ಬೆಳಗಾವಿ: ಕೈಯಲ್ಲಿ ದೊಣ್ಣೆ, ಅರಿವಳಿಕೆ ಗನ್, ಬಲೆ ಇಷ್ಟೆಲ್ಲಾ ಹಿಡಿದು ಸೋಮವಾರ ಆಪರೇಷನ್ ಚೀತಾ (Operation Cheetah) ಕಾರ್ಯಾಚರಣೆಗಾಗಿ ನೂರಾರು ಸಿಬ್ಬಂದಿ ಕಾಯುತ್ತಾ ನಿಂತಿದ್ದರೂ ನೋಡ ನೋಡುತ್ತಿದ್ದಂತೆ ಚಿರತೆಯೊಂದು ಕಣ್ಣಿಗೆ ಕಂಡು ಕಾಣದಂತೆ ಮಾಯವಾಗಿದೆ. ಈ ನಿಟ್ಟಿನಲ್ಲಿ ಬೆಳಗಾವಿ ನಗರದಲ್ಲಿ ಸಾರ್ವಜನಿಕರು ಮತ್ತಷ್ಟು ಭಯಗೊಂಡಿದ್ದಾರೆ.
ಹಿಂಡಲಗಾ ರಸ್ತೆಯಲ್ಲಿ ಖಾಸಗಿ ಕಂಪನಿಯ ಬಸ್ ಚಾಲಕರೊಬ್ಬರ ಮೊಬೈಲ್‌ನಲ್ಲಿ ಬೆಳಗ್ಗೆ 6.15ಕ್ಕೆ ಚಿರತೆ ಚಲನವಲನ ಸೆರೆಯಾಗಿತ್ತು. ಕೂಗಳತೆ ದೂರದಲ್ಲಿಯೇ ಚಿರತೆ ರಸ್ತೆ ದಾಟಿ ಹೋಗಿದ್ದ ದೃಶ್ಯ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಆಪರೇಷನ್ ಚೀತಾ ಕಾರ್ಯಾಚರಣೆಯಲ್ಲಿ ಇನ್ನೇನು ಚಿರತೆ ಕೈಗೆ ಸಿಕ್ಕಿತು ಎನ್ನುವಾಗಲೇ ಹತ್ತಾರು ಸಿಬ್ಬಂದಿ ಎದುರಿಗೆ ಮುಖ್ಯ ರಸ್ತೆ ದಾಟಿ ಗಾಲ್ಫ್ ಮೈದಾನಕ್ಕೆ ನುಗ್ಗಿದೆ. ಕ್ಯಾಂಪ್ ಪ್ರದೇಶದಿಂದ ಮತ್ತೆ ಗಾಲ್ಫ್ ಮೈದಾನದ ಒಳಗೆ ಚಿರತೆ ನುಗ್ಗಿದ್ದು, ಕೂಂಬಿಂಗ್ ಆರಂಭಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಹಿರಿಯ ಅಧಿಕಾರಿಗಳು
ಚಿರತೆ ಹಿಡಿಯಲು ಬಲೆ, ಅರಿವಳಿಕೆ ಗನ್ ಹಾಗೂ ಲಾಠಿ ಹಿಡಿದು ಕೊಂಬಿಂಗ್ ನಡೆಸಿದ್ದು, ಸಿಡಿಮದ್ದು ಸಿಡಿಸಿ, ಶಿಳ್ಳೆ ಕೂಗು ಹೊಡೆದು ಚಿರತೆ ಸೆರೆಗೆ ಪ್ರಯತ್ನಿಸಲಾಗುತ್ತಿದೆ. ಚಿರತೆ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಡಿಸಿ ನಿತೇಶ ಪಾಟೀಲ್, ಡಿಸಿಪಿ ರವೀಂದ್ರ ಗಡಾದಿ ಸೇರಿ ಹಿರಿಯ ಅಧಿಕಾರಿಗಳು ಆಗಮಿಸಿದ್ದಾರೆ.
ಹಿಂದಿನ ಕಾರ್ಯಾಚರಣೆ ವಿಫಲ
ಜಾಧವ್ ನಗರದ ಬಳಿ ಆಗಸ್ಟ್ ೫ರಂದು ಕಾರ್ಮಿಕರೊಬ್ಬರ ಮೇಲೆ ದಾಳಿ ಮಾಡಿದ ಚಿರತೆ ಬಳಿಕ ನಾಪತ್ತೆಯಾಗಿತ್ತು. ಜಾಧವ್ ನಗರದ ಗಾಲ್ಫ್ ಮೈದಾನದಲ್ಲಿ ಈ ಚಿರತೆ ಅಡಗಿಕೊಂಡಿದೆ ಎಂದು 20ಕ್ಕೂ ಹೆಚ್ಚು ದಿನಗಳಿಂದ ಹುಡುಕಾಟ ನಡೆಸಲಾಗಿತ್ತು. ಗಾಲ್ಫ್ ಮೈದಾನ ಇರುವ 250 ಎಕರೆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು.
ಇದಕ್ಕಾಗಿ 22 ಟ್ರ್ಯಾಪ್ ಕ್ಯಾಮೆರಾ, 8 ಬೋನುಗಳನ್ನು ಇರಿಸಲಾಗಿತ್ತು. ಚಿರತೆಗಾಗಿ ೫೦ ಮಂದಿ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಕಾವಲು ಕಾಯುತ್ತಿದ್ದರು. ಆದರೂ ಚಿರತೆ ಕಣ್ಣಿಗೆ ಬಿದ್ದಿರಲಿಲ್ಲ. ಈ ನಡುವೆ, ಆಗಸ್ಟ್ ೭ ಮತ್ತು ೮ರಂದು ಸಿಸಿ ಕ್ಯಾಮೆರಾದಲ್ಲಿ ಚಿರತೆ ಸೆರೆಯಾಗಿತ್ತು. ಚಿರತೆಯ ಕಾರಣದಿಂದಾಗಿ ಜಾಧವ ನಗರ ಹಲವು ದಿನಗಳ ಕಾಲ ಪೂರ್ಣವಾಗಿ ಬಂದ್ ಆಗಿತ್ತು. ಶಾಲೆಗಳನ್ನೂ ಮುಚ್ಚಲಾಗಿತ್ತು.
ಆಗಸ್ಟ್ 19ರಂದು ಬೃಹತ್ ಕಾರ್ಯಾಚರಣೆಯ ಮೂಲಕ ಹುಡುಕುವ ಪ್ರಯತ್ನವೊಂದು ನಡೆಯಿತು. ಆದರೆ, ಆಗಲೂ ಚಿರತೆ ಕಣ್ಣಿಗೆ ಕಾಣಲಿಲ್ಲ. ಗಾಲ್ಫ್ ಪ್ರದೇಶದಿಂದ ಚಿರತೆ ಬೇರೆಡೆಗೆ ಹೋಗಿರಬಹುದು ಎಂದು ಭಾವಿಸಲಾಗಿತ್ತು. ಈಗ ಮತ್ತೆ ಆಗಸ್ಟ್ 22ರ ಬೆಳಗ್ಗೆ ಖಾಸಗಿ ಕಂಪನಿಯ ಬಸ್ ಚಾಲಕರೊಬ್ಬರ ಮೊಬೈಲ್‌ನಲ್ಲಿ ಚಿರತೆ ಚಲನವಲನ ಸೆರೆಯಾಗಿತ್ತು. ಹಿಂಡಲಗಾದ ರಸ್ತೆಯಲ್ಲಿ ಬಸ್ ಓಡಿಸಿಕೊಂಡು ಹೋಗುವಾಗ ಚಿರತೆಯೊಂದು ಮುಖ್ಯರಸ್ತೆ ದಾಟಿ ಹೋಗಿತ್ತು.
ಇದನ್ನೂ ಓದಿ | Operation Cheetah | ಹಿಂಡಲಗಾದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; 22 ಶಾಲೆಗಳಿಗೆ ರಜೆ ಘೋಷಣೆ