು
ಹಿಮಂತ ಬಿಸ್ವಾ ಶರ್ಮಾ ಹೇಳಿಕೆಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಪ್ರತಿಕ್ರಿಯಿಸಿ, “ಹಿಮಂತ ಬಿಸ್ವಾ ಶರ್ಮಾ ಅವರಷ್ಟು ಆಸೆಬುರುಕ ಇನ್ನೊಬ್ಬರು ಇಲ್ಲ. ಅಧಿಕಾರಕ್ಕಾಗಿ ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿರುವ ಅವರಿಗೆ ರಾಹುಲ್ ಗಾಂಧಿ ಬಗ್ಗೆ ಮಾತನಾಡುವ ನೈತಿಕತೆ” ಎಂದು ಜರಿದಿದ್ದಾರೆ. ರಾಹುಲ್ ಗಾಂಧಿ ಅವರನ್ನು 2011ರಲ್ಲಿ ಆಗ ಕೇರಳ ಮುಖ್ಯಮಂತ್ರಿ ಆಗಿದ್ದ ವಿ.ಎಸ್.ಅಚ್ಯುತಾನಂದನ್ ಅವರು ಅಮುಲ್ ಬೇಬಿ ಎಂದು ಕರೆದಿದ್ದರು.