ಬೆಂಗಳೂರು: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಂಘರ್ಷದ (Israel Palestine War) ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದವರನ್ನು ಭಾರತಕ್ಕೆ ಕರೆತರುವ ಆಪರೇಷನ್ ಅಜಯ್ (Operation Ajay) ಕಾರ್ಯಾಚರಣೆ ಮುಂದುವರಿದಿದೆ. ಮೂರನೇ ಹಂತದ ಕಾರ್ಯಾಚರಣೆಯಲ್ಲಿ ಕನ್ನಡಿಗರು ಸೇರಿ 197 ನಾಗರಿಕರನ್ನು ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ.
ಭಾರತದ 197 ಜನರನ್ನು ಹೊತ್ತ ವಿಮಾನವು ಶನಿವಾರ ತಡರಾತ್ರಿ (ಅಕ್ಟೋಬರ್ 14) ದೆಹಲಿಗೆ ಆಗಮಿಸಿದ್ದು, ಇಸ್ರೇಲ್‌ನಿಂದ ಸುರಕ್ಷಿತವಾಗಿ ಬಂದ ಜನ ಭಾರತ್ ಮಾತಾ ಕೀ ಜೈ ಎಂಬುದು ಸೇರಿ ಹಲವು ಘೋಷಣೆ ಕೂಗಿದರು. ಇನ್ನು ಕನ್ನಡಿಗರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದರು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕನ್ನಡಿಗರು, ಸುರಕ್ಷಿತವಾಗಿ ವಾಪಸ್ ಕರೆತಂದಿದ್ದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.
2 ಹಂತದಲ್ಲಿ 447 ಜನರ ರಕ್ಷಣೆ
ಸಮರ ಪೀಡಿತ ಇಸ್ರೇಲ್‌ನಿಂದ ಆಪರೇಷನ್ ಅಜಯ್ ಕಾರ್ಯಾಚರಣೆಯ ಅಡಿಯಲ್ಲಿ ಮೊದಲ ಹಂತದಲ್ಲಿ ಕನ್ನಡಿಗರು ಸೇರಿ 212 ನಾಗರಿಕರು ಹಾಗೂ ಎರಡನೇ ಹಂತದಲ್ಲಿ 235 ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗಿದೆ. ಆಪರೇಷನ್ ಅಜಯ್ ಕಾರ್ಯಾಚರಣೆಯು ಅಕ್ಟೋಬರ್ 11ರಂದು ಆರಂಭಿಸಲಾಗಿದ್ದು, ಇನ್ನೂ ಹಲವು ಹಂತಗಳಲ್ಲಿ ಸಾವಿರಾರು ಭಾರತೀಯರನ್ನು ಕರೆತರಲಾಗುತ್ತದೆ ಎಂದು ತಿಳಿದುಬಂದಿದೆ.
#OperationAjay moves forward.
— Dr. S. Jaishankar (@DrSJaishankar) October 14, 2023
197 more passengers are coming back to India. pic.twitter.com/ZQ4sF0cZTE
ಇದನ್ನೂ ಓದಿ: Israel Palestine War: ಹಮಾಸ್ ಉಗ್ರರ ಪರ ಪೋಸ್ಟ್; ಉತ್ತರ ಪ್ರದೇಶದಲ್ಲಿ ಮೌಲ್ವಿಯ ಬಂಧನ
ಇಸ್ರೇಲ್‌ನಲ್ಲಿ ಹಮಾಸ್ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಈಗ ಗಾಜಾಪಟ್ಟಿ ಮೇಲೆ ಸಮರ ಸಾರಿದೆ. ಗಾಜಾ ಗಡಿಯಲ್ಲಿ ನೂರಾರು ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿರುವ ಇಸ್ರೇಲ್ ಸೇನೆಯು, ಅಕ್ಷರಶಃ ಯುದ್ಧ ಸಾರಿದೆ. ಇದಕ್ಕೆ ನಿದರ್ಶನ ಎಂಬಂತೆ ಹಮಾಸ್ ಏರ್ ಫೋರ್ಸ್ ಮುಖ್ಯಸ್ಥ ಮುರಾದ್ ಅಬು ಮುರಾದ್‌ನನ್ನೇ ಹತ್ಯೆಗೈಯಲಾಗಿದೆ. ಅಕ್ಟೋಬರ್ 7ರಿಂದ ಇಸ್ರೇಲ್ ಹಾಗೂ ಹಮಾಸ್ ಉಗ್ರರ ಮಧ್ಯೆ ಸಂಘರ್ಷ ಏರ್ಪಟ್ಟಿದ್ದು, ಇದುವರೆಗೆ ಎರಡೂ ದೇಶಗಳಲ್ಲಿ ಮೃತಪಟ್ಟವರ ಸಂಖ್ಯೆ 4 ಸಾವಿರ ದಾಟಿದೆ.