Site icon Vistara News

Operation Hasta : ಆಯನೂರು ಸೇರ್ಪಡೆ ಪಕ್ಕಾ? ʼಆಪರೇಷನ್‌ ಹಸ್ತʼ ಹೌದು ಅಂದ್ರು ಡಿಕೆಶಿ, ಸತೀಶ್!

Ayanur manjunath meets dk shivakumar

ಬೆಂಗಳೂರು/ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ಈಗ ಆಪರೇಷನ್‌ ಹಸ್ತದ್ದೇ (Operation Hasta) ಚರ್ಚೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly elections) 135 ಸೀಟು ಪಡೆಯುವ ಮೂಲಕ ಸಂಪೂರ್ಣ ಬಹುಮತ ಪಡೆದುಕೊಂಡರೂ ಆಪರೇಷನ್‌ ಕಮಲ (Operation Kamala) ಆತಂಕ ಹಾಗೂ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿಯಿಂದ ಶಾಸಕರನ್ನು ಸೆಳೆಯಲು ಕಾಂಗ್ರೆಸ್‌ ಮುಂದಾಗಿದೆ ಎಂದೇ ಹೇಳಲಾಗುತ್ತಿದೆ. ಇದರ ಭಾಗವಾಗಿ ಈಗ ವಿಧಾನ ಪರಿಷತ್ ಮಾಜಿ ಸದಸ್ಯ, ಹಾಲಿ ಜೆಡಿಎಸ್‌ನಲ್ಲಿರುವ ಆಯನೂರು ಮಂಜುನಾಥ್‌ (Ayanur Manjunath) ಅವರು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (Deputy CM and KPCC president DK Shivakumar) ಅವರನ್ನು ಭೇಟಿ ಮಾಡಿರುವುದು ಆಪರೇಷನ್‌ ಹಸ್ತಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಇನ್ನು ಡಿ.ಕೆ. ಶಿವಕುಮಾರ್‌ ಅವರು ಸಹ ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಸಚಿವ ಸತೀಶ್‌ ಜಾರಕಿಹೊಳಿ (Minister Satish Jarkiholi) ಅವರು ಆಪರೇಷನ್‌ ಹಸ್ತ ನಡೆಯುತ್ತಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಆಯನೂರು ಮಂಜುನಾಥ್ ಅವರು ಸದಾಶಿವನಗರದ ಡಿಸಿಎಂ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್ ಸೇರ್ಪಡೆ ವಿಚಾರದಲ್ಲಿ ಮಹತ್ವದ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಮುಂಬರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಅವರು ಬಹುತೇಕ ಕಾಂಗ್ರೆಸ್ ಸೇರ್ಪಡೆ ಆಗುವುದು ಖಚಿತ ಎನ್ನಲಾಗಿದೆ. ಆದರೆ, ಇದು ಶಿವಮೊಗ್ಗ ಕಾಂಗ್ರೆಸ್‌ ವಲಯದಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದೆ.

ಇದನ್ನೂ ಓದಿ: Minister Chaluvarayaswamy : ರಾಜ್ಯಪಾಲರಿಗೆ ಪತ್ರ ಬರೆದಿದ್ದ ಮೈಸೂರಿನ ಕೃಷಿ ಅಧಿಕಾರಿಗಳಿಬ್ಬರ ಸೆರೆ

ಕೋಳಿ ಕೇಳಿ ಮಸಾಲೆ ಅರೆಯೋಕಾಗುತ್ತಾ? ಡಿ.ಕೆ. ಶಿವಕುಮಾರ್‌

ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌, ಅವರವರ ಬದುಕು, ಅವರವರ ಭವಿಷ್ಯವನ್ನು ಅವರು ನೋಡಿಕೊಳ್ಳುತ್ತಾರೆ. ಮಾಜಿ ಸಚಿವ ಸಿ.ಟಿ. ರವಿ ಹಿರಿಯರಿದ್ದಾರೆ. ಕೈಕತ್ತರಿಸುತ್ತೇವೆ ಅಂತ ಅವರು ಬೆದರಿಕೆ ಹಾಕುತ್ತಿದ್ದಾರೆ. ನೀವು ಆಪರೇಷನ್‌ ಕಮಲ ಮಾಡಿದಾಗ ಏನಾಗಿತ್ತು? ಜೆಡಿಎಸ್‌, ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಮಜಾ ಮಾಡಿದ್ದೀರಲ್ಲಾ? ಎಂದು ಪ್ರಶ್ನೆ ಮಾಡಿದರು.

ನಾವು ಯಾರನ್ನೂ ಕರೆಯುತ್ತಿಲ್ಲ. ನಮಗಿರೋ ಬಹುಮತದ ನಂಬರ್‌ಗೆ ಯಾರೂ ಅವಶ್ಯಕತೆ ಇಲ್ಲ. ದೇಶದ ಉದ್ದಗಲಕ್ಕೂ ಭಾರತವನ್ನು ಉಳಿಸಲು ಎಲ್ಲರೂ ಒಗ್ಗೂಡಿದ್ದಾರೆ. ಪಕ್ಷಕ್ಕೆ ಬರುವವರನ್ನು ನಾನು ತಡೆಯಲು ಆಗುವುದಿಲ್ಲ. ಕೋಳಿ ಕೇಳಿ ಮಸಾಲೆಯನ್ನು ಅರೆಯಲು ಆಗುತ್ತದೆಯೇ? ಎಂದು ಡಿ.ಕೆ. ಶಿವಕುಮಾರ್‌ ಪರೋಕ್ಷವಾಗಿ ಆಪರೇಷನ್‌ ಹಸ್ತದ ಸುಳಿವನ್ನು ನೀಡಿದ್ದಾರೆ.

ಆಪರೇಷನ್‌ ಹಸ್ತ ನಡೆಯುತ್ತಿದೆ: ಸತೀಶ್ ಜಾರಕಿಹೊಳಿ

ಆಪರೇಶನ್ ಹಸ್ತ ವಿಚಾರ ನಡೆಯುತ್ತಿರುವುದು ಹೌದು. ಏಕೆಂದರೆ ಬಿಜೆಪಿ ಆಪರೇಷನ್‌ ಕಮಲದ ಭಯ ದಿನದ 24 ಗಂಟೆಯೂ ಇದ್ದೆ ಇರುತ್ತದೆ. ನಾವು ಸರ್ಕಾರವನ್ನು ಡಿಸ್ಟರ್ಬ್ ಮಾಡುತ್ತಿಲ್ಲ. ಅವರೇ ಬರ್ತೀವಿ ಎನ್ನುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ನಿಂದ ತಲಾ ಹತ್ತು ಶಾಸಕರು ಬರುತ್ತಿದ್ದಾರೆ. ಆಪರೇಷನ್ ಹಸ್ತ ಚರ್ಚೆ ನಡೆಯುತ್ತಿರುವುದು ನಿಜ ಎಂದು ಸಚಿವ ಸತೀಶ್ ಜಾರಕಿಹೊಳಿ ಚಾಮರಾಜನಗರದಲ್ಲಿ ಹೇಳಿದ್ದಾರೆ.

ಪಕ್ಷ ತೊರೆದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಅಂದು ಹೇಳಿದ್ದರು. ಆದರೆ, ಇಂದು ರಾಜಕೀಯ ಅನಿವಾರ್ಯತೆ ಇದೆ. ಇವತ್ತಿನದು ನಾಳೆಗೆ ಹೇಳೋಕೆ ಆಗಲ್ಲ. ಬದಲಾವಣೆ ಆಗುತ್ತಲೇ ಇರುತ್ತದೆ. ಆದರೆ, ವಾತಾವರಣ ಬದಲಾಗಿದೆ. ಕೆಲವರು ಪಕ್ಷ ತ್ಯಜಿಸಿ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಈಗ ಅವರನ್ನು ಸೇರಿಸಿಕೊಳ್ಳುವುದರಲ್ಲಿ ಅಭ್ಯಂತರವಿಲ್ಲ ಎಂಬುದು ನನ್ನ ಭಾವನೆ ಎಂದು ಹೇಳಿದರು.

ಆಯನೂರು ಸೇರ್ಪಡೆಗೆ ಶಿವಮೊಗ್ಗದಲ್ಲಿ ಆಕ್ರೋಶ ಸ್ಫೋಟ

ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್ ಅವರು ಕಾಂಗ್ರೆಸ್‌ ಸೇರ್ಪಡೆ ಆಗುವುದಕ್ಕೆ ನಮ್ಮ ವಿರೋಧ ಇದೆ. ಅವರು ಚಳಿಗಾಲದಲ್ಲಿ ಬಿಜೆಪಿಯಲ್ಲಿದ್ದು, ಬೇಸಿಗೆಗಾಲದಲ್ಲಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಾಗಿಲು ಮುಚ್ಚಿದೆ ಅಂತ ಗೊತ್ತಾದ ಮೇಲೆ ಜೆಡಿಎಸ್ ಸೇರ್ಪಡೆಯಾಗಿದ್ದರು. ಈಗ ಮಳೆಗಾಲದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಗೆ ನಮ್ಮ ಧಿಕ್ಕಾರ ಇದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಎಚ್.ಸಿ. ಯೋಗೀಶ್ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ಮುಖಂಡರ ಬಳಿ ಹೋಗಿ ನಾನು ಕಾಂಗ್ರೆಸ್‌ ಸೇರುತ್ತೇನೆ ಎನ್ನುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಕೇವಲ 8863 ಮತ ತೆಗೆದುಕೊಂಡಿದ್ದರು. ಠೇವಣಿಗೂ ಯೋಗ್ಯತೆ ಇಲ್ಲದ ವ್ಯಕ್ತಿ ಕಾಂಗ್ರೆಸ್‌ಗೆ ಬರುತ್ತೇನೆ ಅಂದಿದ್ದಾರೆ. ನಾನು ಕಾಂಗ್ರೆಸ್‌ನ ಎಲ್ಲ ಮುಖಂಡರಿಗೆ ಪತ್ರ ಬರೆದಿದ್ದೇನೆ. ಯಾವುದೇ ಕಾರಣಕ್ಕೂ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು. 2023ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 5% ಮತ ಮಾತ್ರ ಅವರಿಗೆ ದಕ್ಕಿತ್ತು. ನಮ್ಮ ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡಿರುವ ವ್ಯಕ್ತಿ ಅವರಾಗಿದ್ದಾರೆ. ಈಗ ಕಾಂಗ್ರೆಸ್ ಗೆ ಸೇರುತ್ತೇನೆ ಎನ್ನುತ್ತಿದ್ದಾರೆ. ನಮ್ಮ ನಾಯಕರ ಬಗ್ಗೆ ವೈಯಕ್ತಿಕ ವಿಚಾರವನ್ನು ಸಹ ಮಾತನಾಡಿದ್ದಾರೆ ಎಂದು ಎಚ್.ಸಿ. ಯೋಗೀಶ್ ಆಕ್ರೋಶವನ್ನು ಹೊರಹಾಕಿದರು.

ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿ ಈಗ ಅವರ ಮನೆ ಬಾಗಿಲು ತಟ್ಟುತ್ತಿದ್ದಿರಾ? ನಿಮಗೆ ಧಮ್ ಇದ್ದರೆ ನೀವಿರುವ ಪಕ್ಷದಲ್ಲೇ ನಿಮ್ಮ ಧಮ್ ತೋರಿಸಿ. ಅಧಿಕಾರದ ಆಸೆಗೆ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ಯುವಕರಿಗೆ ನಿಮ್ಮ ಸಂದೇಶ ಏನು? ಪಕ್ಷದಿಂದ ಪಕ್ಷಕ್ಕೆ ಹಾರುವುದಾ? ನೀವು ಗೆದ್ದಿದ್ದು ಪದವೀಧರ ಕ್ಷೇತ್ರದಿಂದ ಆ ಯುವಕರಿಗೆ ಏನು ಸಂದೇಶ ಕೊಡುವಿರಿ? ಮರದಿಂದ ಮರಕ್ಕೆ ಹಾರುವುದು ಹೇಗೆ ಎನ್ನುವುದಾ? ಜೆಡಿಎಸ್ ಸೇರ್ಪಡೆ ವೇಳೆ ಅವರ ಜತೆಗೆ ಹೋದವರನ್ನು ಬಿಟ್ಟಿದ್ದಾರೆ. ಈಗ ಒಬ್ಬರೇ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಎಂದು ಎಚ್.ಸಿ. ಯೋಗೀಶ್ ಅಸಮಾಧಾನ ವ್ಯಕ್ತಪಡಿಸಿದರು.

ಈಶ್ವರಪ್ಪ ಅವರ ನಡುವೆ ಗಲಾಟೆ ಏಕೆ ನಡೆಯಿತು? ಗುದ್ದಲಿ ಪೂಜೆಗೆ ಕರೆಯುತ್ತಿಲ್ಲ ಅಂತಷ್ಟೇ ಹೊರತು, ಅಭಿವೃದ್ಧಿ ವಿಚಾರವಾಗಿ ಅಲ್ಲ. ಬಿಜೆಪಿ ಅವರನ್ನು ಹೊರತುಪಡಿಸಿ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಗೆಲ್ಲಲ್ಲ ಎಂದಿದ್ದರು. ಈಗ ಕಾಂಗ್ರೆಸ್ ಬಂದ ತಕ್ಷಣ ನೀವು ಗೆಲ್ಲುತ್ತೀರಾ? ಈಗಾಗಲೇ ನಮ್ಮ ಪಕ್ಷದವರು ಕೆಪಿಸಿಸಿಗೆ ಪದವೀಧರರ ಕ್ಷೇತ್ರಕ್ಕೆ ಅಭ್ಯರ್ಥಿ ಬಯಸಿ ಅರ್ಜಿ ಹಾಕಿದ್ದಾರೆ. ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಗೆ ನಮ್ಮೆಲ್ಲರ ವಿರೋಧ ಇದೆ. ನಮ್ಮ ನಾಯಕರುಆಯನೂರು ಮಂಜುನಾಥ್ ಸೇರಿಸಿಕೊಳ್ಳುವ ಮುನ್ನ ಯೋಚನೆ ಮಾಡಲಿ. ಇವರ ಸೇರ್ಪಡೆಯಿಂದ ಲೋಕಸಭಾ ಚುನಾವಣೆಯಲ್ಲಿ ನಮಗೇನೂ ಪ್ರಯೋಜನ ಆಗಲ್ಲ ಎಂದು ಎಚ್.ಸಿ. ಯೋಗೀಶ್ ಹೇಳಿದರು.

ಇದನ್ನೂ ಓದಿ: Karnataka live news : ರಾಜ್ಯದ ಬೆಳವಣಿಗೆಗಳ ಕ್ಷಣಕ್ಷಣದ ಸುದ್ದಿಗಳು ಇಲ್ಲಿವೆ;  ಹಿಂಜಾವೇ ಪ್ರಾಂತ ಸಹ ಸಂಯೋಜಕ ಸೆರೆ; ಹಿಂದು ಸಂಘಟನೆಗಳ ವ್ಯಾಪಕ ಆಕ್ರೋಶ

ಪಕ್ಷದಲ್ಲಿ ದುಡಿದವರಿಗೆ ಪಕ್ಷ ಅವಕಾಶ ನೀಡಬೇಕು. ನಾವೇ ಪಕ್ಷವನ್ನು ಕಟ್ಟುತ್ತೇವೆ, ನಮ್ಮ ಮೇಲೆ ಹೈಕಮಾಂಡ್ ನಂಬಿಕೆ ಇಡಬೇಕು. ನಾವೇ ನೀವು ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಕಾಂಗ್ರೆಸ್ ಪಕ್ಷದ ವಿರುದ್ಧ ಸ್ಪರ್ಧಿಸಿದ ವ್ಯಕ್ತಿಗೆ ಅವಕಾಶ ನೀಡಬಾರದು ಎಂದು ಎಚ್.ಸಿ ಯೋಗೀಶ್ ಹೇಳಿದರು.

Exit mobile version