Site icon Vistara News

Honeybee Attack: ಹೆಜ್ಜೇನು ದಾಳಿಯಿಂದ ಒಬ್ಬರ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

Bee attack

ತುಮಕೂರು: ಹೆಜ್ಜೇನು ದಾಳಿಯಿಂದ ಒಬ್ಬರು ಮೃತಪಟ್ಟು, 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಲಕ್ಕೇನಹಳ್ಳಿ ಗೇಟ್ ಬಳಿ ನಡೆದಿದೆ. ನಾಮಕರಣ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಜನರ ಮೇಲೆ ಏಕಾಏಕಿ ಹೆಜ್ಜೇನು ದಾಳಿ (Honeybee Attack) ಮಾಡಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ವೀರಭದ್ರಯ್ಯ (47) ಮೃತರು. ಕಡಬ ಹೋಬಳಿ ಬೆಲವತ್ತ ಗ್ರಾಮದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ನಾಮಕರಣ ನಡೆಯುತ್ತಿದ್ದಾಗ ದಿಢೀರನೆ ಹೆಜ್ಜೇನು ನೋಣಗಳು ದಾಳಿ ನಡೆಸಿವೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವೀರಭದ್ರಯ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಗುಬ್ಬಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.

ಯುವತಿ ಸಾವು ಪ್ರಕರಣ; 6 ಜನರ ಬಂಧನ

ವಿಜಯನಗರ: ಎರಡು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಸಾವು ಪ್ರಕರಣದಲ್ಲಿ 6 ಜನರನ್ನು ಟಿಬಿ ಡ್ಯಾಂ ಪೊಲೀಸರು ಬಂಧಿಸಿದ್ದಾರೆ. ವರ ಅಶೋಕ್, ಸಂಬಂಧಿಕರಾದ ಅಂಬರೀಶ್ವರನ್, ಕೃಷ್ಣವೇಣಿ, ರಾಜೇಶ್ವರಿ, ಲೋಗನಾಥನ್, ರಘು ಅವರನ್ನು ಬಂಧಿಸಲಾಗಿದೆ.

ಯುವತಿಯ ತಂದೆ ಸುಬ್ರಮಣಿ ನೀಡಿದ ದೂರಿನ ಆಧಾರದ ಮೇಲೆ ಆರು ಜನರನ್ನು ಬಂಧಿಸಲಾಗಿದೆ. ಮೃತ ಯುವತಿ ಐಶ್ವರ್ಯ ಮತ್ತು ಬಂಧಿತ ಅಶೋಕ್‌ಗೆ ಬುಧವಾರ ಮದುವೆ ನಡೆಯಬೇಕಿತ್ತು. ಹೊಸಪೇಟೆಯ ಟಿಬಿ ಡ್ಯಾಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Love Failure: ಅವನನ್ನು ಕರ್ಕೊಂಡು ಬನ್ನಿ, ಇಲ್ಲದಿದ್ದರೆ ಮೇಲಿಂದ ಹಾರ್ತೀನಿ!

ಕೈ ನಾಯಕಿ ವೀಣಾ ಕಾಶಪ್ಪನವರ್‌ ಕಾರು ಅಪಘಾತ; ಅಪಾಯದಿಂದ ಪಾರು

ವಿಜಯಪುರ: ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್‌ ಅವರ ಪತ್ನಿ ವೀಣಾ ಕಾಶಪ್ಪನವರ್ ಪ್ರಯಾಣಿಸುತ್ತಿದ್ದ ಕಾರು, ನಗರದ ಹೊರವಲಯದ ಮುನೀಶ್ವರ ಭಾಗದಲ್ಲಿ ಅಪಘಾತಕ್ಕೀಡಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ (Car Accident) ವೀಣಾ ಕಾಶಪ್ಪನವರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಂಗ್ರೆಸ್ ನಾಯಕಿ, ಬಾಗಲಕೋಟೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್‌ ಅವರು ವಿಜಯಪುರದಿಂದ ಸಿಂದಗಿ ಕಡೆಗೆ ಕಾರಿನಲ್ಲಿ ಹೊರಟಿದ್ದ ವೇಳೆ ವಿಜಯಪುರ-ಕಲಬುರಗಿ ರಾಜ್ಯ ಹೆದ್ದಾರಿಯಲ್ಲಿ ಸ್ಕೂಟಿ ಅಡ್ಡ ಬಂದಿದೆ. ಈ ವೇಳೆ ಸ್ಕೂಟಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆಯಲಾಗಿದೆ. ಗಾಯಗೊಂಡಿದ್ದ ವೀಣಾ ಕಾಶಪ್ಪನವರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version