Site icon Vistara News

Operation Leopard | ಟ್ರ್ಯಾಪ್‌ ಕ್ಯಾಮೆರಾ ಕಣ್ಣಿಗೆ ಬಿದ್ದ ಚಿರತೆ; 190 ಸಿಬ್ಬಂದಿ, 9 ಬೋನು, 2 ಆನೆ, 12 ಬಲೆ ಬಳಕೆ!

Operation Leopard

ಬೆಳಗಾವಿ: ಇಲ್ಲಿನ ಅರಣ್ಯಾಧಿಕಾರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಚಿರತೆ ಹಿಡಿಯುವುದೇ ದಿನನಿತ್ಯದ ಕಾಯಕವಾಗಿದ್ದು, ಗುರುವಾರವೂ ಚಿರತೆ ಸೆರೆ ಕಾರ್ಯಾಚರಣೆ (Operation Leopard) ಮುಂದುವರಿದಿದೆ. ಬೆಳಗಾವಿಯ ಹಿಂಡಲಗಾ ಪಕ್ಕದಲ್ಲಿರುವ ಗಾಲ್ಫ್‌ನ 250 ಎಕರೆ ಪ್ರದೇಶದಲ್ಲಿ ಚಿರತೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಬುಧವಾರದಿಂದ ಎರಡು ಆನೆಗಳ ಬಳಸಿ ನಡೆಸಿದ ಕೂಂಬಿಂಗ್ ನಿರಾಸೆಯಿಂದಲ್ಲೇ ಅಂತ್ಯವಾಗಿತ್ತು. ಹೀಗಾಗಿ ಗುರುವಾರವೂ ಆಪರೇಷನ್‌ ಚಿರತೆ ಕಾರ್ಯಾಚರಣೆ ಚುರುಕು ಪಡೆದುಕೊಂಡಿದ್ದು, ಬುಧವಾರ ರಾತ್ರಿ ಚಿರತೆ ಓಡಾಟದ ಚಿತ್ರಗಳು ಟ್ರ್ಯಾಪ್‌ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಅಳವಡಿಸಿದ್ದ ಟ್ರ್ಯಾಪ್ ಕ್ಯಾಮೆರಾ ಸಂಖ್ಯೆ 10ರಲ್ಲಿ ಬುಧವಾರ ರಾತ್ರಿ 10.22ರ ಸುಮಾರಿಗೆ ಚಿರತೆ ಸಂಚರಿಸಿದ ದೃಶ್ಯ ಸೆರೆಯಾಗಿದೆ. ಹೀಗಾಗಿ ಇದನ್ನು ಆಧರಿಸಿ ಅದೇ ಭಾಗದಲ್ಲಿ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ.

ಚಿರತೆ ಗಾಲ್ಫ್‌ ಮೈದಾನದಲ್ಲಿಯೇ ಓಡಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡಿರುವ ಸಿಬ್ಬಂದಿ, ಮೈದಾನದ ಸುತ್ತ ಬೆಳೆದ ಗಿಡಗಂಟಿಯನ್ನು ಎರಡು ಜೆಸಿಬಿ ಸಹಾಯದಿಂದ ಕ್ಲೀನ್ ಮಾಡಿಸಲಾಗುತ್ತಿದೆ. ಸ್ಥಳದಲ್ಲಿಯೇ ಡಿಎಫ್‌ಓ ಆ್ಯಂಥೋನಿ ಮರಿಯಪ್ಪ, ಎಸಿಎಫ್ ಮಲ್ಲಿನಾಥ್ ಕುಸನಾಳ ಬೀಡುಬಿಟ್ಟಿದ್ದಾರೆ.

ಶಾಲೆಗಳಿಗೆ ರಜೆ

ಬೆಳಗಾವಿಯ ಗಾಲ್ಫ್ ಮೈದಾನದ ಟ್ರ್ಯಾಪ್ ಕ್ಯಾಮೆರಾದಲ್ಲಿ ಮತ್ತೆ ಚಿರತೆ ಚಿತ್ರ ಸೆರೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಲಾಗಿದೆ. ಒಂದು ವೇಳೆ ಗುರುವಾರವೂ ಚಿರತೆ ಸೆರೆಯಾಗದಿದ್ದರೆ ಶುಕ್ರವಾರವೂ ರಜೆ ಮುಂದುವರಿಯುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕು ಉಂಟಾಗದೇ ಇರಲು ಆನ್‌ಲೈನ್‌ ಶಿಕ್ಷಣ ನೀಡಲಾಗುತ್ತಿದೆ.

ಫೀಲ್ಡಿಗಿಳಿದ ಅಧಿಕಾರಿಗಳು

ಗುರುವಾರದ ಚಿರತೆ ಕಾರ್ಯಾಚರಣೆಯಲ್ಲಿ ಮತ್ತೆ ಹುಕ್ಕೇರಿ ಹಂದಿ ಹಿಡಿಯುವ ತಂಡ ಭಾಗಿಯಾಗಿದೆ. ಗಾಲ್ಫ್ ಮೈದಾನದೊಳಗೆ ಅಳವಡಿಸಿದ್ದ ಒಂದು ಕ್ಯಾಮರಾದಲ್ಲಿ ಚಿರತೆ ಚಿತ್ರ ಸೆರೆ ಆಗಿದ್ದು, ಈ ನಿಟ್ಟಿನಲ್ಲಿ ಇಂದಿನ ಶೋಧ ಕಾರ್ಯದಲ್ಲಿ 23 ಟ್ರ್ಯಾಪ್ ಕ್ಯಾಮರಾ, 9 ಬೋನು, 140 ಅರಣ್ಯ ಸಿಬ್ಬಂದಿ, 50 ಪೊಲೀಸ್ ಸಿಬ್ಬಂದಿ ಜತೆಗೆ 100 ಮೀಟರ್ ಅಳತೆಯ 12 ಬಲೆಗಳು, ಎರಡು ಆನೆ ಹಾಗೂ 8 ಅರಿವಳಿಕೆ ಚುಚ್ಚುಮದ್ದು ಗನ್ ತಜ್ಞರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ | Operation leopard |ಬೆಳಗಾವಿಯಲ್ಲಿ ಸೆರೆಯಾಗದ ಚಿರತೆ; ನಾಳೆಯೂ ಮುಂದುವರಿಯಲಿದೆ ಕಾರ್ಯಾಚರಣೆ

Exit mobile version