ಮೈಸೂರು: ಮೈಸೂರಿನಲ್ಲಿ ಆಪರೇಷನ್ ಹಸ್ತ ಮುಂದುವರಿದಿದೆ. ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಇಡೀ ಬಳಗ ಮಂಗಳವಾರ ಕಾಂಗ್ರೆಸ್ ಸೇರ್ಪಡೆಯಾಗಿದೆ. ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಸಹೋದರ ರಾಮಸ್ವಾಮಿ ಸೇರಿ ಅಪಾರ ಬೆಂಬಲಿಗರು ಕಾಂಗ್ರೆಸ್ ಸೇರಿದರು.
ವಿ.ಶ್ರೀನಿವಾಸ ಪ್ರಸಾದ್ ಸಹೋದರ ರಾಮಸ್ವಾಮಿ ಮಾತ್ರವಲ್ಲದೆ ಅವರ ಪುತ್ರ ಭರತ್ ರಾಮಸ್ವಾಮಿ, ಆಪ್ತರಾದ ಎಚ್.ಜಿ.ರಮೇಶ್, ಸಿ.ಜಿ.ಶಿವಕುಮಾರ್, ಎಚ್.ಸುಬ್ಬಯ್ಯ, ಶಿವರಾಜು, ಮಲ್ಕುಂಡಿ ಪುಟ್ಟಸ್ವಾಮಿ, ಬಸವರಾಜು ಸೇರಿ ಅನೇಕರು ಕಾಂಗ್ರೆಸ್ ಸೇರ್ಪಡೆಯಾದರು.
ಈ ವೇಳೆ ಸಚಿವ ಕೆ. ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್ ಉಪಸ್ಥಿತರಿದ್ದರು.
ಸಿದ್ದರಾಮಯ್ಯ ಕೈ ಬಲ ಪಡಿಸೋಣ: ವಿ.ಶ್ರೀನಿವಾಸ ಪ್ರಸಾದ್ ಸಹೋದರ ಕರೆ
ವಿ.ಶ್ರೀನಿವಾಸ ಪ್ರಸಾದ್ ಸಹೋದರ ರಾಮಸ್ವಾಮಿ ಮಾತನಾಡಿ, ನಾವೆಲ್ಲರೂ ಪ್ರಾಮಾಣಿಕವಾಗಿ ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು. ಬೇರೆಯವರು ಸಿಎಂ ಆಗಿದ್ದರೆ ನಮಗೆ ಇಷ್ಟೊಂದು ಖುಷಿ ಇರಲ್ಲ.
ಸಿದ್ದರಾಮಯ್ಯನವರು ನಮ್ಮ ಕ್ಷೇತ್ರದವರೇ. ನಮ್ಮ ಭಾಗದ ಅಭಿವೃದ್ಧಿಗೆ ಅವರಲ್ಲಿ ಮನವಿ ಮಾಡಿಕೊಳ್ಳಬಹುದು. ನಾವೆಲ್ಲರೂ ಪ್ರಾಮಾಣಿಕವಾಗಿ ದುಡಿದು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಆಗ ಮಾತ್ರ ನಾವು ಪಕ್ಷ ಸೇರಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಬೃಹತ್ ಸಮಾವೇಶ ಮಾಡೋಣ. ಸಿದ್ದರಾಮಯ್ಯರಿಗೆ ಬಲ ಹೆಚ್ಚಾದಷ್ಟು ನಮ್ಮ ಕೈ ಗೆ ಬಲ ಬರುತ್ತದೆ. ಎಲ್ಲರು ಸೇರಿ ಸಿದ್ದರಾಮಯ್ಯ ಕೈ ಬಲ ಪಡಿಸೋಣ ಎಂದು ಕರೆ ನೀಡಿದರು.
ಮುನಿಸು ಮರೆತು ಸಿಎಂ ಸಿದ್ದರಾಮಯ್ಯ, ಡಾ.ಮಹದೇವಪ್ಪ ಬೆಂಬಲಕ್ಕೆ ವಿ.ಶ್ರೀನಿವಾಸ ಪ್ರಸಾದ್ ನಿಂತ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಾಗಿದೆ. ಶ್ರೀನಿವಾಸ್ ಪ್ರಸಾದ್ ಅವರು ಚಾಮರಾಜನಗರ ಕ್ಷೇತ್ರದಲ್ಲಿ ಬರೋಬ್ಬರಿ 6 ಬಾರಿ ಸಂಸದರಾಗಿ ಆಯ್ಕೆಯಾಗಿರುವ ದಲಿತ ನಾಯಕರಾಗಿದ್ದು, ಇತ್ತೀಚೆಗೆ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು.
ಇದನ್ನೂ ಓದಿ | Parliament Flashback: ಉಡುಪಿಯಲ್ಲಿ ಗುರುವಿಗೇ ಸೋಲಿನ ರುಚಿ ತೋರಿಸಿದ್ದ ಆಸ್ಕರ್ ಫೆರ್ನಾಂಡಿಸ್!
ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಶ್ರೀನಿವಾಸ್ ಪ್ರಸಾದ್ ಅಳಿಯ
ಮೈಸೂರಿನಲ್ಲಿ ಇತ್ತೀಚೆಗೆ ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಸೇರಿ ಮೂವರು ನಾಯಕರು, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಧೀರಜ್ ಪ್ರಸಾದ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.
ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚಾಮರಾಜನಗರ ಅಭ್ಯರ್ಥಿ ಸುನೀಲ್ ಬೋಸ್ ಸಮ್ಮುಖದಲ್ಲಿ ಶನಿವಾರ ಸರಳವಾಗಿ ಧೀರಜ್ ಪ್ರಸಾದ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿದ್ದ ಧೀರಜ್ ಪ್ರಸಾದ್, ಸಂಸದ ವಿ.ಶ್ರೀನಿವಾಸ ಪ್ರಸಾದ್ ತಂಗಿಯ ಮಗ.
ಇತ್ತೀಚೆಗೆ ಸಚಿವ ಎಚ್.ಸಿ.ಮಹದೇವಪ್ರಸಾದ್ ಸೇರಿ ಕಾಂಗ್ರೆಸ್ ಮುಖಂಡರು ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದರು. ಈ ವೇಳೆ ನಿವೃತ್ತಿ ಘೋಷಿಸಿದ್ದೇನೆ, ನೋಡೋಣ ಎಂದಷ್ಟೇ ಸಂಸದ ಹೇಳಿದ್ದರು. ಅದರ ಬೆನ್ನಲ್ಲೇ ಧೀರಜ್ ಪ್ರಸಾದ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇನ್ನು ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀನಿವಾಸ ಪ್ರಸಾದ್ ಅಳಿಯ ಡಾ.ಮೋಹನ್ ಕುಮಾರ್‌ಗೂ ಕಾಂಗ್ರೆಸ್ ಗಾಳ ಹಾಕಿದೆ.