Site icon Vistara News

Patrika Bhavan: ವಸ್ತುನಿಷ್ಠ ಸುದ್ದಿ, ಸತ್ಯದ ವರದಿ ಮಾತ್ರ ಸಮಾಜಮುಖಿ: ಸಿದ್ದರಾಮಯ್ಯ

Cm Siddaramaiah lays foundation stone of new Press Building and Training Centre

ಮೈಸೂರು: ಊಹಾ-ಪೋಹ ಸುದ್ದಿ ಮಾಡುವುದೇ ವೃತ್ತಿಪರತೆಯಾ? ಕಲ್ಪಿಸಿಕೊಂಡು, ಊಹಿಸಿಕೊಂಡು ಸುದ್ದಿ ಮಾಡುವವರು ಹೆಚ್ಚಾಗಿರುವುದು ಕೆಟ್ಟ ಬೆಳವಣಿಗೆ. ಸಂವಿಧಾನ ವಿರೋಧಿಗಳನ್ನೂ ಪ್ರಶ್ನಿಸದೇ ಹೋದರೆ, ಅವರನ್ನೂ ನೀವು ಗೌರವದಿಂದ ನಡೆಸಿಕೊಂಡರೆ ನಿಮ್ಮನ್ನು ಸಮಾಜದ ನಾಲ್ಕನೇ ಅಂಗ ಅಂತ ಕರೆಯೋಕೆ ಆಗುತ್ತದೆಯೇ? ವಸ್ತುನಿಷ್ಠ ಸುದ್ದಿ, ಸತ್ಯದ ವರದಿ ಮಾತ್ರ (Patrika Bhavan) ಸಮಾಜಮುಖಿಯಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನ ಮತ್ತು ತರಬೇತಿ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಯಾಕಿನ್ನೂ ಅಸಮಾನತೆ ಇದೆ, ಸಂವಿಧಾನದ ವಿರುದ್ಧ ಮಾತಾಡುವವರೂ ಇದ್ದಾರೆ. ಇಂಥವರಿಂದ ಸಮಾಜಕ್ಕೆ ಆಗುವ ಹಾನಿಯನ್ನು ಪತ್ರಕರ್ತರು ವಿಶ್ಲೇಷಿಸಿ ಬರೆಯಬೇಕು ಎಂದು ಕರೆ ನೀಡಿದರು.

ಇವತ್ತು ಪತ್ರಿಕಾ ಕ್ಷೇತ್ರದಲ್ಲಿ ವೃತ್ತಿಪರತೆ ಇಲ್ಲವಾಗಿ ವ್ಯಾಪಾರ ಹೆಚ್ಚಾಗಿರುವುದು ಅನಾರೋಗ್ಯಕಾರಿ ಬೆಳವಣಿಗೆ. ಸಣ್ಣ ಪತ್ರಿಕೆಗಳ ತವರೂರು ಮೈಸೂರು ಪತ್ರಿಕಾ ವೃತ್ತಿ ಪರತೆಗೆ ಹೆಸರಾಗಿತ್ತು ಎಂದು ಸ್ಮರಿಸಿದ ಅವರು, ಓದುಗರು ಮಾಧ್ಯಮಗಳ ಬಗ್ಗೆ ಕುತೂಹಲ, ಆಸಕ್ತಿ ಕಳೆದುಕೊಂಡರೆ ಅದಕ್ಕೆ ವೃತ್ತಿಪರತೆ ಇಲ್ಲವಾಗಿದ್ದೇ ಕಾರಣ. ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದನ್ನೂ ಸುದ್ದಿ ಮಾಡ್ತೀರಿ, ಚರ್ಚೆ ಮಾಡ್ತೀರಿ. ಕಾಗೆ ಕುಳಿತರೆ ನಿಮಗೇನು ನಷ್ಟ? ಸಮಾಜಕ್ಕೇನು ನಷ್ಟ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Yuva Nidhi Scheme: ಡಿ. 26ರಿಂದ ಯುವನಿಧಿ ನೋಂದಣಿ ಶುರು; ಜ. 12ರಂದು ಖಾತೆಗೆ ಹಣ ಜಮೆ

ಗಂಡ ಹೆಂಡತಿ ಜಗಳ ಸುದ್ದಿ ಮಾಡ್ತೀರಲ್ಲಾ ಅದರಿಂದ ಸಮಾಜಕ್ಕೆ ಏನು ಪ್ರಯೋಜನ? ಇಂಥದ್ದನ್ನೆಲ್ಲಾ ಸ್ಟೋರಿ ಮಾಡಿದರೆ ಮಾಧ್ಯಮಗಳ ಬಗ್ಗೆ ಜನ ಕುತೂಹಲ ಕಳೆದುಕೊಳ್ಳದೆ ಇನ್ನೇನಾಗುತ್ತದೆ ಎಂದ ಅವರು, ನಾನು ಶಂಕುಸ್ಥಾಪನೆ ಮಾಡಿದ ಪತ್ರಿಕಾ ಭವನ ಮತ್ತು ತರಬೇತಿ ಕೇಂದ್ವವನ್ನು ನಾನೇ ಉದ್ಘಾಟಿಸುತ್ತೇನೆ. ಅದಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಪರಮಪೂಜ್ಯ ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ಟಿ.ರವಿಕುಮಾರ್ ಅವರು ವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಜಿಲ್ಲೆಯ ಶಾಸಕರಾದ ಜಿ.ಟಿ.ದೇವೇಗೌಡ, ಶ್ರೀವತ್ಸ, ತನ್ವೀರ್ ಸೇಠ್, ಹರೀಶ್ ಗೌಡರು, ರವಿಶಂಕರ್, ಅನಿಲ್ ಚಿಕ್ಕಮಾದು, ಆಶ್ರಯ ಸಮಿತಿ ಅಧ್ಯಕ್ಷರಾದ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮರಿತಿಬ್ಬೇಗೌಡರು, ಎ.ಎಚ್.ವಿಶ್ವನಾಥ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ | Cabinet meeting : ಒಂದೇ ಲಕ್ಷ ಕೊಟ್ರೆ ಸಾಕು, ಬಡವರಿಗೆ ಮನೆ; ಇದು ಕಾಂಗ್ರೆಸ್‌ನ 6ನೇ ಗ್ಯಾರಂಟಿ

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಮದನ್ ಗೌಡ, ಪತ್ರಕರ್ತರ ಸಂಘಗಳ ಒಕ್ಕೂಟದ ಮುಖಂಡರಾದ ಮಲ್ಲಿಕಾರ್ಜುನಯ್ಯ ಸೇರಿ ಹಲವು ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version