Site icon Vistara News

Onion tears | ಬೆಲೆಯೇ ಇಲ್ಲದ ಈರುಳ್ಳಿ: ವೇದಾವತಿ ನದಿಗೆ ಸುರಿದು ಆಕ್ರೋಶ ಹೊರಹಾಕಿದ ರೈತರು

onion protest

ಚಿತ್ರದುರ್ಗ: ಉಳಿದ ತರಕಾರಿಗಳ ಬೆಲೆ ಗಗನಕ್ಕೇರಿದೆ. ಆದರೆ, ಈರುಳ್ಳಿ ಮಾತ್ರ ಇನ್ನೂ ಅಗ್ಗವಾಗಿಯೇ ಇದೆ. ಇದರ ಪರಿಣಾಮವಾಗಿ ರೈತರಿಗೂ ಬೆಲೆ ಸಿಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದ ಕಣ್ಣೀರಾದ, ಆಕ್ರೋಶಿತರಾದ ರೈತರು ತಾವು ಬೆಳೆದ ಈರುಳ್ಳಿಯನ್ನೆಲ್ಲ ವೇದಾವತಿ ನದಿಗೆ ಸುರಿದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಬುರುಡುಕುಂಟೆ ಗ್ರಾಮದ ರೈತರು ಎರಡು ಕಾರಣಕ್ಕಾಗಿ ಕಂಗಾಲಾಗಿದ್ದಾರೆ. ಒಂದು ಅತಿಯಾದ ಮಳೆಯಿಂದ ಈರುಳ್ಳಿ ಬೆಳೆ ಎಲ್ಲ ಹಾಳಾಗಿದೆ. ಇನ್ನೊಂದು ಕಡೆ ಬೆಳೆದು ನಿಂತ ಈರುಳ್ಳಿಗೆ ಬೆಲೆ ಇಲ್ಲದಾಗಿದೆ. ಇದರಿಂದ ಕಂಗಾಲಾದ ಅವರು ನೇರವಾಗಿ ಅದನ್ನು ನದಿಗೇ ಸುರಿದಿದ್ದಾರೆ.

ತಮ್ಮ ಹೊಲದಲ್ಲಿ ಬೆಳೆದ ಈರುಳ್ಳಿಯನ್ನು ಟ್ರ್ಯಾಕ್ಟರ್ ನಲ್ಲಿ ತುಂಬಿಕೊಂಡು ಬಂದು ನದಿಗೆ ಸುರಿದ ವಿಡಿಯೊ ದೃಶ್ಯಗಳು ವೈರಲ್‌ ಆಗಿವೆ.

ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ
ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಬೆಳೆ ಹಾನಿಯಾದ ಪರಿಣಾಮ ನೊಂದ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಬುಸಾಬ ಬಸರಕೋಡ(52) ಆತ್ಮಹತ್ಯೆ ಮಾಡಿಕೊಂಡ ರೈತರು.

ಇವರು ಬೇರೆಯವರ ಜಮೀನು ಪಡೆದು ಉಳುಮೆ ಮಾಡಿದ್ದರು. ಆರು ಎಕರೆಯಲ್ಲಿ ಕೃಷಿ ಮಾಡಲು ನಾನಾ ಬ್ಯಾಂಕ್‌ಗಳಲ್ಲಿ ಸುಮಾರು ಮೂರು ಲಕ್ಷ ರೂ. ಸಾಲ ಪಡೆದಿದ್ದರು. ಆದರೆ, ಅತಿಯಾದ ಮಳೆಯಿಂದ ಬೆಳೆ ಹಾನಿಯಾಗಿ ಸಾಲ ಕಟ್ಟಲಾಗಲಿಲ್ಲ. ಇದರಿಂದ ನೊಂದು ಅವರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ | ಹೆಸರಾಂತ ಸಾವಯವ ಕೃಷಿಕ, ಬಿಜೆಪಿ ಗ್ರಾಪಂ ಸದಸ್ಯ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Exit mobile version