ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಹೆಣ್ಣುಮಕ್ಕಳ ಅನುಕೂಲಕ್ಕಾಗಿ ಜಾರಿಗೆ ತಂದ ಶಕ್ತಿ ಯೋಜನೆ ಜಾರಿಯಾಗಿ ಸೋಮವಾರಕ್ಕೆ (ಜೂನ್ 11) ಒಂದು ವರ್ಷ ತುಂಬಿದೆ. ಹೆಣ್ಣುಮಕ್ಕಳು ರಾಜ್ಯದ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾದ, ರಾಜ್ಯ ಸರ್ಕಾರದ ಐದು ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಿಂದ ಜೂನ್ 9ರವರೆಗೆ 225 ಕೋಟಿ ಬಾರಿ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ.
2023ರ ಜೂನ್ 11ರಂದು ರಾಜ್ಯ ಸರ್ಕಾರವು ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಹಾಗೂ ಎನ್‌ಡಬ್ಲ್ಯೂಕೆಆರ್‌ಟಿಸಿ ಬಸ್‌ಗಳಲ್ಲಿ ಜೂನ್ 9ರವರೆಗೆ 225.15 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಜೂನ್ 9ರವರೆಗೆ 5,481.40 ಕೋಟಿ ರೂಪಾಯಿಯನ್ನು ನಾಲ್ಕೂ ನಿಗಮಗಳಿಗೆ ವಿನಿಯೋಗ ಮಾಡಿದೆ.
2023ರ ವಿಧಾನಸಭೆ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕ ಕಾಂಗ್ರೆಸ್ ಘೋಷಣೆ ಮಾಡಿತ್ತು. ಚುನಾವಣೆ ವೇಳೆ ಗ್ಯಾರಂಟಿ ಯೋಜನೆಗಳ ಕುರಿತು ಅಬ್ಬರದ ಪ್ರಚಾರ ಕೈಗೊಂಡಿತ್ತು. ಐದು ಯೋಜನೆಗಳಲ್ಲಿ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾದ ಶಕ್ತಿ ಯೋಜನೆಯೂ ಒಂದಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತು. ಅದರಂತೆ, ಶಕ್ತಿ ಯೋಜನೆಯು ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಇದರಿಂದ ಕೋಟ್ಯಂತರ ಮಹಿಳೆಯರು ಲಾಭ ಪಡೆದಿದ್ದಾರೆ.
ಶಕ್ತಿ ಯೋಜನೆಗೆ ಆರಂಭದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಇನ್ನು ಬಸ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣುಮಕ್ಕಳು ಓಡಾಟ ಆರಂಭಿಸಿದ ಕಾರಣ ಬಸ್‌ನಲ್ಲಿ ಕಂಡಕ್ಟರ್ ಜತೆ ಜಗಳ, ಪ್ರಯಾಣಿಕರೇ ಬಡಿದಾಡಿಕೊಂಡ ಪ್ರಕರಣಗಳು ಸುದ್ದಿಯಾಗಿದ್ದವು. ಇದಾದ ಬಳಿಕ ಪರಿಸ್ಥಿತಿಯು ನಿಯಂತ್ರಣಕ್ಕೆ ಬಂದಿದೆ. ಶಕ್ತಿ ಯೋಜನೆ ಜಾರಿಗೂ ಮೊದಲು ಕರ್ನಾಟಕದ ಸಾರಿಗೆ ಬಸ್‌ಗಳಲ್ಲಿ ನಿತ್ಯ 84.5 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಆದರೆ, ಯೋಜನೆ ಜಾರಿ ಬಳಿಕ ನಿತ್ಯ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ 1.06 ಕೋಟಿಗೆ ಏರಿಕೆಯಾಗಿದೆ. ಇದರಿಂದ ಸಾರಿಗೆ ನಿಗಮಗಳಿಗೂ ಲಾಭವಾಗಿದೆ.
ಇದನ್ನೂ ಓದಿ: Congress Guarantee: ಗ್ಯಾರಂಟಿ ನಿಲ್ಲಿಸುವ ಮಾತು ಬೇಡ: ಕೈ ನಾಯಕರಿಗೆ ಎಚ್.ಎಂ ರೇವಣ್ಣ ಎಚ್ಚರಿಕೆ