ಮಂಡ್ಯ: ಸಚಿವ ಕೆ.ಸಿ. ನಾರಾಯಣ ಗೌಡ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಹೋಗುತ್ತಾರೆ (Operation Hasta?) ಎಂಬ ಸುದ್ದಿಗಳಿಗೆ ಹೊಸ ತಿರುವು ಸಿಕ್ಕಿದೆ. ಕಾಂಗ್ರೆಸ್ ಸೇರ್ಪಡೆಯ ಸಾಧ್ಯತೆ ಬಗ್ಗೆ ಚರ್ಚೆ ನಡೆಸಿದ್ದ ವಿಡಿಯೊವೊಂದು ಬಿಡುಗಡೆಯಾಗಿ ಸುದ್ದಿಯಾಗುತ್ತಿದ್ದಂತೆಯೇ ನಾರಾಯಣ ಗೌಡರು ಯೂ ಟರ್ನ್ ಹೊಡೆದಿದ್ದಾರೆ. ಕಾಂಗ್ರೆಸ್ ಸೇರ್ಪಡೆ ವಿಚಾರವೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ಬಗ್ಗೆ ಹೆಚ್ಚು ಮಾತನಾಡಲು ಬಯಸದ ಅವರು, ನಾನು ಕಾಂಗ್ರೆಸ್ ಪಕ್ಷ ಸೇರ್ತಿನಿ ಅನ್ನೋ ವಿಚಾರ ಮಾಧ್ಯಮದವರೇ ಹೇಳ್ತಿರೋದು, ನಾನು ಏನೂ ಹೇಳಿಲ್ಲ ಎಂದರು.
ಮುಂದಿನ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗುತ್ತೀರಾ ಎಂದು ಕೇಳಿದಾಗ, ʻʻನಾನೀಗ ಯಾವ ಪಕ್ಷದಲ್ಲಿದ್ದೀನಿ? ಯಾರ ಪರವಾಗಿ ಕೆಲ್ಸ ಮಾಡ್ತಿದ್ದೀನಿ? ಕಾಂಟ್ರವರ್ಸಿ ಎಲ್ಲ ನೀವು ಕೇಳಬೇಡಿ. ಈ ಪಕ್ಷದಲ್ಲಿ ನಾನು ಪ್ರಧಾನಮಂತ್ರಿಗಳ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನ ಮಾಡ್ತಿದ್ದೀನಿʼʼ ಎಂದರು.
ʻʻಇದೇ ತಿಂಗಳ 12ರಂದು ದೇಶದ ಪ್ರಧಾನ ಮಂತ್ರಿ ನಮ್ಮ ಜಿಲ್ಲೆಗೆ ಬರ್ತಿದ್ದಾರೆ. ಹೆದ್ದಾರಿ ಉದ್ಘಾಟನೆ ನಂತ್ರ ಸಮಾವೇಶ ಇರಲಿದೆ. ಮದ್ದೂರಿನಲ್ಲಿ ರೋಡ್ ಶೋ ಬಗೆಗೆ ನಾಳೆ ಸಭೆಯಲ್ಲಿ ನಿರ್ಧಾರವಾಗಲಿದೆʼʼ ಎಂದು ಹೇಳಿದರು.
ವಿಡಿಯೋದಲ್ಲಿ ಏನಿದೆ?
ʻʻಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ. ಆದರೆ, ಸೇರ್ಪಡೆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಆಪ್ತರು ಹಾಗೂ ಹಿತೈಷಿಗಳ ಜೊತೆ ಚರ್ಚಿಸಿ ಅಭಿಪ್ರಾಯ ಕೇಳಬೇಕು. ಅಭಿಪ್ರಾಯ ಕೇಳಿದ ಬಳಿಕ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನʼʼ ಎಂದು ಅವರು ವಿಡಿಯೊ ಒಂದರಲ್ಲಿ ಹೇಳಿದ್ದಾರೆ.
ʻʻಕೆ.ಆರ್.ಪೇಟೆ ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಇದೆ. ಅದಕ್ಕಾಗಿ ಪಕ್ಷಕ್ಕೆ ಬರುವಂತೆ ಒತ್ತಾಯ ಇದೆ. ಯಾವುದೇ ನಿರ್ಧಾರ ಮಾಡಿದರೂ ಮಾಧ್ಯಮಗಳ ಮೂಲಕವೇ ತಿಳಿಸುತ್ತೇನೆʼʼ ಎಂದು ನಾರಾಯಣ ಗೌಡ ಹೇಳಿದ್ದಾರೆ.
ನಾರಾಯಣ ಗೌಡರು ಬಿಜೆಪಿಯಲ್ಲಿ ಅಷ್ಟೇನೂ ಖುಷಿಯಾಗಿಲ್ಲ ಎನ್ನುವುದು ಹಿಂದಿನಿಂದಲೇ ಸುದ್ದಿಯಾಗಿತ್ತು. ಇತ್ತೀಚೆಗೆ ಅವರನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿ ಮಾಡಿದಾಗಲೂ ಅವರು ಸಿಡಿದುಬಿದ್ದಿದ್ದರು. ನಿಜವೆಂದರೆ, ಆರ್. ಅಶೋಕ್ ಅವರನ್ನು ಉಸ್ತುವಾರಿ ಮಾಡಿದಾಗಲೂ ತಮ್ಮ ಸಿಟ್ಟು ತೋರಿಸಿದ್ದರು. ಹೀಗಾಗಿ ಅವರು ಪಕ್ಷದ ಯಾವುದೇ ವಿಚಾರಕ್ಕೂ ಸ್ಪಂದಿಸುತ್ತಿಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಈ ಎಲ್ಲ ವಿಚಾರಗಳನ್ನು ಪರಿಗಣಿಸಿದಾಗ ಅವರು ಬಿಜೆಪಿಯಿಂದ ಕಾಂಗ್ರೆಸ್ ಕಡೆಗೆ ಹೊರಟಿದ್ದು ನಿಜ ಎನ್ನುವುದು ಸ್ಪಷ್ಟವಾಗಿತ್ತು. ಆದರೆ, ಈಗ ಯೂ ಟರ್ನ್ ಹೊಡೆದಿದ್ದಾರೆ.
ಇದನ್ನೂ ಓದಿ : Operation hasta?: ಮಂಡ್ಯದಲ್ಲಿ ಕಾದಿದ್ಯಾ ಬಿಜೆಪಿಗೆ ಬಿಗ್ ಶಾಕ್, ಕಾಂಗ್ರೆಸ್ ಸೇರ್ತಾರಾ ಸಚಿವ ನಾರಾಯಣ ಗೌಡ?