Site icon Vistara News

Operation Hasta : ಆಪರೇಷನ್‌ ಹಸ್ತ ಮಾಡಲ್ಲ, ಹಾಲಿ ಶಾಸಕರನ್ನು ಸೆಳೆಯಲ್ಲ; ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ

DK Shivakumar in Kpcc office and joining other party leaders

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಆಪರೇಷನ್‌ ಹಸ್ತ (Operation Hasta) ಬಹಳವೇ ಸದ್ದು ಮಾಡುತ್ತಿದೆ. ಈಗಾಗಲೇ ಬಿಜೆಪಿಯ ಒಂದಿಬ್ಬರು ಶಾಸಕರು ಕಾಂಗ್ರೆಸ್‌ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇದರ ಭಾಗವಾಗಿ ಹಲವಾರು ಮಾಜಿ ಶಾಸಕರು, ಸಂಸದರು ಸೇರಿದಂತೆ ಸ್ಥಳೀಯ ಮಟ್ಟದ ಮುಖಂಡರನ್ನು ಕೈ ಪಡೆ ಸೆಳೆದುಕೊಂಡಿದೆ. ಈಗ ಇದರ ಬಗ್ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (KPCC president and Deputy CM DK Shivakumar) ಹೇಳಿಕೆ ನೀಡಿದ್ದು, ಹಾಲಿ ಶಾಸಕರನ್ನು ನಾನು ಸಂಪರ್ಕ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೇವಲ ಮಾಜಿ ಶಾಸಕರನ್ನಷ್ಟೇ ಮುಟ್ಟುವುದಾಗಿ ಹೇಳಿಕೊಂಡಿದ್ದಾರೆ.

ರಾಜಕಾರಣದಲ್ಲಿ ಸಿದ್ಧಾಂತ ಮುಖ್ಯವಲ್ಲ ಎನ್ನುವ ಕೆಟ್ಟ ಸಂದೇಶವನ್ನು ಜೆಡಿಎಸ್- ಬಿಜೆಪಿ ಮೈತ್ರಿ ನೀಡಿದೆ. “ಜೆಡಿಎಸ್- ಬಿಜೆಪಿ ಮೈತ್ರಿ ನಂತರ ಪಕ್ಷ ಸೇರುವಂತಹವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಇದನ್ನೂ ಓದಿ: BJP JDS alliance : ಸೆಕ್ಯುಲರಿಸಂ ಅನ್ನು ನಾಶ ಮಾಡಿದ್ದೇ ಕಾಂಗ್ರೆಸ್‌: ಎಚ್.ಡಿ. ಕುಮಾರಸ್ವಾಮಿ ಕಿಡಿ

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜೆಡಿಎಸ್ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮಂಗಳವಾರ ರಾತ್ರಿ ಮೂರು ಜನ ಮಾಜಿ ಶಾಸಕರ ಜೊತೆ ಮಾತುಕತೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷ ಸೇರುವವರ ಸಂಖ್ಯೆ ಹೆಚ್ಚಾಗಲಿದೆ. ನಾವೆಲ್ಲ ಜಾತ್ಯತೀತ ಸರ್ಕಾರ ಇರಬೇಕು ಎಂದು ಹೋರಾಟ ಮಾಡಿದೆವು. ಈಗ ಸರ್ಕಾರ ಬೀಳಿಸಿದವರ ಜತೆಯಲ್ಲೇ ಕೈ ಜೋಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮೈತ್ರಿ ವಿರೋಧಿಸಿ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ

ಮೈತ್ರಿಯನ್ನು ವಿರೋಧಿಸಿ ಪಕ್ಷ ತೊರೆದು ಬರುತ್ತಿದ್ದಾರೆ. ನಮಗೆ ಮುಖಂಡರಿಗಿಂತ ಕಾರ್ಯಕರ್ತರು ಬಹಳ ಮುಖ್ಯ, ಶಿವಮೊಗ್ಗ, ರಾಮನಗರ, ಬೆಂಗಳೂರು ನಗರ ಹೀಗೆ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ತಂಡೋಪತಂಡವಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಮರ್ಥ್ಯವಿರುವ ಅಭ್ಯರ್ಥಿಗಳೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ನಾವೆಂದೂ ಆಪರೇಷನ್‌ ಹಸ್ತ ಮಾಡಲ್ಲ

ಆಪರೇಷನ್ ಹಸ್ತ ನಾವೆಂದೂ ಮಾಡುವುದಿಲ್ಲ, ನಮ್ಮದು ಕೋ- ಆಪರೇಷನ್ ಎಂದು ಪದೇ, ಪದೇ ಹೇಳುತ್ತಿದ್ದೇನೆ. ಕಾರ್ಯಕರ್ತರ ಮಟ್ಟದಲ್ಲಿ ಪಕ್ಷ ಸೇರ್ಪಡೆಗೆ ಸೂಚನೆ ನೀಡಿದ್ದೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ: Cauvery water dispute : ಬಿಜೆಪಿ-ಜೆಡಿಎಸ್‌ ಜಂಟಿ ಹೋರಾಟದಲ್ಲಿ ಕಾಣದ ಸಾಮ್ರಾಟ್; ಈ ಮಾಜಿಗಳೂ ಗೈರು!

ಮಾಜಿ ಆಶ್ರಯ ಸಮಿತಿಯ ಅಧ್ಯಕ್ಷ ಕೆ.ಎಂ.ಹೋಂಬೇಗೌಡ, ಎಪಿಎಂಸಿ ಸದಸ್ಯರಾದ ಟಿ.ಎ.ಮೂರ್ತಿ, ನಿವೃತ್ತ ಪಶುವೈದ್ಯಧಿಕಾರಿ ಡಾ.ರಾಜು, ಸಿಲ್ಕ್ ಮಂದಿರ್ ಮಾಲೀಕರಾದ ತಿಮ್ಮೇಗೌಡ ಅವರು ಸೇರಿದಂತೆ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾವರೆಕೆರೆ, ಸೂಲಿವಾರ, ಬ್ಯಾಲಾಳು, ದೊಣ್ಣೇನಹಳ್ಳಿ, ಕುರುಬರಪಾಳ್ಯ, ಉದ್ದಂಡಹಳ್ಳಿ, ಗೊಲ್ಲಹಳ್ಳಿ ಗ್ರಾಮಗಳ 70ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಸೇರ್ಪಡೆಯಾದರು.

Exit mobile version