Site icon Vistara News

Operation Hasta : 1 ತಿಂಗಳು ಟೈಂ ಕೊಡುವೆ 45 ಅಲ್ಲ 4 ಶಾಸಕರ ಸೆಳೆಯಿರಿ: ಬಿ.ಎಲ್.‌ ಸಂತೋಷ್‌ಗೆ ಪ್ರಿಯಾಂಕ್‌ ಖರ್ಗೆ ಸವಾಲು

Priyank Kharge challenges BL Santhosh for Operation hasta and Kamala

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.‌ ಸಂತೋಷ್‌ (BJP national organising secretary BL Santhosh) ಅವರು ನಮ್ಮ 45 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಆಪರೇಷನ್‌ ಹಸ್ತದ (Operation Hasta) ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅವರಿಗೆ ಒಂದು ದಿನ ಬೇಡ, ಒಂದು ತಿಂಗಳ ಸಮಯ ನೀಡುವೆ 45 ಶಾಸಕರು ಬೇಡ. ಕೇವಲ 4 ಜನ ಶಾಸಕರನ್ನು ತೆಗೆದುಕೊಂಡು ಹೋಗಲಿ ನೋಡೋಣ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ (Rural Development Minister Priyank Kharge) ಸವಾಲು ಹಾಕಿದ್ದಾರೆ. ಈ ಮೂಲಕ ಕರ್ನಾಟಕ ರಾಜಕೀಯದಲ್ಲಿ (Karnataka Politics) ಆಪರೇಷನ್‌ ಹಸ್ತ, ಕಮಲದ ಗುದ್ದಾಟ ಮುಂದುವರಿದಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ, ಬಿ.ಎಲ್‌. ಸಂತೋಷ್‌ ಅವರು ಮೊದಲು ಅವರ ಶಾಸಕರು ಹಾಗೂ ಸಂಸದರನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳಲಿ. ನಂತರ ಕಾಂಗ್ರೆಸ್ ಬಗ್ಗೆ ಮಾತನಾಡಲಿ ಎಂದು ಕಿಡಿಕಾರಿದರು.

ಆರ್‌ಎಸ್‌ಎಸ್‌ನವರು (RSS Organization) ಯಾವುದೇ ಪಕ್ಷದ ಜತೆ ಗುರುತಿಸಿಕೊಂಡಿಲ್ಲ ಎಂದು ಹೇಳುತ್ತಾರೆ. ಬಿಜೆಪಿ ಪಕ್ಷದಲ್ಲಿ ಹೋಗಿ ಪಾಠ ಹೇಳುತ್ತಾರೆ. ಆಪರೇಷನ್ ಕಮಲಕ್ಕೆ ಎಲ್ಲಿಂದ ದುಡ್ಡು ಬರುತ್ತಿದೆ? ಬಿ.ಎಲ್.‌ ಸಂತೋಷ್ ಅವರು ಇದಕ್ಕೆ ಉತ್ತರ ನೀಡಲಿ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಒತ್ತಾಯಿಸಿದರು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಸೇರಿದಂತೆ ಲಿಂಗಾಯತ ಸಮುದಾಯಕ್ಕೆ (Lingayat community) ಬಿಜೆಪಿ ಟಿಕೆಟ್ ನೀಡಲಿಲ್ಲ.‌ ಸಂತೋಷ್ ಪಡೆ ಕಟ್ಟಲು ಲಿಂಗಾಯತರಿಗೆ ಟಿಕೆಟ್ ನೀಡಿಲ್ಲ, ಅದು ವಿಫಲವಾಯಿತು ಎಂದು ನಿಮ್ಮ ಮಾಜಿ ಶಾಸಕರು ಹೇಳುತ್ತಿದ್ದಾರೆ. ಅದಕ್ಕೆ ಸಂತೋಷ್ ಮೊದಲು ಉತ್ತರ ನೀಡಲಿ, ನಂತರ ಶಾಸಕರ ಬಗ್ಗೆ ಮಾತನಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ಇದನ್ನೂ ಓದಿ: Weather report : ಮುಕ್ಕಾಲು ಕರ್ನಾಟಕಕ್ಕೆ ಮಳೆ ಸಿಂಚನ; ಹಲವೆಡೆ ಭರ್ಜರಿ, ಕೆಲವೆಡೆ ಸಾಧಾರಣ ವರುಣ

ಬಿಟ್‌ ಕಾಯಿನ್‌ ಬಗ್ಗೆ ಸಮರ್ಪಕ ತನಿಖೆ

ಶ್ರೀಕಿಯಿಂದ ಅಕ್ರಮವಾಗಿ ಬಿಟ್ ಕಾಯಿನ್ ವರ್ಗಾವಣೆ (Bitcoin Transfer) ವಿಚಾರವಾಗಿ ಈ ಹಿಂದಿನ ಸರ್ಕಾರ ಸಮರ್ಪಕ ತನಿಖೆ ನಡೆಸಿಲ್ಲ. ಸರಿಯಾಗಿ ತನಿಖೆ ಮಾಡಿದರೆ ತಮ್ಮ ಹೆಸರು ಹೊರಗೆ ಬರುತ್ತದೆ ಎಂದು ತನಿಖೆ ಮಾಡಿಸಿಲ್ಲ. ನಾವು ಬಂದ ನಂತರ ಎಸ್‌ಐಟಿ (SIT) ರಚನೆ ಮಾಡಿ, ತನಿಖೆ ಮಾಡಿಸುತ್ತಿದ್ದೇವೆ. ಸರಿಯಾದ ತನಿಖೆ ಆದಲ್ಲಿ ಎಲ್ಲರ ಹೆಸರು ಹೊರಗೆ ಬರುತ್ತದೆ. ಪ್ರಾಮಾಣಿಕವಾಗಿ ತನಿಖೆ ಮಾಡಿದರೆ 3ನೇ ಸಿಎಂ ಹೆಸರು ಹೊರಗೆ ಬರುತ್ತಿತ್ತು ಎಂದು ನಾನು ಮೊದಲೇ ಹೇಳಿದ್ದೆ. ತನಿಖೆಯು ತಾಂತ್ರಿಕವಾಗಿ, ಆಳವಾಗಿ ಹೋಗಬೇಕಾಗುತ್ತದೆ. ಡಾರ್ಕ್ ವೆಬ್, ಸೈಬರ್ ಕೇಸ್‌ಗಳ ಬಗ್ಗೆ ತಿಳಿದುಕೊಂಡವರ ಸಹಬಾಗಿತ್ವದಲ್ಲಿ ತನಿಖೆ ನಡೆಸಿದರೆ ಇನ್ನೂ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Exit mobile version