ವಿಜಯನಗರ: ಆಟೋಗೆ ಲಾರಿ ಡಿಕ್ಕಿಯಾಗಿ ಒಬ್ಬ ವಿದ್ಯಾರ್ಥಿ ಮೃತಪಟ್ಟು, 6 ಮಂದಿ ಗಾಯಗೊಂಡಿರುವ ಘಟನೆ (Road Accident) ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರದ ಬಳಿ ನಡೆದಿದೆ.
ಮಲ್ಲಿಕಾರ್ಜುನ (17) ಮೃತ ವಿದ್ಯಾರ್ಥಿ. ಗಾಯಗೊಂಡ ಆರು ಮಂದಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಆಟೋಗೆ ಡಿಕ್ಕಿ ಹೊಡೆದ ಬಳಿಕ ನಿಲ್ಲಿಸದೆ ಖಾಸಗಿ ಗೂಡ್ಸ್ ವಾಹನ ಚಾಲಕ ಪರಾರಿಯಾಗಿದ್ದ. ಆದರೆ, ಪೊಲೀಸರ ಚಾಣಾಕ್ಷತನದಿಂದ ಕೊಪ್ಪಳದ ಹಿಟ್ನಾಳ್ ಕ್ರಾಸ್ ಬಳಿ ಲಾರಿ ಚಾಲಕ ಸಿಕ್ಕಿಸಿದ್ದಿದ್ದಾನೆ.
ಮರಿಯಮ್ಮನ ಹಳ್ಳಿ ಪಿಎಸ್‌ಐ ಮೌನೇಶ್ ರಾಥೋಡ್ ನೇತೃತ್ವದ ಸಿಬ್ಬಂದಿ ಗೂಡ್ಸ್ ವಾಹನ ಚಾಲಕನನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ. ವಿಜಯನಗರ ಎಸ್ಪಿ ಶ್ರೀಹರಿಬಾಬು ಬಿ.ಎಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಿಯಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | NIA Raid : ಸುಳ್ಯದಲ್ಲೂ ಎನ್‌ಐಎ ದಾಳಿ; 2 ದಿನದ ಹಿಂದೆ ಕೇರಳದಿಂದ ಬಂದಿದ್ದವ ವಶಕ್ಕೆ
ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು
ಕೋಲಾರ: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಾಲೂರು ತಾಲೂಕಿನ ಗುಡ್ಡನಹಳ್ಳಿ ಕ್ರಾಸ್ ಬಳಿ ನಡೆದಿದೆ. ಸೊಣ್ಣಹಳ್ಳಿ ಗ್ರಾಮದ ತಾಯಪ್ಪ (65) ಮೃತರು. ಮಾಲೂರಿನಿಂದ ಲಕ್ಕೂರಿಗೆ ಹೋಗುವಾಗ ನಡೆದ ಅಪಘಾತದಲ್ಲಿ ತಾಯಪ್ಪ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪತ್ನಿ ಜತೆಗೆ ವಿಡಿಯೊ ಕಾಲ್; ಮಾತಲ್ಲಿ ಮೈಮರೆತಾಗ ಬಡಿಯಿತು ರೈಲು
ಮೈಸೂರು: ಮೊಬೈಲ್ ತಂದ ಆಪತ್ತು ವ್ಯಕ್ತಿಯೊಬ್ಬನ ಪ್ರಾಣವನ್ನೇ ಕಸಿದುಕೊಂಡಿದೆ. ಹಳಿ ಸಮೀಪದಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಗೆ ರೈಲು ಬಡಿದಿದೆ. ಪರಿಣಾಮ ಬಿಹಾರ ಮೂಲದ ಮನು ಕುಮಾರ್(27) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೈಸೂರಿನ ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಗ್ರಾಮದಲ್ಲಿ ಈ ದುರ್ಘಟನೆ (Mysuru News) ನಡೆದಿದೆ.
ಮನು ಕುಮಾರ್ ದೊಡ್ಡ ಕವಲಂದೆ ಗ್ರಾಮದಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ. ಮಂಗಳವಾರ ಬೆಳಗ್ಗೆ 7.40ಕ್ಕೆ ಪತ್ನಿ ಜತೆಗೆ ಮಾತಾಡಲೆಂದು ಹೊರ ಬಂದಿದ್ದ. ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಮಾತನಾಡಿಕೊಂಡು ಹಳಿ ಸಮೀಪ ಬರುತ್ತಿದ್ದ. ಕಿವಿಗೆ ಹೆಡ್‌ಫೋನ್ ಹಾಕಿದ್ದರಿಂದಲೋ ಏನೋ ರೈಲು ಬರುವುದನ್ನೂ ಗಮನಿಸಿರಲಿಲ್ಲ.
ಚಾಮರಾಜನಗರ ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ರೈಲು ತಾಕಿದೆ. ರೈಲು ತಾಕಿದ ರಭಸಕ್ಕೆ ಮನು ಕೆಳಗೆ ಬಿದ್ದವನೇ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಡಿಯೋ ಕಾಲ್‌ನಲ್ಲಿದ್ದ ಪತ್ನಿ ಕಣ್ಮುಂದೆಯೇ ದಾರುಣವಾಗಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ | Death Threat to Modi: ತಲ್ವಾರ್ ಹಿಡಿದು ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿಗೆ ಜೀವ ಬೆದರಿಕೆ ಒಡ್ಡಿದ್ದ ನಾಸಿರ್ ಸೆರೆ
ಸ್ಥಳೀಯ ಮಾಹಿತಿ ಮೇರೆಗೆ ಸ್ಥಳಕ್ಕಾಮಿಸಿದ ನಂಜನಗೂಡು ರೈಲ್ವೆ ಪೊಲೀಸ್ ಠಾಣೆಯ ಆರ್‌ಪಿಎಫ್ ಜಗನ್ನಾಥ್, ಪೊಲೀಸ್ ಸಿಬ್ಬಂದಿ ಶ್ರೀನಿವಾಸ್, ಕುಮಾರ್ ಪರಿಶೀಲನೆ ನಡೆಸಿದ್ದಾರೆ. ಹಳಿ ಪಕ್ಕ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ನಂಜನಗೂಡು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.