ಬೆಂಗಳೂರು: ತಮ್ಮ ಮೇಲೆ ಮೊಟ್ಟೆ ಹೊಡೆದದ್ದು ಕಾಂಗ್ರೆಸ್ ಕಾರ್ಯಕರ್ತ ಎಂಬ ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ಪ್ರತಿಯೇಟು ನೀಡಿದ್ದಾರೆ. ಇದುವರೆಗೆ ಆಪರೇಷನ್ ಕಮಲ ಬಿಜೆಪಿ ಶಾಸಕರದ್ದು ನಡೆಯುತ್ತಿತ್ತು.. ಈಗ ಪುಂಡರ ಆಪರೇಷನ್ ಕೂಡಾ ನಡೆಯುತ್ತಿದೆಯಾ ಎಂದು ಅವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಇದುವರೆಗೆ ಬಿಜೆಪಿ ಕಾರ್ಯಕರ್ತನಾಗಿದ್ದವನು ಮೊಟ್ಟೆ ಎಸೆದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತ ಹೇಗಾದ ಎಂದು ಅವರು ಪ್ರಶ್ನಿಸಿದ್ದಾರೆ. ಮತ್ತು ಬಿಜೆಪಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಸಿದ್ದರಾಮಯ್ಯ ಕೇಳಿದ ಪ್ರಶ್ನೆಗಳು
– ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ ಶಾಸಕ ಅಪ್ಪಚ್ಚು ರಂಜನ್ ರಾತೋರಾತ್ರಿ ಪೊಲೀಸ್ ಠಾಣೆಗೆ ಹೋಗಿ ಬಿಡಿಸಿಕೊಂಡು ಯಾಕೆ ಬರಬೇಕಾಗಿತ್ತು?
– ಕಾಂಗ್ರೆಸ್‌ನವನೆಂದು ಹೇಳಿಕೊಂಡರೆ ಮಾತ್ರ ಪೊಲೀಸರಿಂದ ಬಿಡಿಸ್ತೇನೆ ಎಂದು ಷರತ್ತು ಹಾಕಿ ಬಿಡುಗಡೆ ಮಾಡಿದಿರಾ?
-‘ಆಪರೇಷನ್ ಕಮಲ’ ಎಂದರೆ ಶಾಸಕರಿಗೆ ಮಾತ್ರ ಎಂದು ತಿಳಿದುಕೊಂಡಿದ್ದೆವು. ಈಗ ಬೀದಿ ಪುಂಡರ ‘ಆಪರೇಷನ್ ಕಮಲ’ ಕೂಡಾ ನಡೆಸುತ್ತದೆ ಎಂದು ಮಡಿಕೇರಿಯಲ್ಲಿ ಸಾಬೀತಾಗಿದೆ.
-ಬಿಜೆಪಿಯ ಇಂತಹ ನಾಟಕಗಳೆಲ್ಲ ಹಳತಾಗಿದೆ. ಮೊಟ್ಟೆ ಎಸೆದವ ಕಾಂಗ್ರೆಸ್ ಪಕ್ಷದವನಾಗಿದ್ದರೆ ಅವನನ್ನು ಮೊದಲು ಜೈಲಿಗೆ ಕಳಿಸಿ. ನಿಮಗ್ಯಾಕೆ ಅವನ ಹಿತರಕ್ಷಣೆಯ ಉಸಾಬರಿ?
ತನಿಖೆ ನಡೆಸುತ್ತೇವೆ ಎಂದ ಸಿಎಂ
ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದವನು ಬಿಜೆಪಿ ಕಾರ್ಯಕರ್ತ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ಸಿಎಂ ಬಸವರಾಜ ಬೊಮ್ಮಾಯಿ ನಿರಾಕರಿಸಿದ್ದಾರೆ.
ʻʻಮೊಟ್ಟೆ ಎಸೆದಿದ್ದೇನೆ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತನೇ ಒಪ್ಪಿಕೊಂಡ ವಿಚಾರ. ಯಾರು ಏನೇ ಒಪ್ಪಿಕೊಳ್ಳಲಿ. ನಾನು ತನಿಖೆ ಮಾಡಿಸುತ್ತಿದ್ದೇನೆ. ನಾಳೆ ಇನ್ನೊಬ್ಬ ಮಾಡಿದ್ದು ಅಂತ ಕ್ಲೈಮ್ ಮಾಡಿಕೊಂಡರೆ ಅದರ ಬಗ್ಗೆಯೂ ತನಿಖೆ ಮಾಡಿಸುತ್ತೇವೆʼʼ ಎಂದ ಅವರು, ಎಸ್ ಪಿ ಜೊತೆ ಮಾತನಾಡಿದ ಬಳಿಕ ಪ್ರತಿಕ್ರಿಯೆ ಕೊಡುವುದಾಗಿ ಹೇಳಿದರು.
ಇದನ್ನೂ ಓದಿ | ಡಿಕೆ ಶಿವಕುಮಾರ್ ಅವರೇ ಮೊಟ್ಟೆ ಹೊಡೆಸಿರುವ ಸಾಧ್ಯತೆ ಇದೆ ಎಂದ ನಳಿನ್ ಕುಮಾರ್ ಕಟೀಲ್!