ಮೈಸೂರು: ಮೈಸೂರು ಲೋಕಸಭಾ ಚುನಾವಣಾ (Lok Sabha Election 2024) ಅಖಾಡಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಎಂಟ್ರಿ ನೀಡಿದ್ದಾರೆ. ನಗರದ ನಗರದ ಕಾಂಗ್ರೆಸ್ ಭವನದ ಆವರಣದಲ್ಲಿ ಬುಧವಾರ ಚಾಮರಾಜ, ನರಸಿಂಹರಾಜ, ಕೃಷ್ಣರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಕೈ ಶಾಸಕರು, ಮುಖಂಡರ ಸಭೆ ನಡೆಸಿದ ಅವರು, ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಕಾರ್ಯಕರ್ತರು, ಮುಖಂಡರಿಗೆ ಹಲವು ಸಲಹೆ-ಸೂಚನೆಗಳನ್ನು ನೀಡಿದರು. ಇದೇ ವೇಳೆ ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಮುಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎಚ್.ವಿ.ರಾಜೀವ್, ಶಶಿಕಲಾ ನಾಗರಾಜ್ ಅವರು ಕಾಂಗ್ರೆಸ್‌ಗೆ (Operation Hasta) ಸೇರ್ಪಡೆಯಾದರು.
ದಲಿತ ಎಡಗೈ ಸಮುದಾಯದ ನಾಯಕ ಕೋಟೆ ಎಂ.ಶಿವಣ್ಣ ಅವರು, ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು. ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು, ಬಿಜೆಪಿ ಸರ್ಕಾರದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿದ್ದರು. ಚಾಮರಾಜನಗರ ಲೋಕಸಭಾ ಚುನಾವಣೆ ಗೆಲ್ಲಲು ಸಿಎಂ, ಡಿಸಿಎಂ ರಣತಂತ್ರ ರೂಪಿಸಿದ್ದು, ಅಲ್ಲಿನ ಪ್ರಮುಖ ನಾಯಕರನ್ನು ಪಕ್ಷಕ್ಕೆ ಸೆಳೆಯುವ ಯತ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ | Lok Sabha Election 2024: ಎಚ್.ವಿ. ರಾಜೀವ್ ಕಾಂಗ್ರೆಸ್ ಸೇರಲು ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಕಾರಣ!
ಸಭೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಬಿಜೆಪಿಯಿಂದ ಅನೇಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ, ಒಂದು ದೊಡ್ಡ ಪಟ್ಟಿಯೇ ಇದೆ. ಸ್ವಲ್ಪ ದಿನಗಳ ಬಳಿಕ ಎಲ್ಲವನ್ನು ತಿಳಿಸುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ರಾಜ್ಯದಲ್ಲಿ 20 ಸೀಟ್ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧರ್ಮ ಯುದ್ಧ ಪ್ರಾರಂಭ ಮಾಡುವ ಮುನ್ನ, ಅನೇಕ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದೆ. ನಾನು, ಸಿಎಂ ಇಬ್ಬರೂ ಹೋಗಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಗೃಹಲಕ್ಷ್ಮಿ ಯೋಜನೆ ಹಣವನ್ನು ಮಹಿಳೆಯರಿಗೆ ತಲುಪಿಸುವ ಕೆಲಸ ಮಾಡಿದ್ದೆವು. ತಾಯಿ ಚಾಮುಂಡಿ ಆಶೀರ್ವಾದದಿಂದ 135 ಸ್ಥಾನ ಗೆದ್ದು ಅಧಿಕಾರ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಇತ್ತು. ಅವರು ಮಾಡಿದ ಆಡಳಿತವನ್ನು ಜನ ಮೆಚ್ಚಲಿಲ್ಲ. ಕಮಲ ಕೆಸರಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ-ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಬಗ್ಗೆ ನಾನು ಟೀಕೆ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಜತೆ ಇರುವಂತಹ ಅಭ್ಯರ್ಥಿ ಬೇಕು. ನಮ್ಮ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿ ಬೇಕು ಎಂದು ಯದುವೀರ್ ಒಡೆಯರ್ ಬಗ್ಗೆ ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ಮಾತನಾಡಿ, ವಿಧಾನಸಭಾ ಚುನಾವಣೆಗೂ ಮುನ್ನ ಒಮ್ಮೆ ಕೋಟೆ ಶಿವಣ್ಣ ಜತೆ ಮಾತನಾಡಿದ್ದೆ. ಕಾಂಗ್ರೆಸ್ ಪಕ್ಷ ಸಂವಿಧಾನ, ಜಾತ್ಯತೀತತೆ, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿದೆ. ನೀನೊಬ್ಬ ದಲಿತ ನಾಯಕನಾಗಿದ್ದು, ಕೋಮುವಾದಿ ಬಿಜೆಪಿಯಲ್ಲಿರೋದು ಬೇಡ ಎಂದಿದ್ದೆ. ಬಿಜೆಪಿ ಒಂದು ಕೋಮುವಾದಿ ಪಕ್ಷ. ಮನುಸ್ಮೃತಿ ಮೇಲೆ ನಂಬಿಕೆ ಇಟ್ಟಿರುವ ಪಕ್ಷ. ಅದಕ್ಕೆ ಬಿಜೆಪಿಯಲ್ಲಿರುವರನ್ನೆಲ್ಲ ಮನುವಾದಿಗಳು ಎಂದು ಕರೆಯೋದು. ಜಾತಿ ವ್ಯವಸ್ಥೆಯ ಕಾರಣಕ್ಕಾಗಿ ಜನ ಶಿಕ್ಷಣದಿಂದ ದೂರವಾದರೂ ಸಂವಿಧಾನ ಜಾರಿ ನಂತರ ಜನರಿಗೆ ಶಿಕ್ಷಣ ಸಿಕ್ಕಿದೆ. ಸಂವಿಧಾನ ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಹೇಳುತ್ತಿದೆ. ಕಾಂಗ್ರೆಸ್, ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಪಕ್ಷ. ಇತಿಹಾಸ ತಿಳಿಯದವರು ಭವಿಷ್ಯ ನಿರ್ಮಾಣ ಮಾಡಲಿಕ್ಕೆ ಸಾಧ್ಯವಿಲ್ಲ. ನಾವೆಲ್ಲರೂ ಸಂವಿಧಾನವನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ | Lok Sabha Election 2024: ರಾಯಚೂರಲ್ಲಿ ಬಿ.ವಿ. ನಾಯಕ ಭಿನ್ನಮತ ಸ್ಫೋಟ; ಡೀಸೆಲ್ ಸುರಿದುಕೊಂಡು ಹೈಡ್ರಾಮಾ!
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಶಾಸಕ ತನ್ವಿರ್ ಸೇಠ್ ಅಧಿಕಾರ ಸ್ವೀಕರಿಸಿದರು. ಸಮಾವೇಶದಲ್ಲಿ ಸಚಿವ ಕೆ. ವೆಂಕಟೇಶ್, ಮೈಸೂರು ಕೊಡಗು ಅಭ್ಯರ್ಥಿ ಎಂ. ಲಕ್ಷ್ಮಣ್, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಕಾಂಗ್ರೆಸ್ ಶಾಸಕರಾದ ಕೆ. ಹರೀಶ್ ಗೌಡ, ಅನಿಲ್ ಚಿಕ್ಕಮಾದು, ಡಾ.ತಿಮ್ಮಯ್ಯ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಭಾಗಿಯಾಗಿದ್ದರು.