Site icon Vistara News

Operation Hasta : ಮಾಜಿ ಶಾಸಕರಾದ ಬಿ.ಸಿ. ಪಾಟೀಲ್‌, ರಾಜುಗೌಡ ಜತೆ ಡಿಕೆಶಿ ರಹಸ್ಯ ಮಾತುಕತೆ!

DK Shivakumar BC Patil and Raju gowda meeting in kiccha sudeep birth day party

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ (Karnataka Politics) ಈಗ ಆಪರೇಷನ್ ಹಸ್ತದ್ದೇ (Operation Hasta) ಚರ್ಚೆ. ಇದರ ಭಾಗವಾಗಿ ಈಗಾಗಲೇ ಕೆಲವು ಮಾಜಿ ಶಾಸಕರು, ಸಂಸದರು ಕಾಂಗ್ರೆಸ್‌ನತ್ತ ಹೆಜ್ಜೆ ಹಾಕಿದ್ದಾರೆ. ಕೆಲವು ಹಾಲಿ ಶಾಸಕರು, ಸಂಸದರೂ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಸಂಪರ್ಕದಲ್ಲಿದ್ದಾರೆ. ಈ ನಡುವೆ ಮತ್ತೊಂದು ಮಹತ್ವದ ಘಟನೆಗಳು ನಡೆದಿದ್ದು, ಬಿಜೆಪಿ ಮಾಜಿ ಶಾಸಕರ ಜತೆ ಡಿ.ಕೆ. ಶಿವಕುಮಾರ್‌ ರಹಸ್ಯ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಮಾಜಿ ಶಾಸಕರಾದ ಬಿ.ಸಿ. ಪಾಟೀಲ್‌ (BC Patil) ಹಾಗೂ ರಾಜುಗೌಡ (Raju Gowda) ಜತೆ ಶನಿವಾರ ನಡೆದ ಕಿಚ್ಚ ಸುದೀಪ್‌ ಬರ್ತ್‌ ಡೇ ಪಾರ್ಟಿ ವೇಳೆ ಮಾತುಕತೆ ನಡೆದಿದ್ದು, ಜತೆಗೆ ಕುಳಿತಿದ್ದ ಫೋಟೊ ಈಗ ವೈರಲ್‌ ಆಗಿದೆ.

ಶನಿವಾರ‌ ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್ (Kiccha Sudeep) ಅವರ ಬರ್ತ್‌ ಡೇ ಪಾರ್ಟಿಯನ್ನು ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್‌ನಲ್ಲಿ ಆಯೋಜನೆ ಮಾಡಲಾಗಿತ್ತು. ಅಲ್ಲಿ ಚಿತ್ರನಟರ ಸಹಿತ ಅನೇಕ ರಾಜಕಾರಣಿಗಳು ಭಾಗಿಯಾಗಿದ್ದರು. ಇದಕ್ಕೆ ಮಾಜಿ ಸಚಿವ ಬಿ.ಸಿ. ಪಾಟೀಲ್‌ ಹಾಗೂ ಮಾಜಿ ಶಾಸಕ ರಾಜುಗೌಡ ಅವರು ಸಹ ಬಂದಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್ ಜತೆ ಬಿಜೆಪಿ ಮಾಜಿ ಶಾಸಕರು ಸುದೀರ್ಘ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: HD Kumaraswamy : ಸ್ಟ್ರೋಕ್ ಆದರೆ ಕ್ಷಣವೂ ತಡ ಮಾಡದೆ ಆಸ್ಪತ್ರೆಗೆ ಬನ್ನಿ: ಜನತೆಗೆ ಎಚ್‌.ಡಿ. ಕುಮಾರಸ್ವಾಮಿ ಕರೆ

ಅರ್ಧ ಗಂಟೆಗೂ ಹೆಚ್ಚು ಚರ್ಚೆ

ಸುರಪುರ‌ ಬಿಜೆಪಿ ಮಾಜಿ ಶಾಸಕ ರಾಜುಗೌಡ, ಹಿರೇಕೆರೂರಿನ ಮಾಜಿ ಶಾಸಕ‌ ಬಿ.ಸಿ. ಪಾಟೀಲ್‌ ಜತೆ ಡಿ.ಕೆ. ಶಿವಕುಮಾರ್‌ ಅವರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಮೂಲ ಕಾಂಗ್ರೆಸ್ಸಿಗರನ್ನು ಪಕ್ಷಕ್ಕೆ ವಾಪಸ್‌ ಕರೆತರಲು ಡಿಕೆಶಿ ಮಾಸ್ಟರ್‌ ಪ್ಲ್ಯಾನ್‌ ಮಾಡುತ್ತಿದ್ದಾರೆ ಎಂಬ ಚರ್ಚೆಯ ಮಧ್ಯೆಯೇ ಈ ಭೇಟಿ ಕುತೂಹಲ ಮೂಡಿಸಿದೆ.

ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ; ರಾಜುಗೌಡ ಸ್ಪಷ್ಟನೆ

ಈ ಬಗ್ಗೆ ಮಾಜಿ ಸಚಿವ ರಾಜುಗೌಡ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದು, ರಾತ್ರಿ ನಟ ಸುದೀಪ್ ಅವರ ಪಾರ್ಟಿಗೆ ಎಲ್ಲರೂ ಸೇರಿದ್ದೆವು. ಅಲ್ಲಿಗೆ ಡಿ.ಕೆ. ಶಿವಕುಮಾರ್ ಸಹ ಬಂದಿದ್ದರು. ಭೇಟಿಯಾದಾಗ ಮಾತನಾಡಿದೆವು. ಕೆಲಸ ಮಾಡಿದರೂ ಯಾಕೆ ಸೋತೆ ಅಂತ ನನ್ನನ್ನು ಕೇಳಿದರು. ಅದಕ್ಕೆ, ನೀವು ಮತ್ತು ಸಿದ್ದರಾಮಣ್ಣ ಕಾರಣ ಎಂದು ನಾನು ಹೇಳಿದೆ. ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರನ್ನು ಕಡೆಗಣನೆ ಮಾಡಿದ್ದೇ ಬಿಜೆಪಿ ಸೋಲಿಗೆ ಕಾರಣವಾಯಿತು. ಇವತ್ತು ಸಹ ನಮಗೆ ಯಡಿಯೂರಪ್ಪ ಮಾರ್ಗದರ್ಶನ ಅವಶ್ಯವಿದೆ. ಅವರ ಮಾರ್ಗದರ್ಶನದಲ್ಲಿ ಲೋಕಸಭೆಯನ್ನು ಎದುರಿಸುತ್ತೇವೆ. ವಿಧಾನಸಭಾ ಚುನಾವಣೆಯಲ್ಲಿ ಆದ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ತಪ್ಪು ಸರಿಪಡಿಸಿಕೊಳ್ಳದಿದ್ದರೆ ಅದೇ ಫಲಿತಾಂಶ ಬರುತ್ತದೆ. ನಾವೆಲ್ಲ ಸೋಲಲು ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ಕಾರಣ. ಯಡಿಯೂರಪ್ಪ ಈಗಲೂ ಸೋತವರನ್ನು ಕರೆದು ಮಾತನಾಡುತ್ತಾರೆ ಎಂದು ಹೇಳಿದರು.

ನಾನು ಬಿಜೆಪಿ ಬಿಡಲ್ಲ. ಮುಂದಿನ ವಾರ ಕುಮಾರಣ್ಣನ ನೋಡಲು ಹೋಗುತ್ತೇನೆ. ಜೆಡಿಎಸ್ ಸೇರುತ್ತೇನೆ ಎಂಬ ಚರ್ಚೆ ಬೇಡ. ನಾನು ಬಿಜೆಪಿಯಲ್ಲಿ ಇರುತ್ತೇನೆ. ವಲಸಿಗರ ಬಗ್ಗೆ ಮಾತನಾಡಬೇಡಿ. ಅವರಿಂದಲೇ ಸರ್ಕಾರ ಬಂದಿದೆ. ಅವರ ನೆಪದಲ್ಲಿ ಅಧಿಕಾರ ಪಡೆದಿದ್ದೇವೆ. ಸೋತ ಬಳಿಕ ಅವರ ವಿರುದ್ಧ ಮಾತನಾಡುವುದು ಸರಿಯಲ್ಲ. ರಾಜ್ಯಕ್ಕೆ ಒಂದು ಒಳ್ಳೆಯ ಟೀಮ್ ಬೇಕಿದೆ. ಆದಷ್ಟು ಬೇಗ ಹೈಕಮಾಂಡ್ ವಿಪಕ್ಷ ನಾಯಕ ಮತ್ತು ಅಧ್ಯಕ್ಷರನ್ನು ನೇಮಕ ಮಾಡುತ್ತದೆ. ನನ್ನನ್ನು ಗುರುತಿಸಿ ಅವಕಾಶ ಕೊಟ್ಟರೆ ಅದನ್ನು ನಿಭಾಯಿಸುತ್ತೇನೆ ಎಂದು ರಾಜುಗೌಡ ಹೇಳಿದರು.

ಹಾವೇರಿ ಲೋಕಸಭಾ ಅಭ್ಯರ್ಥಿಗಾಗಿ ಬಿ.ಸಿ. ಪಾಟೀಲ್‌ಗೆ ಗಾಳ?

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿರುವ ಕಾಂಗ್ರೆಸ್‌ ಈ ನಿಟ್ಟಿನಲ್ಲಿ ಗೆಲ್ಲುವ ಅಭ್ಯರ್ಥಿಗಳತ್ತ ದೃಷ್ಟಿ ನೆಟ್ಟಿದೆ. ಅದರ ಭಾಗವಾಗಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗಾಳ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸುತ್ತಿದೆ. ಕಳೆದ ಮೂರು ಚುನಾವಣೆಯಲ್ಲಿಯೂ ಹಾವೇರಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತಾ ಬಂದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರನ್ನೇ ಅಭ್ಯರ್ಥಿಯನ್ನಾಗಿ ಮಾಡಲು ಕೈ ನಾಯಕರು ಚಿಂತನೆ ನಡೆಸಿದ್ದಾರೆ. ಕಾರಣ, ಅತಿ ಹೆಚ್ಚು ಲಿಂಗಾಯತ ಮತದಾರರನ್ನು ಹೊಂದಿರುವ ಲೋಕಸಭಾ ಕ್ಷೇತ್ರ ಇದಾಗಿದೆ. ಹೀಗಾಗಿ ಬಿ.ಸಿ. ಪಾಟೀಲ್ ಅವರನ್ನು ಕಣಕ್ಕಿಳಿಸಿದರೆ ಅನುಕೂಲ ಎನ್ನುವ ಲೆಕ್ಕಾಚಾರ ಇದರ ಹಿಂದಿದೆ.

ಇದನ್ನೂ ಓದಿ: Karnataka Politics : ಸ್ಥಳೀಯ ಕಮಿಟಿಗಳಿಗೆ ಶಾಸಕರಿಗಿಂತ ಕಾರ್ಯಕರ್ತರಿಗೆ ಅವಕಾಶ ಕೊಡಿ: ಬಿ.ಎಲ್.‌ ಶಂಕರ್‌ ಖಡಕ್‌ ಮಾತು

ಮಗಳ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಬಿ.ಸಿ. ಪಾಟೀಲ್‌ ಕಾಂಗ್ರೆಸ್‌ಗೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಅವರೂ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಆದರೆ, ಬಿ.ಸಿ. ಪಾಟೀಲ್‌ಗೆ ಬಿಜೆಪಿಯಿಂದ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಹಾಗಾಗಿ ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ಪ್ಲ್ಯಾನ್‌ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.

Exit mobile version