ಬೆಳಗಾವಿ: ಅಧಿಕಾರಿಗಳ ಕಣ್ಣು ತಪ್ಪಿಸಿ ಓಡಾಡುತ್ತಿರುವ ಚಿರತೆ ಸೆರೆಗೆ (Operation leopard) ಸಕ್ರೆಬೈಲು ಆನೆ ಬಿಡಾರದಿಂದ ಆಲೆ ಮತ್ತು ನೇತ್ರಾ ಎಂಬ ಎರಡು ಆನೆಯನ್ನು ಬೆಳಗಾವಿಗೆ ಕರೆಸಲಾಗಿದೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಗಜಪಡೆಯ ಹೊಟ್ಟೆ ತುಂಬಿಸಲು ರೈತರು ಬೆಳೆದಿದ್ದ ಕಬ್ಬು ಕದ್ದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಿಂದ ಬೆಳಗಾವಿಗೆ ಮಂಗಳವಾರ 2 ಆನೆಗಳು ಆಗಮಿಸಿವೆ. ಆದರೆ, ಅವುಗಳಿಗೆ ಆಹಾರದ ವ್ಯವಸ್ಥೆಯನ್ನು ಮಾಡಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮಾಡಿದ ಕೆಲಸವೇ ರೈತರ ಜಮೀನಿಗೆ ನುಗ್ಗಿದ್ದು ಎನ್ನಲಾಗಿದೆ. ಜಮೀನಿನಲ್ಲಿ ಬೆಳೆದಿರುವ ಕಬ್ಬು ಕಟಾವು ಮಾಡಿ ತಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮುತಗಾ ಗ್ರಾಮದ ರಾಜು ಕಣಬರಕರ್ ಗದ್ದೆಯಿಂದ ಕಬ್ಬು ಕಟಾವು ಮಾಡಿದ್ದಾರೆಂದು ಆರೋಪಿಸಲಾಗಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಯಾವುದೇ ಮಾಹಿತಿ ನೀಡದೆ 2 ಗುಂಟೆಯ ಕಬ್ಬು ತೆಗೆದುಕೊಂಡು ಹೋಗಿದ್ದಾರೆ. ಬೆಳಗ್ಗೆಯಷ್ಟೇ ಕಬ್ಬು ಕಟಾವು ಮಾಡಿ ತಗೆದುಕೊಂಡು ಹೋದ ಬಗ್ಗೆ ಗೊತ್ತಾಗಿದೆ. ಸಿಬ್ಬಂದಿ ಕಬ್ಬು ಕಟಾವಿನ ಸಂಬಂಧ ಮಾಹಿತಿಯಾದರೂ ನೀಡಬೇಕಿತ್ತು. ಹೇಳದೆ ಕೇಳದೆ ಕಬ್ಬು ಕಟಾವು ಮಾಡಿದ್ದಾರೆ ಎಂದು ರಾಜು ಕಣಬರಕರ್ ಅಸಮಾಧಾನ ಹೊರಹಾಕಿದ್ದಾರೆ.
ಕಳೆದ ಮೂರು ವರ್ಷಗಳಿಂದ ಮಳೆಯಿಂದ ರೈತರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಲ ಬೆಳೆದು ನಿಂತಿದ್ದ ಮೂರು ಟನ್ ಕಬ್ಬನ್ನು ಹೇಳದೇ ಕಟಾವು ಮಾಡಿದ್ದಾರೆ. ಅಧಿಕಾರಿಗಳು ಪರಿಹಾರ ಕೊಡದಿದ್ದರೆ ಕಬ್ಬು ಕಳುವಾದ ಬಗ್ಗೆ ದೂರು ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಪಷ್ಟೀಕರಣ ನೀಡಿಲ್ಲ.
ಇದನ್ನೂ ಓದಿ | Leopard Attack | ರಾತೋರಾತ್ರಿ ಎಮ್ಮೆ ಮೇಲೆ ದಾಳಿ ಮಾಡಿ ಪರಾರಿಯಾಗಿರುವ ಚಿರತೆ