ಗದಗ: ರಾಜಕಾರಣಿಗಳು ಸೇರಿ ಹಲವು ಸೆಲೆಬ್ರಿಟಿಗಳ ಹೆಸರಿನಲ್ಲಿ ವಂಚನೆ ಮಾಡುವ ಪ್ರಕರಣಗಳು ಆಗಾಗ ಸುದ್ದಿಯಾಗುತ್ತಿರುತ್ತವೆ. ಆದರೆ, ಗದಗದಲ್ಲಿ ಪೊಲೀಸ್ ಅಧಿಕಾರಿಗಳ (Police Officers) ಹೆಸರನ್ನೇ ದುರ್ಬಳಕೆ ಮಾಡಿಕೊಂಡು ಆನ್‌ಲೈನ್ ವಂಚನೆ (Online Fraud) ಮಾಡಲಾಗಿದೆ. ಅದರಲ್ಲೂ, ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರ ಹೆಸರು ಬಳಸಿ ವ್ಯಕ್ತಿಯೊಬ್ಬರಿಗೆ 55 ಸಾವಿರ ರೂ. ವಂಚನೆ ಮಾಡಲಾಗಿದೆ.
ಗದಗ ಜಿಲ್ಲೆಯ ರಮೇಶ್ ಹತ್ತಿಕಾಳ ಅವರಿಗೆ 55 ಸಾವಿರ ರೂ. ವಂಚನೆ ಮಾಡಲಾಗಿದೆ. ರವಿ ಡಿ. ಚನ್ನಣ್ಣನವರ್ ಹಾಗೂ ಸಿಆರ್‌ಪಿಎಫ್ ಯೋಧನ ಹೆಸರು ಹೇಳಿಕೊಂಡು ಇವರಿಗೆ ಆನ್‌ಲೈನ್ ಮೂಲಕ ವಂಚನೆ ಮಾಡಲಾಗಿದೆ. ಫೇಸ್‌ಬುಕ್‌ನಲ್ಲಿ ರವಿ ಡಿ. ಚನ್ನಣ್ಣನವರ್ ಹಾಗೂ ಸಿಆರ್‌ಪಿಎಫ್ ಯೋಧ ಸಂತೋಷ್ ಕುಮಾರ್ ಎಂಬ ಹೆಸರಿನಲ್ಲಿ ನಕಲಿ ಖಾತೆ ಕ್ರಿಯೇಟ್ ಮಾಡಿ, ನಂಬಿಸಿ, 55 ಸಾವಿರ ರೂ. ವಂಚಿಸಲಾಗಿದೆ.
ವಂಚನೆ ನಡೆದಿದ್ದು ಹೇಗೆ?
ರಮೇಶ್ ಹತ್ತಿಕಾಳ ಎಂಬುವರಿಗೆ ರವಿ ಡಿ. ಚನ್ನಣ್ಣನವರ್ ಅವರ ಹೆಸರಿನ ಫೇಸ್‌ಬುಕ್ ನಕಲಿ ಖಾತೆ ಮೂಲಕ ಮೆಸೇಜ್ ಮಾಡಲಾಗಿದೆ. “ನನ್ನ ಫ್ರೆಂಡ್, ಸಿಆರ್‌ಪಿಎಫ್ ಯೋಧ ಸಂತೋಷ್ ಕುಮಾರ್ ಅವರಿಗೆ ಟ್ರಾನ್ಸ್‌ಫರ್ ಆಗಿದೆ. ಅವರು ಕಡಿಮೆ ಬೆಲೆಗೆ ತಮ್ಮ ಫರ್ನಿಚರ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ನಿಮಗೆ ಅವರ ನಂಬರ್ ಕೊಡುತ್ತೇನೆ, ಅವರ ಜತೆ ವ್ಯವಹಾರ ಮಾಡಿಕೊಳ್ಳಿ” ಎಂದು ಮೆಸೇಜ್ ಕಳುಹಿಸಲಾಗಿದೆ.
ವಾಟ್ಸ್‌ಆ್ಯಪ್‌ನಲ್ಲೂ ರಮೇಶ್ ಅವರ ಜತೆ ದುಷ್ಕರ್ಮಿಗಳು ಚಾಟ್ ಮಾಡಿದ್ದಾರೆ. ಐಪಿಎಸ್ ಅಧಿಕಾರಿ ಹಾಗೂ ಯೋಧ ಎಂಬುದಾಗಿ ಮೆಸೇಜ್‌ನಲ್ಲಿ ನಂಬಿಸಿದ್ದಾರೆ. ಫರ್ನಿಚರ್‌ಗೆ 80 ಸಾವಿರ ರೂ. ನಿಗದಿಪಡಿಸಲಾಗಿದೆ. ಇವರನ್ನು ನಂಬಿದ ರಮೇಶ್ ಅವರು 55 ಸಾವಿರ ರೂ. ಆನ್‌ಲೈನ್ ಪೇಮೆಂಟ್ ಮಾಡಿದ್ದಾರೆ. ಯಾವಾಗ ದುಷ್ಕರ್ಮಿಗಳ ಜತೆ ಸಂಪರ್ಕ ಸಾಧಿಸಲು ಕಷ್ಟವಾಯಿತೋ, ದುಡ್ಡು ಕಳೆದುಕೊಂಡಿರುವುದು ಅರಿವಾಗಿದೆ. ಕೊನೆಗೆ, ಗದಗ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Cyber Crime: ನೀವು ಆರ್ಡರ್ ಮಾಡಿಲ್ಲದ ಪಾರ್ಸೆಲ್ ಬಂದಿದೆಯಾ? ಹುಷಾರು! ಹೀಗೊಂದು ಆನ್‌ಲೈನ್ ವಂಚನೆ
ಇತ್ತೀಚೆಗೆ ಆನ್‌ಲೈನ್‌ನಲ್ಲಿ ಜನರಿಗೆ ವಂಚಿಸುವ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಮಾತುಗಳನ್ನು ನಂಬಬಾರದು, ಮೊಬೈಲ್‌ಗೆ ಕರೆ ಮಾಡುವವರಿಗೆ ಒಟಿಪಿ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ನೀಡಬಾರದು, ಮೆಸೇಜ್‌ಗಳ ಮೂಲಕ ಕಳುಹಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಬಾರದು ಎಂದು ಎಷ್ಟು ಜಾಗೃತಿ ಮೂಡಿಸಿದರೂ ಜನ ಮೋಸ ಹೋಗುತ್ತಿದ್ದಾರೆ. ಇದರ ಜತೆಗೆ ಆನ್‌ಲೈನ್ ವಂಚನೆಗೆ ಸರ್ಕಾರಗಳೂ ಕಡಿವಾಣ ಹಾಕಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ