Site icon Vistara News

Operation Hasta : ಎಸ್‌.ಟಿ. ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಫಿಕ್ಸ್? ಖಚಿತಪಡಿಸಿದ ಪರಮೇಶ್ವರ್!

ST Somashekhar DK Shivakumar and DR G Parameshwar

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಶತಾಯಗತಾಯ ಕಾಂಗ್ರೆಸ್‌ 20 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿದೆ. ಅಲ್ಲದೆ, ಈ ನಿಟ್ಟಿನಲ್ಲಿ ಅನೇಕ ಕಾರ್ಯತಂತ್ರಗಳನ್ನೂ ಹೆಣೆಯುತ್ತಿದೆ. ಈ ನಡುವೆ ಗ್ಯಾರಂಟಿ ಯೋಜನೆಗಳ (Congress Guarantee Scheme) ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಲು ಮುಂದಾಗಿದೆ. ಇನ್ನು ಲೋಕಸಭೆಯಲ್ಲಿ ಹೆಚ್ಚಿನ ಸೀಟನ್ನು ಗೆಲ್ಲಬೇಕೆಂದರೆ ಬೆಂಗಳೂರಿನಲ್ಲಿ ಹೆಚ್ಚಿನ ಸ್ಥಾನಗಳನ್ನು ಗಿಟ್ಟಿಸಿಕೊಳ್ಳಬೇಕು ಎಂಬ ಪ್ಲ್ಯಾನ್‌ ಅನ್ನು ಹಾಕಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ ( “ಆಪರೇಷನ್‌ ಹಸ್ತ”ಕ್ಕೆ (Operation Hasta) ಮುಂದಾಗಿದ್ದಾರೆ ಎನ್ನಲಾಗಿದೆ. ಮರಳಿ ಕಾಂಗ್ರೆಸ್‌ನತ್ತ ಹೋಗುವವರಲ್ಲಿ ಮಾಜಿ ಸಚಿವ, ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌ (Yeshwanthpur MLA ST Somashekar) ಮೊದಲಿಗರೇ ಎಂಬ ಅನುಮಾನ ಮೂಡಿದ್ದು, ಈ ಸಂಬಂಧ ಅವರು ಗುರುವಾರ (ಆಗಸ್ಟ್‌ 17) ತಮ್ಮ ಬೆಂಬಲಿಗರ ಸಭೆಯನ್ನು ಕರೆದಿದ್ದಾರೆ. ಅಲ್ಲದೆ, ತಾವೇಕೆ ಬಿಜೆಪಿಯಲ್ಲಿ ಇರಬೇಕು ಎಂದು ಸಹ ಪ್ರಶ್ನೆ ಮಾಡಿದ್ದಾರೆ. ಇನ್ನು ಎಸ್‌.ಟಿ. ಸೋಮಶೇಖರ್‌ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Home Minister Dr G Parameshwara) ಹೇಳಿದ್ದಾರೆ.

ಬೆಂಬಲಿಗರ ಜತೆ ಚರ್ಚಿಸಿ ನಿರ್ಧಾರ

ಕಾಂಗ್ರೆಸ್ ಸೇರುವ ಸಂಬಂಧ ಬೆಂಬಲಿಗರ ಅಭಿಪ್ರಾಯ ಪಡೆಯಲು ಎಸ್.ಟಿ. ಸೋಮಶೇಖರ್ ಮುಂದಾಗಿದ್ದಾರೆ. ತಮ್ಮ ಕ್ಷೇತ್ರದ ಕಚೇರಿಯಲ್ಲಿ ಬೆಂಬಲಿಗರ ಸಭೆಯನ್ನು ಕರೆದಿರುವ ಎಸ್.ಟಿ. ಸೋಮಶೇಖರ್, ಅವರ ಅಭಿಪ್ರಾಯ ಪಡೆದು ನಿರ್ಧಾರ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ (CM SIddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಈಗ ತೀರ್ಮಾನ ತೆಗೆದುಕೊಳ್ಳುವುದಷ್ಟೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Pramod Muthalik : ರಾಜ್ಯದಲ್ಲಿ 3 ವರ್ಷದಲ್ಲಿ 40 ಸಾವಿರ ಮಹಿಳೆಯರು ನಿಗೂಢ ಕಣ್ಮರೆ; 45 ಸಾವಿರ ಬಾಲಕಿಯರಿಗೆ ಅಕ್ರಮ ಗರ್ಭ!

ಎಸ್‌.ಟಿ. ಸೋಮಶೇಖರ್‌ ಹೇಳೋದೇನು? ಬೇಸರವಾಗಿದೆಯೇ?

ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಎಸ್.ಟಿ. ಸೋಮಶೇಖರ್, ಯಶವಂತಪುರ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ತಾವು ಕಾಂಗ್ರೆಸ್ ಸೇರ್ಪಡೆ ವಿಚಾರವು ನೂರಕ್ಕೆ ನೂರು ಇಲ್ಲ. ಸರ್ಕಾರ ಬಂದು ಮೂರು ತಿಂಗಳು ಆಗಿದೆ‌. ಒಂದು ಬೋರ್‌ವೆಲ್ ಕೊಟ್ಟಿಲ್ಲ, ಕುಡಿಯುವ ನೀರು ಸರಬರಾಜು ಮಾಡಿದ ಗಾಡಿಗೆ ಬಾಡಿಗೆ ಕೊಡಲು ಆಗುತ್ತಿಲ್ಲ. ನಾನು ಧರಣಿ ಕೂರುತ್ತೇನೆ ಎಂದು ಪತ್ರ ಕೊಟ್ಟಿದ್ದೆ. ಉಸ್ತುವಾರಿ ಸಚಿವರು ಬಂದಾಗ ಅಧಿಕಾರಿಗಳು ಹೇಳಿರಲಿಲ್ಲ. ಅದಕ್ಕಾಗಿ ನಾನೇ ಖುದ್ದಾಗಿ ಉಸ್ತುವಾರಿ ಸಚಿವರನ್ನು ಭೇಟಿ‌ ಮಾಡಿದ್ದೆ. ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಭೇಟಿ ಮಾಡಿದ್ದೆ. ಅಭಿವೃದ್ಧಿ ಬಗ್ಗೆ ಕೇಳಬಾರದಾ? ಉಸ್ತುವಾರಿ ಸಚಿವರ ಬಗ್ಗೆ ನಾಲ್ಕು ಒಳ್ಳೆಯ ಮಾತಾಡಬಾರದು ಎಂದರೆ ಹೇಗೆ? ಎಂದು ಹೇಳಿದರು.

ರಾಜ್ಯ ಮಟ್ಟದಲ್ಲಿ ಯಾವುದೇ ತೊಂದರೆ ಇಲ್ಲ. ನಮ್ಮ ಕ್ಷೇತ್ರದವರು ನನ್ನನ್ನು ಬಿಜೆಪಿಯಿಂದ ಕಳಿಸುವುದಕ್ಕೆ ಮಾಡುತ್ತಾ ಇದ್ದಾರೆ. ಬಿಜೆಪಿ ಬಿಡುತ್ತೇನೆ ಎಂದು ನಾನು ಹೇಳಿಲ್ಲ. ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿಲ್ಲ. ಚುನಾವಣೆ ಮುನ್ನ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ಅದರ ಆಡಿಯೊ, ವಿಡಿಯೊವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೆ. ಹೈಕಮಾಂಡ್ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣೆ ಗೆದ್ದ ಮೇಲೆ ಅದನ್ನು ಮರೆತಿದ್ದೆ ಎಂದು ಎಸ್.ಟಿ. ಸೋಮಶೇಖರ್‌ ಹೇಳಿದರು. ‌

ನಾನು ಏಕೆ ಬಿಜೆಪಿಯಲ್ಲಿರಬೇಕು?

ಯಾರು ನನ್ನ ವಿರುದ್ಧ ಕೆಲಸ ಮಾಡಿದರೋ, ಜೆಡಿಎಸ್ ಜತೆ ಕೈ ಜೋಡಿಸಿದರೋ ಅವರು ಈಗ ನನ್ನದೆ ಫೋಟೊ ಹಾಕಿಕೊಂಡು ಅದ್ಧೂರಿಯಾಗಿ ಜನ್ಮದಿನಾಚರಣೆ ಮಾಡುತ್ತಾರೆ. ಹಾಗಾದರೆ ನಾನು ಇಲ್ಲಿ ಪಕ್ಷವನ್ನು ಹೇಗೆ ಕಟ್ಟಲಿ? ನನ್ನ ಅಸಮಾಧಾನ ಇರುವುದು ಇಷ್ಟೇ. ನನಗೆ ರಾಜ್ಯಮಟ್ಟದ ನಾಯಕರ ವಿರುದ್ಧ ಅಸಮಾಧಾನವಿಲ್ಲ. ನಾಯಕರು ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ನನ್ನ ಅಸಮಾಧಾನ ಇದೆ. ನನ್ನ ವಿರುದ್ಧ ಕೆಲಸ ‌ಮಾಡಿ, ಜೆಡಿಎಸ್‌ನಿಂದ ಕೋಟ್ಯಂತರ ರೂಪಾಯಿ ಹಂಚಿರುವ ವಿಡಿಯೊ ಇದೆ. ಅವರನ್ನು ಕರೆಸಿ ಕೇಳುವ ಸೌಜನ್ಯ ಇಲ್ಲ ಎಂದಾದರೆ ನಾನು ಯಾಕೆ ಸ್ವಾಭಿಮಾನ ಬಿಟ್ಟು ಇಲ್ಲಿ ಇರಲು ಆಗುತ್ತದೆ? ಎಂದು ಎಸ್‌.ಟಿ. ಸೋಮಶೇಖರ್ ಪ್ರಶ್ನೆ ಮಾಡಿದರು.

ಪಕ್ಷ ವಿರೋಧಿ ಚಟುವಟಿಕೆ ಮಾಡಿದವರು ಈಗ ಸೋಷಿಯಲ್ ‌ಮೀಡಿಯದಲ್ಲಿಯೂ ಅಪ ಪ್ರಚಾರ ಮಾಡುತ್ತಿದ್ದಾರೆ. ಸೋಮಶೇಖರ್ ಲೋಕಸಭೆಗೆ ಹೋಗುತ್ತಾನೆ, ಮಗ ವಿಧಾನಸಭೆಗೆ ಬರುತ್ತಾನೆ ಎಂದು ಹಬ್ಬಿಸುತ್ತಿದ್ದಾರೆ. ಅದು ಯಾವುದೂ ಇಲ್ಲ, ನಾನು ಲೋಕಸಭೆಗೆ ಹೋಗುವ ಪ್ರಮೇಯ ಇಲ್ಲ. ಮಗನನ್ನು ರಾಜಕೀಯಕ್ಕೆ ತರುವ ಯೋಜನೆ ಇಲ್ಲ. ಅಧಿಕಾರಿಗಳಿಗೆ ಅಭಿವೃದ್ಧಿ ಬಗ್ಗೆ ಹೇಳಿದ್ದೇನೆ. ಆದರೂ ಆಗಿಲ್ಲ ಎಂದು ಉಸ್ತುವಾರಿ ಸಚಿವರನ್ನು ಕೇಳಿದ್ದೆ‌. ಕಾಂಗ್ರೆಸ್ ನಾಯಕರ ಬಗ್ಗೆ ಒಳ್ಳೆಯ ಮಾತಾಡಿದರೆ ಇವರಿಗೆ ಯಾಕೆ ಹೊಟ್ಟೆ ಉರಿ? ನನ್ನ ಸ್ನೇಹಿತರು ಪಕ್ಷ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ.. ಈಗ ಪಕ್ಷದ ಪ್ರಮುಖರು ಸಭೆ ಕರೆದಿದ್ದಾರೆ ಎಂದು ಎಸ್.ಟಿ. ಸೋಮಶೇಖರ್‌ ಹೇಳಿದರು.

ಉಸ್ತುವಾರಿ ಸಚಿವರನ್ನು ಭೇಟಿ ಮಾಡೋದು ಬೇಡ, ಒಳ್ಳೆಯ ಮಾತನಾಡೋದು ಬೇಡ ಎಂದು ಅಡ್ಡಗಾಲು ಹಾಕುವುದಾದರೆ ನಾನು ಶಾಸಕನಾಗಿ ಕೆಲಸ ಮಾಡೋದು ಹೇಗೆ? ಎಂದು ಸಹ ಎಸ್‌.ಟಿ. ಸೋಮಶೇಖರ್‌ ಪ್ರಶ್ನೆ ಮಾಡಿದರು.

ಎಸ್‌.ಟಿ. ಸೋಮಶೇಖರ್‌ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ: ಪರಮೇಶ್ವರ್

ಎಸ್.ಟಿ. ಸೋಮಶೇಖರ್ ಅವರಿಗೆ ಅವರ ಪಕ್ಷದಲ್ಲಿ ಬೇಸರ ಆಗಿದೆ ಅಂತ ಹಲವು ಬಾರಿ ಹೇಳಿದ್ದಾರೆ. ಅವರು ನಮ್ಮಲ್ಲಿ ಇದ್ದಾಗಲೂ ಬಹಳ ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ನಮ್ಮಲ್ಲೇ ಇದ್ದಿದ್ದರೆ ಈಗಲೂ ಸಚಿವರಾಗಬಹುದಿತ್ತು. ಅವರು ಎಲ್ಲವನ್ನೂ ಚರ್ಚೆ ಮಾಡಿಯೇ ಬರ್ತಿದ್ದಾರೆ. ನಮ್ಮ ಪಕ್ಷದ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಅವರು ಬರ್ತಾರೆ. ಜನ ಮನ್ನಣೆ ಗಳಿಸಿದರೆ ಅವರಿಗೆ ಅಧಿಕಾರವೂ ಸಿಗುತ್ತದೆ. ರಾಜಕೀಯದಲ್ಲಿ ಎಲ್ಲವೂ ಸಾಧ್ಯ ಇದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದರು.

ಇದನ್ನೂ ಓದಿ: Weather Report : 21 ಜಿಲ್ಲೆಗಳಲ್ಲಿ ಮಾತ್ರವೇ ಮಳೆ; ಬೆಂಗಳೂರಲ್ಲಿ ಹೇಗಿರಲಿದೆ?

ಕೆ.ಎಚ್. ಮುನಿಯಪ್ಪ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಅವರು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ನಾನ್ಯಾಕ್ರಿ ಎರಡೂವರೆ ವರ್ಷಕ್ಕೆ ಸಚಿವ ಸ್ಥಾನ ಬಿಟ್ಟುಕೊಡಬೇಕು? ಮುನಿಯಪ್ಪ ಹೇಳಿಕೆಗೆ ನನ್ನ ಸಹಮತ ಇಲ್ಲ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

Exit mobile version