ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ (Lok Sabha Election 2024) ದೃಷ್ಟಿಯಿಂದ ರಾಜ್ಯ ರಾಜಕೀಯದಲ್ಲಿ (Karnataka Politics) ಕಾಂಗ್ರೆಸ್‌ನಿಂದ ಆಪರೇಷನ್ ಹಸ್ತ (Operation Hasta) ಮುಂದುವರಿದಿದೆ. ಜೆಡಿಎಸ್ ಮುಖಂಡರ ನಿವಾಸಕ್ಕೆ ಸಂಸದ ಡಿ.ಕೆ. ಸುರೇಶ್ (MP DK Suresh) ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಇದರ ಫಲವಾಗಿ ಕಬಡ್ಡಿ ಬಾಬು (Kabaddi Babu) ಸೇರಿದಂತೆ 10ಕ್ಕೂ ಹೆಚ್ಚು ಮಾಜಿ ಕಾರ್ಪೋರೇಟರ್‌ಗಳು (Former corporators) ಶುಕ್ರವಾರ ಕೈಪಡೆ ಸೇರುವುದು ಖಚಿತವಾಗಿದೆ.
ಕಬಡ್ಡಿ ಬಾಬು ನಿವಾಸಕ್ಕೆ ಭೇಟಿ ನೀಡಿದ ಸಂಸದ ಡಿ.ಕೆ. ಸುರೇಶ್ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ (ಸೆಪ್ಟೆಂಬರ್ 15) ಕಬಡ್ಡಿ ಬಾಬು ಸೇರಿದಂತೆ 10ಕ್ಕೂ ಹೆಚ್ಚು ಮಾಜಿ ಕಾರ್ಪೋರೇಟರ್‌ಗಳು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಇದರ ಅಂತಿಮ ಹಂತದ ಮಾತುಕತೆ ಈಗ ನಡೆದಿದೆ ಎನ್ನಲಾಗಿದೆ.
ಕಬಡ್ಡಿ ಬಾಬು ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಪ್ರಸಾದ್ ಬಾಬು ಕಬಡ್ಡಿ ಬಾಬೂ ಅಂತಲೇ ಫೇಮಸ್ ಆಗಿದ್ದಾರೆ. ಜನತಾ ದಳದ ಪ್ರಮುಖ ನಾಯಕರು ಅವರಾಗಿದ್ದು, ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಾಗಿ ಬಹಳ ಸೇವೆ ಮಾಡಿದ್ದಾರೆ. ನಮ್ಮ ಪಕ್ಷಕ್ಕೆ ಬರಬೇಕು ಅಂತ ಆಹ್ವಾನ ಮಾಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ISIS Terrorist : ದೆಹಲಿಯಲ್ಲಿ ಶಿವಮೊಗ್ಗ ಮೂಲದ ಐಸಿಸ್ ಉಗ್ರ ಅರಾಫತ್ ಅಲಿ ಸೆರೆ
ಕಾಂಗ್ರೆಸ್ ಸೇರಲು ಅನೇಕ ಜನ ಮುಂದೆ ಬಂದಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಪಕ್ಷವನ್ನು ಬಲವರ್ಧನೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಬಹಳ ಸಂತೋಷದಿಂದ ಪ್ರಸಾದ್ ಬಾಬು ಹಾಗೂ ಅವರ ಪುತ್ರ ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ ತೋರಿಸಿದ್ದಾರೆ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುತ್ತಾ ಇದ್ದಾರೆ ಎಂದು ಡಿ.ಕೆ. ಸುರೇಶ್ ತಿಳಿಸಿದರು.
ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಮಾತನಾಡಿದ ಡಿ.ಕೆ. ಸುರೇಶ್, ವಿಪಕ್ಷಗಳು ಒಂದಾಗುತ್ತಿವೆ ಎಂದು ಕೇಳಿದ್ದೇನೆ. ಸಂವಿಧಾನದ, ಜಾತ್ಯಾತೀತ ತತ್ವಗಳ ಹೋರಾಟವನ್ನು ನಾವು ಮಾಡುತ್ತಾ ಬಂದಿದ್ದೇವೆ. ನಾವು ಯಾರ ಜತೆಯೂ ರಾಜಿ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ಕೆಲವರು ಅಧಿಕಾರಕ್ಕೋಸ್ಕರ ಎಲ್ಲ ಸಂದರ್ಭಗಳಲ್ಲಿ ರಾಜಿ ಮಾಡಿಕೊಳ್ಳುತ್ತಲೇ ಇದ್ದಾರೆ. ಅಂತಹವರ ಬಗ್ಗೆ ನಾನು ಮಾತನಾಡುವ ಅವಶ್ಯಕತೆ ಇಲ್ಲ. ನನ್ನ ವಿರುದ್ಧ ಮೈತ್ರಿ ಅಭ್ಯರ್ಥಿ ಹಾಕುವವರೆಗೆ ಒಳ್ಳೆಯದಾಗಲಿ. ನಾನು ಮೊದಲು ಸ್ಪರ್ಧೆ ಮಾಡಿದಾಗಲೂ ಸಿಂಗಲ್ ಕ್ಯಾಂಡಿಡೇಟ್ ಆಗಿದ್ದೆ. ಅದನ್ನು ನೆನಪು ಮಾಡಿಕೊಳ್ಳಿ ಎಂದು ಹೇಳಿದರು.
ಸ್ಥಳೀಯ ನಮ್ಮ ಕಾರ್ಯಕರ್ತ ಸಹಮತ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುತ್ತಾ ಇದ್ದೇವೆ. ಕಾರ್ಯಕರ್ತರಿಗೆ ನಾವು ಶಕ್ತಿ ಕೊಡುವ ಕೆಲಸ ಮಾಡಬೇಕು. ನಮಗೆ ಕಾರ್ಯಕರ್ತರು ಶಕ್ತಿ ಕೊಡಬೇಕು. ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು ಭವಿಷ್ಯ ರೂಪಿಸುವ ಕೆಲಸ ಮಾಡಬೇಕು ಎಂದು ಡಿ.ಕೆ. ಸುರೇಶ್ ಹೇಳಿದರು.
ಬಿಬಿಎಂಪಿ ಚುನಾವಣೆಯಲ್ಲಿ ನನ್ನ ಮಗ ಸ್ಪರ್ಧೆ ಮಾಡುತ್ತಿದ್ದಾನೆ: ಕಬಡ್ಡಿ ಬಾಬು
ಚುನಾವಣೆ ಬಳಿಕ ಕಾಂಗ್ರೆಸ್ ಅಲೆ ಶುರುವಾಗಿದೆ. ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ಇದೆಲ್ಲವೂ ಜನರ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತಿದೆ. ಬಿಬಿಎಂಪಿ ಚುನಾವಣೆಯಲ್ಲಿ ನನ್ನ ಮಗ ಸ್ಪರ್ಧೆ ಮಾಡುತ್ತಿದ್ದಾನೆ. ನಾವು ಡಿಸಿಎಂ ಬಳಿ ಹೋಗಿ ಕ್ಯಾಟಗರಿ ಬೇಕು ಎಂದು ಕೇಳಿದ್ದೆವು. ಆಗ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದರೆ ಒಳ್ಳೆಯದು ಎಂದು ಹೇಳಿದ್ದರು. ಕ್ಯಾಟಗರಿ ಆಗಬೇಕಾದರೆ ನಮ್ಮ ಪಕ್ಷದಲ್ಲಿ ಇದ್ದರೆ ಸಹಾಯ ಮಾಡಬಹುದು. ಬೇರೆ ಪಕ್ಷದಲ್ಲಿ ಇದ್ದರೆ ಹೇಗೆ ಮಾಡಲು ಸಾಧ್ಯ ಎಂದು ವಾಸ್ತವ ಹೇಳಿದ್ದರು ಎಂದು ಕಬಡ್ಡಿ ಬಾಬು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: Karnataka Politics : ಹೊಸ ರಾಜ್ಯಾಧ್ಯಕ್ಷರ ನೇಮಕಕ್ಕೆ ಒತ್ತಾಯಿಸಿದರೇ ಮಾಜಿ ಸಿಎಂ ಯಡಿಯೂರಪ್ಪ?
ಈಗಲೂ ಕುಮಾರಸ್ವಾಮಿಯೇ ನನ್ನ ನಾಯಕ
ಕಾಂಗ್ರೆಸ್ ಸಾಧನೆಗಳನ್ನು ನೋಡಿ ಜನ ಮತ ಹಾಕುತ್ತಾರೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಜತೆ ನಾನು ಮೊದಲಿಂದಲೂ ಇದ್ದೇನೆ. ಈಗ ಒಂದು ತೀರ್ಮಾನಕ್ಕೆ ಬಂದಿದ್ದೇನೆ. ನಮ್ಮ ನಾಯಕರು ಕುಮಾರಸ್ವಾಮಿ ಅವರೇ ಆಗಿದ್ದಾರೆ. ಆ ಸ್ಥಾನವನ್ನು ಯಾರಿಂದಲೂ ತುಂಬಲು ಆಗುವುದಿಲ್ಲ. ಆದರೆ, ಕಾಂಗ್ರೆಸ್‌ಗೆ ಹೋದರೆ ನನ್ನನ್ನು ನಂಬಿಕೆಕೊಂಡಿದ್ದವರಿಗೆ ಒಳ್ಳೆಯದು ಆಗಲಿದೆ. ಹಾಗಾಗಿ ಕಾಂಗ್ರೆಸ್‌ಗೆ ಸೇರುತ್ತಿದ್ದೇನೆ ಎಂದು ಕಬಡ್ಡಿ ಬಾಬು ಸ್ಪಷ್ಟನೆ ನೀಡಿದರು.