Site icon Vistara News

Operation Leopard: ಕೊನೆಗೂ ನರಭಕ್ಷಕ ಚಿರತೆ ಸೆರೆ; ಇಲ್ಲೇ ಕೊಂದು ಬಿಡಿ, ಇಲ್ಲವೇ ನಮ್ಮನ್ನು ಕೊಂದು ಒಯ್ಯಿರಿ: ಗ್ರಾಮಸ್ಥರ ಕಿಡಿ

Leopard finally captured Villagers demand to kill leopard

ಮೈಸೂರು: ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಜನವರಿ ೨೧ರಂದು ತಡರಾತ್ರಿ ಚಿರತೆ ದಾಳಿಯಿಂದ (leopard attack) 11 ವರ್ಷದ ಬಾಲಕ ಬಲಿಯಾಗಿದ್ದರಿಂದ ಚಿರತೆ ಸೆರೆಗೆ ವ್ಯಾಪಕ ಕೂಗು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಂಡಲ್ಲಿ ಗುಂಡು ಹೊಡೆದು ಸಾಯಿಸಲು ಮೌಖಿಕ ಆದೇಶವನ್ನೂ ನೀಡಲಾಗಿತ್ತು. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಚಿರತೆ ಸೆರೆಗೆ ಟಾಸ್ಕ್‌ ಫೋರ್ಸ್‌ ರಚಿಸಲು ಸೂಚಿಸಿದ್ದರು. ಇದರ ಬೆನ್ನಲ್ಲೇ ಈಗ ನರಹಂತಕ ಚಿರತೆಯು ಗುರುವಾರ (ಜ.೨೬) ಬೋನಿನಲ್ಲಿ (Operation Leopard) ಸಿಕ್ಕಿಬಿದ್ದಿದೆ. ಆದರೆ, ಚಿರತೆಯನ್ನು ಕೊಂದು ಹಾಕಿಯೇ ಸ್ಥಳದಿಂದ ಅದನ್ನು ತೆಗೆದುಕೊಂಡು ಹೋಗುವಂತೆ ಜನತೆ ಪಟ್ಟುಹಿಡಿದಿದ್ದಾರೆ.

ಹೊರಳಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಸೆರೆ ಸಿಕ್ಕ ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ವೇಳೆ ಗ್ರಾಮಸ್ಥರಿಗೆ ಚಿರತೆ ಸೆರೆ ಸಿಕ್ಕಿರುವುದು ನೆಮ್ಮದಿಯ ವಿಚಾರವಾದರೂ, ಗ್ರಾಮದಲ್ಲಿ ಬಾಲಕನೊಬ್ಬನನ್ನು ಕೊಂದು ಹಾಕಿದ್ದ ಬಗ್ಗೆ ಸಿಟ್ಟು ಕಡಿಮೆಯಾಗಿರಲಿಲ್ಲ. ಹೀಗಾಗಿ ಚಿರತೆಯನ್ನು ಅಲ್ಲಿಯೇ ಕೊಂದು ಹಾಕುವಂತೆ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಹಿನ್ನೆಲೆ ಸೆರೆ ಸಿಕ್ಕಿರುವ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.

ಚಿರತೆಯನ್ನು ಕೊಲ್ಲಿ, ಇಲ್ಲವೇ ನಮ್ಮನ್ನು ಕೊಂದು ಅದನ್ನೊಯ್ಯಿರಿ: ಗ್ರಾಮಸ್ಥರ ಕಿಡಿ

ಚಿರತೆಯನ್ನು ಕೊಲ್ಲಲೇಬೇಕೆಂದು ಗ್ರಾಮಸ್ಥರು ಪಟ್ಟುಹಿಡಿದಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಅವರ ಮನವೊಲಿಸಲು ಪ್ರಯತ್ನಪಟ್ಟರು. ಆದರೆ, ಸಾರ್ವಜನಿಕರು ಅದನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: Republic Day : ಕರ್ತವ್ಯ ಪಥದಲ್ಲಿ ಕರ್ನಾಟಕದ ʼನಾರಿ ಶಕ್ತಿʼ ಪ್ರದರ್ಶನ; ಗಮನ ಸೆಳೆದ ಸುಗ್ಗಿ ನೃತ್ಯ: ಸಿಎಂ ಬೊಮ್ಮಾಯಿ ಪ್ರಶಂಸೆ

ಚಿರತೆಯನ್ನು ಕೊಲ್ಲಲೇಬೇಕೆಂದು ಪಟ್ಟುಹಿಡಿದಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ ವಾಹನಕ್ಕೆ ಅಡ್ಡಲಾಗಿ ಮಲಗಿ ಪ್ರತಿಭಟಿಸಿದರು. ಚಿರತೆಯನ್ನು ಕೊಂದು ಹಾಕಿ, ಇಲ್ಲವೇ ನಮ್ಮನ್ನು ಕೊಂದು ಚಿರತೆಯನ್ನು ತೆಗೆದುಕೊಂಡು ಹೋಗಿ ಎಂದು ಪಟ್ಟುಹಿಡಿದರು.

ಈ ಹಿಂದೆ ಸೆರೆ ಸಿಕ್ಕ ಚಿರತೆಗಳನ್ನು ಪುನಃ ಕಾಡಿಗೆ ಬಿಡಲಾಗುತ್ತಿತ್ತು. ಆಗ ಅವುಗಳು ಕಾಡಿನಿಂದ ಮತ್ತೆ ವಾಪಸ್ ಬರುವ ಸಂಭವ ಹೆಚ್ಚಿದೆ. ಹೀಗಾಗಿ ಸೆರೆ ಸಿಕ್ಕಿರುವ ಚಿರತೆಯನ್ನು ಬನ್ನೇರುಘಟ್ಟ ಮೃಗಾಲಯದಲ್ಲಿ ಬಿಡಲಾಗುತ್ತದೆ. ಇಷ್ಟಕ್ಕೇ ಚಿರತೆ ಸೆರೆ ಕಾರ್ಯಾಚರಣೆ ನಿಲ್ಲುವುದಿಲ್ಲ. ಮಂಗಳವಾರ (ಜ. ೨೪) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದ್ದು, ಚಿರತೆ ಉಪಟಳ ತಪ್ಪಿಸಲು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ತಾಲೂಕಿನಲ್ಲಿ 150ಕ್ಕೂ ಹೆಚ್ಚು ಬೋನ್‌ಗಳನ್ನು ಹೆಚ್ಚಿಸಲಾಗಿದೆ. ಡ್ರೋಣ್ ಮುಖಾಂತರ ಚಿರತೆಗಳ ಚಲನವಲನಗಳನ್ನು ಕಂಡು ಹಿಡಿಯಲಾಗುತ್ತದೆ ಎಂದು ಮೈಸೂರು ಉಪ ವಿಭಾಗಾಧಿಕಾರಿ ಕಮಲಬಾಯಿ ಹೇಳುವ ಮೂಲಕ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು.

ಶನಿವಾರ ತಡರಾತ್ರಿ ಚಿರತೆ ದಾಳಿ ಪ್ರಕರಣ

ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ (ಜ.೨೧) ತಡರಾತ್ರಿ ಚಿರತೆ ದಾಳಿ ನಡೆಸಿ ೧೧ ವರ್ಷದ ಜಯಂತ್‌ನನ್ನು ಎಳೆದುಕೊಂಡು ಹೋಗಿತ್ತು. ಜಯಂತ್ ಶವಕ್ಕಾಗಿ ಗ್ರಾಮಸ್ಥರು ರಾತ್ರಿಯಿಡಿ ಹುಡುಕಾಟ ನಡೆಸಿದ್ದರು. ಭಾನುವಾರ ಬೆಳಗ್ಗೆ ಜಯಂತ್‌ ಮೃತದೇಹ ಪತ್ತೆಯಾಗಿತ್ತು. ಬಾಲಕನ ರುಂಡವನ್ನು ಚಿರತೆ ಹೊತ್ತೊಯ್ದಿತ್ತು. ಇದು ಎಲ್ಲರನ್ನೂ ಆತಂಕಕ್ಕೆ ದೂಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು, ಜಿಲ್ಲಾಧಿಕಾರಿಗಳು ಹೊರಳಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಮಕ್ಕಳು, ಮಹಿಳೆಯರು, ವೃದ್ಧರು ಒಂಟಿಯಾಗಿ ಓಡಾಡಬಾರದು. ಸಂಜೆ 6 ಗಂಟೆಯೊಳಗೆ ಎಲ್ಲರೂ ಮನೆ ಸೇರಿಕೊಳ್ಳಬೇಕು. ಬಯಲು ಬಹಿರ್ದೆಸೆಗೆ ಹೋಗಬಾರದು. ಚಿರತೆಯ ಚಲನವಲನ ಕಂಡರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಬೇಕು ಎಂದು ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿತ್ತು.

ಗ್ರಾಮಸ್ಥರಿಂದ ಪ್ರತಿಭಟನೆ

ಹೊರಳಹಳ್ಳಿಯ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಚಿರತೆ ದಾಳಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಚಿರತೆಗಳ ದಾಳಿ ಹೆಚ್ಚಾಗುತ್ತಿದ್ದು, ಮನುಷ್ಯರು, ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಲೇ ಇವೆ. ನಮಗೆ ಮನೆಯಿಂದ ಹೊರಗೆ ಕಾಲಿಡಲೂ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಜ.23ರಂದು ನಾಯಿ, ಎಮ್ಮೆ ಮೇಲೆ ದಾಳಿ

ಮಂಡ್ಯದ ಮದ್ದೂರು ತಾಲೂಕಿನ‌ ಕೆ.ಬೆಳ್ಳೂರು ಗ್ರಾಮದಲ್ಲಿ ಜನವರಿ ೨೩ರ ರಾತ್ರಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಮನೆಯಲ್ಲಿದ್ದ ನಾಯಿಯನ್ನು ಹೊತ್ತೊಯ್ದಿತ್ತು. ಗ್ರಾಮದ ನರ್ಸರಿ ರಮೇಶ್ ಎಂಬುವವರು ಸಾಕಿದ್ದ ನಾಯಿಯ ಮೇಲೆ ಚಿರತೆ ದಾಳಿ ಮಾಡಿ ಹೊತ್ತೊಯ್ದಿತ್ತು. ಇನ್ನು ಮೈಸೂರಿನ ತಿ.ನರಸೀಪುರ ತಾಲೂಕಿನ ಸಿದ್ದನಹುಂಡಿಯಲ್ಲೂ ಅದೇ ದಿನ ಚಿರತೆ ದಾಳಿ ನಡೆಸಿದ್ದು, ರತ್ನಮ್ಮ ಎಂಬುವವರ ಮನೆ ಕೊಟ್ಟಿಗೆಯಲ್ಲಿದ್ದ ಎಮ್ಮೆಯನ್ನು ಕೊಂದು ಹಾಕಿತ್ತು.

ಇದನ್ನೂ ಓದಿ: Kuno Cheetah Health Update: ನಮೀಬಿಯಾದಿಂದ ತರಲಾದ ಚೀತಾಗೆ ಅನಾರೋಗ್ಯ, ಕಿಡ್ನಿಗೆ ಸೋಂಕು

ತಿ.ನರಸೀಪುರ ತಾಲೂಕಲ್ಲಿ ನವೆಂಬರ್‌ನಿಂದ ನಡೆದಿರುವ ದಾಳಿ

ತಿ.ನರಸೀಪುರ ತಾಲೂಕಿನ ಕಳೆದ ನವೆಂಬರ್‌ನಿಂದ ನಿರಂತರವಾಗಿ ಚಿರತೆ ದಾಳಿ ನಡೆದಿದ್ದು, ನಾಲ್ವರು ಬಲಿಯಾದಂತಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಜನತೆ ತೀವ್ರ ಆತಂಕ ಹಾಗೂ ಭಯದಲ್ಲಿದ್ದಾರೆ. ಮೃತಪಟ್ಟವರ ವಿವರ ಇಂತಿದೆ. ೨೦೨೨ ನವೆಂಬರ್‌ 1: ಉಕ್ಕಲಗೆರೆ ಮಂಜುನಾಥ್, ೨೦೨೨ ಡಿಸೆಂಬರ್‌ 2: ಎಸ್.ಕೆಬ್ಬೇಹುಂಡಿ ಮೇಘನಾ, ೨೦೨೩ ಜನವರಿ 20: ಕನ್ನಾಯಕನಹಳ್ಳಿ ಸಿದ್ದಮ್ಮ, ೨೦೨೩ ಜನವರಿ 22: ಹೊರಳಹಳ್ಳಿ ಜಯಂತ್ ದಾಳಿಯಲ್ಲಿ ಮೃತಪಟ್ಟಿದ್ದಾರೆ.

Exit mobile version