ಚಿಕ್ಕೋಡಿ: ಕುಂದಾನಗರಿ ಜನರ ನಿದ್ದೆಗೆಡಿಸಿರುವ ಚಿರತೆಯ ಸೆರೆ ಹಿಡಿಯಲು (Operation leopard) ಜಿಲ್ಲಾಡಳಿತವು ಅಲೆಮಾರಿಗಳ ಮೊರೆ ಹೋಗಿದೆ. ಪ್ರಾಣಿಗಳ ಚಲನವಲನಗಳ ಬಗ್ಗೆ ಇವರಿಗೆ ಅರಿವಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಸೋಮವಾರ ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭವಾಗಿದೆ.
ಬೆಳಗಾವಿ ನಗರದ ಗಾಲ್ಫ್ ಮೈದಾನದ ಬಳಿ ಚಿರತೆ ಪ್ರತ್ಯಕ್ಷವಾಗಿ ಸತತ 18 ದಿನಗಳ ಬಳಿಕ ಸೋಮವಾರ ಮತ್ತೆ ಚಿರತೆ ಸಾರ್ವಜನಿಕವಾಗಿ ರಸ್ತೆ ಬಳಿ ಕಾಣಿಸಿಕೊಂಡಿದ್ದು ಆತಂಕಕ್ಕೆ ಎಡೆಮಾಡಿದೆ. ನಗರದ ಗಾಂಧಿ ವೃತ್ತದ ಬಳಿ ಕಾಣಿಸಿಕೊಂಡ ಚಿರತೆಯನ್ನು ಸೆರೆ ಹಿಡಿಯಲು ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸರ್ವ ಸನ್ನಧ್ದಾಗಿರುವಾಗಲೇ ಕಣ್ಣೆದುರು ಕಾಣಿಸಿಕೊಂಡು ಕಣ್ಮರೆಯಾಗಿತ್ತು. ಡ್ರೋನ್, ಅರಿವಳಿಕೆ ಗನ್ ಇದ್ದರೂ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಅರಿವಳಿಕೆ, ಬಡಿಗೆಗಳಿದ್ದರೂ ತಪ್ಪಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಹುಕ್ಕೇರಿ ಪಟ್ಟಣದಿಂದ ಅಲೆಮಾರಿ ಜನಾಂಗವನ್ನು ಸಹ ನಿಯೋಜನೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಇದನ್ನೂ ಓದಿ | Operation Cheetah | ಹಿಂಡಲಗಾದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; 22 ಶಾಲೆಗಳಿಗೆ ರಜೆ ಘೋಷಣೆ
ಅಲೆಮಾರಿಗಳ ಆಪರೇಷನ್ ಆರಂಭ
ಹುಕ್ಕೇರಿ ಶಿಕಾರಿ ನಾಯಿಗಳಿಂದ ಚಿರತೆ ಆಪರೇಷನ್ ಆರಂಭವಾಗಿದ್ದು, ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಇವರಿಗೆ ಸಾಥ್ ನೀಡುತ್ತಿದ್ದಾರೆ. 10ಕ್ಕೂ ಅಧಿಕ ಶಿಕಾರಿ ನಾಯಿಗಳ ಜತೆಗೆ ಕೂಂಬಿಂಗ್ ಆರಂಭವಾಗಿದ್ದು, ಒಟ್ಟು 200 ಸಿಬ್ಬಂದಿ ಪಾಲ್ಗೊಂಡಿದ್ದಾರೆ.
ಇವರ ಆಯ್ಕೆ ಯಾಕೆ?
ಬಲೆ ಹಾಕಿ ಬೇಟೆಯಾಡುವ ಕಲೆ ಅಲೆಮಾರಿ ಜನಾಂಗಕ್ಕೆ ಮೊದಲಿನಿಂದಲೂ ಬಂದಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಪ್ರಾಣಿಗಳ ಚಲನವಲನ ಹಾಗೂ ಬಲೆ ಎಲ್ಲಿ ಹಾಕಬೇಕು ಎಂಬುದು ಚೆನ್ನಾಗಿಯೇ ತಿಳಿದಿರಲಿದೆ ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಜಿಲ್ಲಾಡಳಿತ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಅಲೆಮಾರಿ ಸಮುದಾಯದ ಕಲ್ಲೋಳಿ ಮಾರುತಿ ಯರಗಣ್ಣವರ, ಚಿರತೆ ಸೆರೆ ಹಿಡಿಯಲು ಬರುವಂತೆ ಅಧಿಕಾರಿಗಳು ಕರೆ ಮಾಡಿದ್ದಾರೆ. ಹೀಗಾಗಿ ನಮ್ಮಲ್ಲಿರುವ ಬಲೆಗಳು ಹಾಗೂ ನಾಯಿಗಳ ಸಹಿತ ೨೦ ಜನರ ತಂಡ ಬೆಳಗಾವಿಗೆ ಹೊರಟಿರುವುದಾಗಿ ಹೇಳಿದ್ದಾರೆ.
ಕಳೆದ ೧೮ ದಿನಗಳಿಂದಲೂ ಸಹ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಿಲ್ಲಾಡಳಿತಕ್ಕೆ ತಲೆನೋವಾಗಿರುವ ಚಿರತೆ ಅಲೆಮಾರಿ ಜನಾಂಗದವರು ಹಾಕುವ ಬಲೆಗೆ ಬೀಳಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.
ಇದನ್ನೂ ಓದಿ | Operation Cheetah | ಇನ್ನೇನು ಕೈಗೆ ಸಿಕ್ತು ಎನ್ನುವಾಗಲೇ ಕಣ್ಣೆದುರಿಗೇ ಚಿರತೆ ಜಸ್ಟ್ ಪಾಸ್!