ಮಂಡ್ಯ: ಮಾರ್ಚ್ 12ರಂದು ಸಕ್ಕರೆ ನಾಡಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ. ಅದೇ ಹೊತ್ತಿಗೆ ಜಿಲ್ಲೆಯಲ್ಲಿ ಕಮಲ ಪಕ್ಷಕ್ಕೊಂದು ಬಿಗ್ ಶಾಕ್ ಕಾದಿದೆಯಾ? ಹೌದು ಎನ್ನುತ್ತವೆ ಮೂಲಗಳು. ಅದೇನೆಂದರೆ, ಮಂಡ್ಯ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಮಲ ಬಾವುಟ ಹಾರಿಸಿದವರೇ ಕಾಂಗ್ರೆಸ್‌ನತ್ತ (Operation hasta?) ಹೊರಟಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಬಾರಿ ಮಂಡ್ಯದಲ್ಲಿ ಕೆಲವು ಸ್ಥಾನಗಳನ್ನಾದರೂ ಗೆಲ್ಲಲೇಬೇಕು ಎಂದು ಹಠ ತೊಟ್ಟಿರುವ ಬಿಜೆಪಿಗೆ ಇದು ಹಿನ್ನಡೆಯಾಗುವ ಸಾಧ್ಯತೆ ಇದೆ.
ಹೌದು, ರಾಜ್ಯ ಸಂಪುಟದಲ್ಲಿ ಸಚಿವರಾಗಿರುವ ಕೆ.ಸಿ. ನಾರಾಯಣ ಗೌಡ ಅವರು ಕಾಂಗ್ರೆಸ್‌ನತ್ತ ಹೋಗುವ ಸೂಚನೆಗಳು ಕಾಣಿಸುತ್ತಿವೆ. ಈ ಬಗ್ಗೆ ಸುಳಿವು ನೀಡಿರುವ ವಿಡಿಯೊವೊಂದು ಹರಿದಾಡುತ್ತಿದೆ.
ಕೆ.ಸಿ. ನಾರಾಯಣ ಗೌಡ ಅವರು 2018ರಲ್ಲಿ ಜೆಡಿಎಸ್‌ನಿಂದ ಗೆದ್ದವರು. ಬಳಿಕ 2019ರಲ್ಲಿ ನಡೆದ ಆಪರೇಷನ್ ಕಮಲದಲ್ಲಿ ಬಿಜೆಪಿ ಸೇರಿ ಭರ್ಜರಿ ಬಹುಮತದೊಂದಿಗೆ ಮರು ಆಯ್ಕೆಯಾದವರು. ಬಳಿಕ ಸಂಪುಟದಲ್ಲಿ ಕ್ರೀಡಾ ಸಚಿವರಾಗಿ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಇಂಥ ನಾರಾಯಣ ಗೌಡ ಅವರು ಪಕ್ಷಾಂತರದ ಸುಳಿವು ನೀಡಿರುವುದು ಬಿಜೆಪಿಗೆ ಮರ್ಮಾಘಾತವಾಗಲಿದೆ.
ನಾರಾಯಣ ಗೌಡರು ಹೇಳಿರುವುದೇನು?
ʻʻಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ. ಆದರೆ, ಸೇರ್ಪಡೆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಆಪ್ತರು ಹಾಗೂ ಹಿತೈಷಿಗಳ ಜೊತೆ ಚರ್ಚಿಸಿ ಅಭಿಪ್ರಾಯ ಕೇಳಬೇಕು. ಅಭಿಪ್ರಾಯ ಕೇಳಿದ ಬಳಿಕ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನʼʼ ಎಂದು ಅವರು ವಿಡಿಯೊ ಒಂದರಲ್ಲಿ ಹೇಳಿದ್ದಾರೆ.
ʻʻಕೆ.ಆರ್.ಪೇಟೆ ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಇದೆ. ಅದಕ್ಕಾಗಿ ಪಕ್ಷಕ್ಕೆ ಬರುವಂತೆ ಒತ್ತಾಯ ಇದೆ. ಯಾವುದೇ ನಿರ್ಧಾರ ಮಾಡಿದರೂ ಮಾಧ್ಯಮಗಳ ಮೂಲಕವೇ ತಿಳಿಸುತ್ತೇನೆʼʼ ಎಂದು ನಾರಾಯಣ ಗೌಡ ಹೇಳಿದ್ದಾರೆ.
ನಾರಾಯಣ ಗೌಡರು ಬಿಜೆಪಿಯಲ್ಲಿ ಅಷ್ಟೇನೂ ಖುಷಿಯಾಗಿಲ್ಲ ಎನ್ನುವುದು ಹಿಂದಿನಿಂದಲೇ ಸುದ್ದಿಯಾಗಿತ್ತು. ಇತ್ತೀಚೆಗೆ ಅವರನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿ ಮಾಡಿದಾಗಲೂ ಅವರು ಸಿಡಿದುಬಿದ್ದಿದ್ದರು. ನಿಜವೆಂದರೆ, ಆರ್. ಅಶೋಕ್ ಅವರನ್ನು ಉಸ್ತುವಾರಿ ಮಾಡಿದಾಗಲೂ ತಮ್ಮ ಸಿಟ್ಟು ತೋರಿಸಿದ್ದರು. ಹೀಗಾಗಿ ಅವರು ಪಕ್ಷದ ಯಾವುದೇ ವಿಚಾರಕ್ಕೂ ಸ್ಪಂದಿಸುತ್ತಿಲ್ಲ ಎನ್ನುವುದು ಸ್ಪಷ್ಟವಾಗಿತ್ತು.
ಇದೀಗ ಅವರು ಕಾಂಗ್ರೆಸ್‌ನತ್ತು ಮುಖ ಮಾಡಿದ್ದಾರೆ ಎಂಬುದು ಭಾರಿ ಚರ್ಚೆಯ ವಿಚಾರವಾಗಿದೆ. ಆದರೆ, ಇದು ಕೇವಲ ಪ್ರಾಥಮಿಕ ಹಂತದ ಮಾತುಗಳಾಗಿದ್ದು, ಮುಂದಿನ ಗತಿ ಏನಾಗುತ್ತದೆ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : PM Modi: ಮಾ.12ರಂದು ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟಿಸಲಿರುವ ಮೋದಿ; 2 ರೋಡ್ ಶೋಗೆ ಪ್ಲ್ಯಾನ್: ಪ್ರತಾಪ್ ಸಿಂಹ