Site icon Vistara News

Operation Hasta : 40 ನಾಯಕರ ಅರ್ಜಿ ನನ್ನ ಮುಂದಿದೆ; ಸ್ಥಳೀಯರ ಜತೆ ಚರ್ಚಿಸಿ ಸೇರ್ಪಡೆ: ಡಿ.ಕೆ. ಶಿವಕುಮಾರ್

congress party joining programme in DK Shivakumar and Rudrappa lamani

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ (Karnataka Politics) ಮತ್ತೆ ಆಪರೇಷನ್‌ ಹಸ್ತ (operation Hasta) ಶುರುವಾಗಿದೆ ಎಂಬ ಸುಳಿವನ್ನು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (KPCC president and Deputy CM DK Shivakumar) ನೀಡಿದ್ದಾರೆ. ಸುಮಾರು 40ಕ್ಕೂ ಹೆಚ್ಚು ನಾಯಕರ ಅರ್ಜಿ ನನ್ನ ಮುಂದಿದೆ. ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಿ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ, ಬಿಜೆಪಿ ಒಂದು ಟೀಂ ಕಾಂಗ್ರೆಸ್‌ ಶಾಸಕರನ್ನು ಭೇಟಿ ಮಾಡುತ್ತಿದೆ ಎಂಬ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

ಬಿಜೆಪಿ ಮುಖಂಡ, ಮಾಜಿ ಶಾಸಕ ರಾಮಪ್ಪ ಲಮಾಣಿ (Ramappa Lamani) ಅವರನ್ನು ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್‌, ಬೀದರ್‌ನಿಂದ ಚಾಮರಾಜನಗರದವರೆಗೂ ಪಕ್ಷಕ್ಕೆ ಬರುತ್ತಾ ಇದ್ದಾರೆ. ಬಿಜೆಪಿ – ಜೆಡಿಎಸ್‌ ಮೈತ್ರಿಗೆ (BJP JDS alliance) ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ ಎಂದು ಹೇಳಿದರು.

ಇದರ ನಡುವೆ 2024ರಲ್ಲಿ ವಿಧಾನಸಭಾ ಚುನಾವಣೆ (Assembly election) ನಡೆಯಲಿದೆ ಎಂದು ಕೆಲವರು ಹೇಳುತ್ತಾ ಇದ್ದಾರೆ. ಆದರೆ, ಅಲ್ಲಿನ ಮೈತ್ರಿಗೆ ವಿರೋಧ ವ್ಯಕ್ತಪಡಿಸಿ ನಮ್ಮ ಕಾಂಗ್ರೆಸ್‌ ಪಕ್ಷಕ್ಕೆ ಬರಲು ಹಲವಾರು ಮಂದಿ ಸಿದ್ಧರಾಗಿದ್ದಾರೆ. ಬಿಜೆಪಿಯ ಒಂದು ಟೀಮ್ ನಮ್ಮ ಶಾಸಕರನ್ನು ಭೇಟಿ ಮಾಡುತ್ತಿದೆ‌. ಸಿನಿಮಾ ಸ್ಟೈಲ್‌ನಲ್ಲಿ ಬಂದು ಭೇಟಿ ಮಾಡಿ ಹೋಗುತ್ತಿದ್ದಾರೆ. ಯಾರು ಯಾರನ್ನು ಭೇಟಿ ಮಾಡಿದ್ದಾರೆ ಎಂದು ನಮ್ಮ ಶಾಸಕರು ಹೇಳುತ್ತಾ ಇದ್ದಾರೆ. ಏನು ಏನು ಆಗುತ್ತಿದೆ ಎಂಬ ಮಾಹಿತಿ ನನಗಿದೆ‌. ಇದರ ಬಗ್ಗೆ ಮಾತನಾಡುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ವಿಕೋಪ ಅಲರ್ಟ್‌ಗೆ ಗಲಿಬಿಲಿ

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿಕೋಪ ಅಲರ್ಟ್ ಮೆಸೇಜ್ ಜೋರಾಗಿ ಎಲ್ಲರ ಮೊಬೈಲ್‌ನಲ್ಲಿ ಭಾರಿಸ ತೊಡಗಿತು. ಇದರಿಂದ ಕಾಂಗ್ರೆಸ್‌ ನಾಯಕರಾದಿಯಾಗಿ ಅಲ್ಲಿದ್ದವರೆಲ್ಲರೂ ಒಮ್ಮೆ ಗಲಿಬಿಲಿಗೊಂಡರು. ಈ ವೇಳೆ ಡಿ.ಕೆ. ಶಿವಕುಮಾರ್ ಭಾಷಣ‌ ಮಾಡುತ್ತಿದ್ದರು. ಆಗ ಮೊಬೈಲ್ ಅಲರಾಂ ಬಡಿದುಕೊಳ್ಳಲಾರಂಭಿಸಿದೆ. ಏಕಕಾಲಕ್ಕೆ ಹತ್ತಾರು ಮೊಬೈಲ್‌ಗಳು ಸದ್ದು ಮಾಡಿವೆ. ಕೇಂದ್ರ ಸರ್ಕಾರದಿಂದ ವಿಕೋಪ ಎಚ್ಚರಿಕೆ ನೀಡುವ ಮೊಬೈಲ್ ಅಲರ್ಟ್ ಸದ್ದು ಅದಾಗಿತ್ತು. ಆಗ ಮಾಧ್ಯಮದವರು, ಇದು ವಿಕೋಪ ಮಾಹಿತಿ ಅಲರಾಂ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಬಿಜೆಪಿಯವರೂ ಅಲರ್ಟ್ ಆಗಲಿ ಬಿಡಿ. ಜೆಡಿಎಸ್ ಬಿಜೆಪಿ ಮೈತ್ರಿ ಆಗಿದೆ ಎಂದು ನಮ್ಮನ್ನು ಅಲರ್ಟ್ ಮಾಡುತ್ತಾ ಇದ್ದಾರೆ ಎಂದು ನಗೆ ಚಟಾಕಿ ಹಾರಿಸಿದರು.

ಕಾಂಗ್ರೆಸ್‌ ಸೇರ್ಪಡೆಗೊಂಡ ರಾಮಪ್ಪ ಲಮಾಣಿ

ಕೆಪಿಸಿಸಿಯಲ್ಲಿ ಮಾಜಿ ಶಾಸಕ ರಾಮಪ್ಪ ಲಮಾಣಿ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಎಚ್‌.ಕೆ. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಚಂದ್ರಪ್ಪ, ಸಲೀಂ ಅಹ್ಮದ್, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: Caste Census Report : ಜಾತಿ ಗಣತಿಗೆ ಸರ್ಜರಿ! ವರದಿ ಜಾರಿಗೆ ಕೈಕಮಾಂಡ್‌ ಪಟ್ಟು; ರಾಜ್ಯ ಸರ್ಕಾರಕ್ಕೆ ಇಕ್ಕಟ್ಟು

ಬಿಜೆಪಿ ಇನ್ನು ಧೂಳಿಪಟ ಆಗಲಿದೆ: ಲಮಾಣಿ

ಈ ವೇಳೆ ಮಾತನಾಡಿದ ರಾಮಪ್ಪ ಲಮಾಣಿ, ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಕಾಂಗ್ರೆಸ್‌ನವರೇ ನನ್ನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿದರು. ನಾನು ಯಾವುದೇ ಕಂಡೀಷನ್ ಇಟ್ಟಿಲ್ಲ. ನೋವು ತೋರಿಸಲು ನಾನು ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ. ಬಿಜೆಪಿಯವರೇ ನಾನು ಕಾಂಗ್ರೆಸ್ ಸೇರ್ಪಡೆ ಆಗುವಂತೆ ಮಾಡಿದರು. ಬಿಜೆಪಿ ಇನ್ನು ಧೂಳಿಪಟ ಆಗಲಿದೆ. ಕಾಂಗ್ರೆಸ್ ಬಲಪಡಿಸಲು ನಾನು ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರದ ಬಲವರ್ಧನೆಗೆ ಪ್ರಯತ್ನ ಮಾಡುತ್ತೇನೆ. ಜಗದೀಶ್ ಶೆಟ್ಟರ್ ಸಾಕಷ್ಟು ಮಾಜಿ ಶಾಸಕರಿಗೆ ಗಾಳ ಹಾಕಿದ್ದಾರೆ. ಡಿ.ಕೆ. ಶಿವಕುಮಾರ್ ಕೂಡಾ ಸಾಕಷ್ಟು ಮಂದಿಗೆ ಗಾಳ ಹಾಕಿದ್ದಾರೆ ಎಂದು ಹೇಳಿದರು.

Exit mobile version