ಬೆಂಗಳೂರು: ಮುಂಬರುವ ಬಿಬಿಎಂಪಿ ಹಾಗೂ ಲೋಕಸಭಾ ಚುನಾವಣೆ (Lok Sabha Election 2024) ದೃಷ್ಟಿಯನ್ನು ಇಟ್ಟುಕೊಂಡು ಆಪರೇಷನ್ ಹಸ್ತಕ್ಕೆ (Operation Hasta) ಕೈಹಾಕಿರುವ ಕಾಂಗ್ರೆಸ್ ಈಗ ಪದ್ಮನಾಭ ನಗರದಲ್ಲಿ ಕೈಚಳಕ ತೋರಿಸಿದೆ. ಮಾಜಿ ಡಿಸಿಎಂ, ಬಿಜೆಪಿ ಹಿರಿಯ ನಾಯಕ, ಪದ್ಮನಾಭನಗರ ಶಾಸಕ ಆರ್. ಅಶೋಕ್ (Padmanabhanagar MLA R Ashok) ಸಾಮ್ರಾಜ್ಯಕ್ಕೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (KPCC president and Deputy CM DK Shivakumar) ಮತ್ತು ತಂಡ ಲಗ್ಗೆ ಇಟ್ಟಿದೆ. ಅಶೋಕ್ ಶಿಷ್ಯರನ್ನೇ ಹೈಜಾಕ್ ಮಾಡಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಏಟು ನೀಡಲು ರಣತಂತ್ರವನ್ನು ಹೆಣೆಯಲಾಗಿದೆ. ಈ ಮೂಲಕ ಅಶೋಕ್ ಅವರ ಲೆಫ್ಟ್ – ರೈಟ್ ನಾಯಕರನ್ನೇ ಆಪರೇಷನ್ ಮೂಲಕ ಡಿಕೆಶಿ ಸೆಳೆದಿದ್ದಾರೆ.
ಪದ್ಮನಾಭನಗರ ಕ್ಷೇತ್ರದ ಪ್ರಮುಖ ನಾಯಕರನ್ನು ಆಪರೇಷನ್ ಹಸ್ತದ ಭಾಗವಾಗಿ ಕಾಂಗ್ರೆಸ್‌ಗೆ ಸೆಳೆಯಲಾಗಿದೆ. ಆರ್. ಅಶೋಕ್ ಕೋಟೆಯನ್ನು ಈಗ ಡಿ.ಕೆ. ಶಿವಕುಮಾರ್ ಅಕ್ಷರಶಃ ಛಿದ್ರ ಮಾಡಿದ್ದಾರೆ. ಅಶೋಕ್ ಗೆಲುವಿಗೆ ರೂವಾರಿಗಳಾಗಿದ್ದವರನ್ನೇ ಈಗ ಕಾಂಗ್ರೆಸ್‌ಗೆ ಸೆಳೆದುಕೊಂಡಿದ್ದಾರೆ. ಈ ಮೂಲಕ ಅಶೋಕ್‌ಗೆ ಚೆಕ್‌ಮೇಟ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ.
ಇದನ್ನೂ ಓದಿ: Minister D Sudhakar : ಡಿ. ಸುಧಾಕರ್ ಮೇಲೆ ಜಾತಿ ನಿಂದನೆ ಕೇಸ್ ದಾಖಲಾಗಿದೆಯಾ ಎಂದು ಕೇಳಿದ ಸಿಎಂ!
ಕನಕಪುರದ ಸ್ಪರ್ಧೆ ಎಫೆಕ್ಟ್?
ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election) ಆರ್. ಅಶೋಕ್ ಅವರು ಪದ್ಮನಾಭ ನಗರದ ಜತೆಗೆ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ (Kanakapura Assembly Constituency) ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ವಿರುದ್ಧ ಸ್ಪರ್ಧೆ ಮಾಡಿದ್ದರು. ಈಗ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಗೇಮ್ ಪ್ಲ್ಯಾನ್ ಮಾಡಲು ಡಿಕೆಶಿ ಮುಂದಾಗಿದ್ದಾರೆ. ಅಶೋಕ್ ಅವರ ಪರಮಾಪ್ತರಲ್ಲಿ ಕೆಲವರು ಶುಕ್ರವಾರ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ.
ಮಾಜಿ ಉಪ ಮೇಯರ್, ಮಾಜಿ ಕಾರ್ಪೊರೇಟರ್‌ಗಳು ಸೇರಿದಂತೆ 10 ಜನರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾಜಿ ಸಚಿವ, ಹಾಲಿ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಬೆಂಬಲಿಗರ ಬಳಿಕ ಈಗ ಆರ್. ಅಶೋಕ್ ಬೆಂಬಲಿಗರಿಗೆ ಗಾಳ ಹಾಕಲಾಗಿದೆ.
ಡಿಕೆಶಿಗೆ ರಾಮಲಿಂಗಾರೆಡ್ಡಿ ಸಾಥ್
ಡಿ.ಕೆ. ಶಿವಕುಮಾರ್ ಅವರ ಆಪರೇಷನ್ ಹಸ್ತ ಕಾರ್ಯಾಚರಣೆಗೆ ಸಚಿವ ರಾಮಲಿಂಗಾರೆಡ್ಡಿ (Minister Ramalinga Reddy) ಸಾರಥಿಯಾಗಿದ್ದಾರೆ. ಈ ಎಲ್ಲ ಬೆಳವಣಿಗೆಯನ್ನು ಖುದ್ದು ರಾಮಲಿಂಗಾರೆಡ್ಡಿ ಅವರು ನಿಗಾವಹಿಸಿ ನೋಡಿಕೊಳ್ಳುತ್ತಿದ್ದಾರೆ. ಈ ಮೂಲಕ ಅಶೋಕ್ ಗೆಲುವಿಗೆ ಬೆನ್ನೆಲುಬಾಗಿದ್ದವರನ್ನೇ ಸೆಳೆದು ಅವರ ಬಲವನ್ನು ಕುಗ್ಗಿಸಲು ಮುಂದಾಗಲಾಗಿದೆ.
ಆಪರೇಷನ್‌ಗೆ ಬಿಜೆಪಿಯ 10 ಮಂದಿ ಬಲಿ!
ಮಾಜಿ ಉಪ ಮೇಯರ್, ಮಾಜಿ ಕಾರ್ಪೊರೇಟರ್‌ಗಳು ಸೇರಿದಂತೆ 10 ಮಂದಿ ಆಪರೇಷನ್ ಹಸ್ತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಸ್ಥಳೀಯ ಕೆಲವು ಮುಖಂಡರು ಅಶೋಕ್ ಜತೆ ಈಗಾಗಲೇ ಸಂಬಂಧವನ್ನು ಕಳೆದುಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ.
ಇದನ್ನೂ ಓದಿ:Minister D Sudhakar : ಸುಧಾಕರ್ ರಾಜೀನಾಮೆ ಕೊಡಲ್ಲ, ಇದೊಂದು ಸುಳ್ಳು ಕೇಸ್: ಡಿ.ಕೆ. ಶಿವಕುಮಾರ್
ಯಾರು ಈ ಹತ್ತು ಮಂದಿ?
- ಎಲ್. ಶ್ರೀನಿವಾಸ್ , ಮಾಜಿ ಉಪ ಮಹಾಪೌರ ಮತ್ತು ಪಾಲಿಕೆ ಮಾಜಿ ಸದಸ್ಯ
- ಆಂಜಿನಪ್ಪ, ನಗರಸಭೆ ಮಾಜಿ ಸದಸ್ಯ, ಬೊಮ್ಮನಹಳ್ಳಿ
- ಶೋಭಾ ಆಂಜಿನಪ್ಪ, ಬಿಬಿಎಂಪಿ ಮಾಜಿ ಸದಸ್ಯೆ ಪದ್ಮನಾಭನಗರ ವಾರ್ಡ್
- ಗೋವಿಂದ ರಾಜ್, ಗಣೇಶ ಮಂದಿರ ವಾರ್ಡ್, ಪಾಲಿಕೆ ಮಾಜಿ ಸದಸ್ಯ
- ಎಚ್. ನಾರಾಯಣ್, ಬಿಬಿಎಂಪಿ ಮಾಜಿ ಸದಸ್ಯ, ಹೊಸಕೆರೆಹಳ್ಳಿ ವಾರ್ಡ್ ಮತ್ತು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ
- ಎಚ್. ಸುರೇಶ್ ಪಾಲಿಕೆ ಮಾಜಿ ಸದಸ್ಯ, ಕುಮಾರಸ್ವಾಮಿ ಬಡಾವಣೆ ವಾರ್ಡ್
- ಲಕ್ಷ್ಮಿ ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ, ಸೋಮನಹಳ್ಳಿ ಜಿಲ್ಲಾ ಪಂಚಾಯತ್, ಬೆಂಗಳೂರು ನಗರ
- ರಂಗದಾಮೇಗೌಡ, ಮಾಜಿ ಅಧ್ಯಕ್ಷ, ಪದ್ಮನಾಭನಗರ ಮಂಡಲ ಬಿಜೆಪಿ ಘಟಕ
- ಪ್ರಸಾದ್ ಬಾಬು, ಜಿಡಿಎಸ್ ಮುಖಂಡ, (ಅಂತಾರಾಷ್ಟ್ರೀಯ ಮಾಜಿ ಕಬಡ್ಡಿ ಆಟಗಾರ)
- ಪವನ್, ಬಿಜೆಪಿ ಮುಖಂಡ, ಪದ್ಮನಾಭ ನಗರ