ಆನೇಕಲ್: ಬೆಂಗಳೂರಿನ ಬೊಮ್ಮನಹಳ್ಳಿಯ ಕೂಡ್ಲು ಗೇಟ್ ಬಳಿ ಇರುವ ಕೃಷ್ಣಾ ರೆಡ್ಡಿ ಬಡಾವಣೆಯಲ್ಲಿ ಕಳೆದ ಮೂರು ದಿನಗಳಿಂದ ಜನರ ನಿದ್ದೆಗೆಡಿಸಿ ಕೊನೆಗೂ ಸೆರೆ ಸಿಕ್ಕಿದ ಚಿರತೆ ಈಗ ಪ್ರಾಣವನ್ನೇ ಕಳೆದುಕೊಂಡಿದೆ (Leopard dead). ಬುಧವಾರ ನಡೆಸಿದ ಹಲವು ಸುತ್ತಿನ ಕಾರ್ಯಾಚರಣೆಯ (Operation Leopard) ವೇಳೆ ಅದು ಗುಂಡೇಟಿಗೆ ಬಲಿಯಾಗಿದೆ.
ಕಳೆದ ಮೂರು ದಿನಗಳಿಂದ ಕೃಷ್ಣಾ ರೆಡ್ಡಿ ಬಡಾವಣೆಯ ಪಾಳು ಬಿದ್ದ ಹಳೆ ಕಟ್ಟಡವೊಂದರಲ್ಲಿ ವಾಸವಾಗಿ ಜನರನ್ನು ಕಂಗೆಡಿಸಿದ್ದ ಈ ಚಿರತೆಯನ್ನು ಬುಧವಾರ ನಡೆದ ಸಾಹಸಿಕ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿತ್ತು. ಮೂರು ದಿನಗಳ ಹಿಂದೆ ರಾತ್ರಿ ಪಾಳಿಯ ಪೊಲೀಸರ ಕಣ್ಣಿಗೆ ಬಿದ್ದಿದ್ದ ಈ ಚಿರತೆ ಪಾಳು ಕಟ್ಟಡದಲ್ಲಿದೆ ಎಂಬ ಮಾಹಿತಿಯಿಂದ ಜನರು ಭಯಗೊಂಡಿದ್ದರು. ಜನವಸತಿ ಪ್ರದೇಶವಾಗಿದ್ದರಿಂದ ಆತಂಕ ಇನ್ನೂ ಹೆಚ್ಚಿತ್ತು. ಈ ಭಾಗದಲ್ಲಿ ಮನೆಗಳು ಮಾತ್ರವಲ್ಲ, ಐಟಿ ಕಂಪನಿಗಳೂ ಇವೆ. ವಾಣಿಜ್ಯ ಕೇಂದ್ರಗಳೂ ಇವೆ. ಜತೆಗೆ ಚಿರತೆಯೊಂದು ಹಾಡಹಗಲೇ ಜನವಸತಿ ಇರುವ ಅಪಾರ್ಟ್ಮೆಂಟ್ ಒಂದರ ಮೆಟ್ಟಿಲು ಹತ್ತಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಕಂಡುಬಂದಿದ್ದವು.
ಹೀಗೆ ಕಟ್ಟಡದಲ್ಲೇ ಇದೆ ಎಂದು ಹೇಳಲಾಗಿದ್ದ ಚಿರತೆಯನ್ನು ಹಿಡಿಯಲು ಸೋಮವಾರ ಸಂಜೆಯಿಂದಲೇ ಕಾರ್ಯಾಚರಣೆ ಆರಂಭಗೊಂಡಿತ್ತು. ಮಂಗಳವಾರ ಸಂಜೆವರೆಗೂ ಇದು ಸಕ್ಸಸ್ ಆಗದ ಹಿನ್ನೆಲೆಯಲ್ಲಿ ಹುಣಸೂರಿನಿಂದ ವನ್ಯ ಜೀವಿ ರಕ್ಷಣಾ ತಂಡ ಆಗಮಿಸಿತ್ತು. ಜತೆಗೆ ವನ್ಯ ಜೀವಿ ಸಂರಕ್ಷಣಾ ವಿಭಾಗದ ಶಾರ್ಪ್ ಶೂಟರ್ಸ್ ಕೂಡಾ ಬಂದಿದ್ದರು.
ಬುಧವಾರ ಬೆಳಗ್ಗೆ ನಡೆಯಿತು ನಿರ್ಣಾಯಕ ಕಾರ್ಯಾಚರಣೆ
ಬುಧವಾರ ಮುಂಜಾನೆ ಕಟ್ಟಡದ ಎಲ್ಲ ಸ್ಕೆಚ್ಗಳೊಂದಿಗೆ ಕಾಲಿಟ್ಟ ಅರಣ್ಯಾಧಿಕಾರಿಗಳು, ವೈದ್ಯಾಧಿಕಾರಿಗಳಿಗೆ ಕಟ್ಟಡದ ಬೇಸ್ಮೆಂಟ್ನಲ್ಲೇ ಚಿರತೆ ಕಂಡಿದೆ. ಕೂಡಲೇ ಸಜ್ಜಿತರಾದ ಅಧಿಕಾರಿಗಳು ಅದಕ್ಕೆ ಅರಿವಳಿಕೆ ಪ್ರಯೋಗವನ್ನು ನಡೆಸಿದ್ದಾರೆ. ಆದರೆ ಆ ಹೊತ್ತಿಗೇ ಚಿರತೆ ಇಬ್ಬರು ವೈದ್ಯಾಧಿಕಾರಿಗಳ ಮೇಲೆ ದಾಳಿ ಮಾಡಿ ಅಲ್ಲಿಂದ ಪರಾರಿಯಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ವೈದ್ಯರನ್ನು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಯಿತು.
ಚಿರತೆಗೆ ಮೊದಲ ಸುತ್ತಿನ ಅರಿವಳಿಕೆ ನೀಡಲಾಗಿದೆ ಎಂದು ಹೇಳಲಾಗಿದೆ. ಹಾಗೆ ಸ್ವಲ್ಪ ಮಂಪರಿಗೆ ಸರಿದಂತೆ ಕಂಡ ಚಿರತೆ ಕೆಲವೇ ನಿಮಿಷದಲ್ಲಿ ಎಚ್ಚೆತ್ತು ದಾಳಿ ಮಾಡಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಯಾವುದೇ ಪ್ರಾಣಿಗೆ ಅರವಳಿಕೆ ಮದ್ದು ನೀಡಬೇಕಾದ್ರೆ ಹೆಚ್ಚು ಮಾಂಸ ಇರುವ ಸ್ಥಳ ನೋಡಿ ಹೊಡೆಯಬೇಕು. ಆದರೆ, ಅರಿವಳಿಕೆ ಹಾಕುವ ಪ್ರಯತ್ನದಲ್ಲಿ ವೈದ್ಯರು ವಿಫಲವಾಗಿದ್ದಾರೆ. ಎರಡು ಬಾರಿ ಅರವಳಿಕೆ ಮದ್ದು ಹೊಡೆದರೂ ಸರಿಯಾದ ಜಾಗಕ್ಕೆ ಬಿದ್ದಿರಲಿಲ್ಲ ಎನ್ನಲಾಗಿದೆ. ಎರಡನೇ ಬಾರಿ ಹೊಡೆದ ಅರಿವಳಿಕೆ ಯಶಸ್ವಿಯಾಗಿದೆ ಎಂದು ತಿಳಿದು ಡಾ. ಕಿರಣ್ ಅವರು ಪರಿಶೀಲನೆಗೆ ಮುಂದಾಗಿದ್ದರು ಎನ್ನಲಾಗಿದೆ. ಅಷ್ಟರಲ್ಲಿ ಚಿರತೆ ಕಿರಣ್ ಮೇಲೆ ದಾಳಿ ಮಾಡಿ ಎಸ್ಕೇಪ್ ಆಗಿದೆ. ಕುತ್ತಿಗೆ ಭಾಗ ಮತ್ತು ಕೈಗೆ ಪರಚಿ ಎಸ್ಕೇಪ್ ಆಗಿದೆ. ಓಡುವ ಭರದಲ್ಲಿ ಇನ್ನಿಬ್ಬರ ಮೇಲೆಯೂ ದಾಳಿ ಮಾಡಿತ್ತು.
ಮೇಲಿನ ಮಹಡಿಗಳಿಗೆ ಓಡಿದ ಚಿರತೆ
ಬೇಸ್ಮೆಂಟ್ನಿಂದ ಮೇಲಿನ ಮಹಡಿಗಳಿಗೆ ಓಡಿದ ಚಿರತೆಯನ್ನು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಲ್ಲಿಗೂ ಬಿಡದೆ ಬೆನ್ನಟ್ಟಿದ್ದರು. ಈ ನಡುವೆ ಅದು ಮಹಡಿಯಿಂದ ಮಹಡಿಗೆ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿತು. ಕೊನೆಗೆ ಅದು ಪಾಳು ಬಿದ್ದ ಕಟ್ಟಡದ ಪಕ್ಕದಲ್ಲಿರುವ ಖಾಲಿ ಸೈಟ್ಗೆ ಹಾರಿತು. ಅಲ್ಲಿ ಸಾಕಷ್ಟು ಪೊದೆಗಳು ಇದ್ದುದರಿಂದ ಅದಕ್ಕೆ ರಕ್ಷಣೆ ಪಡೆಯಲು ಸಹಾಯವಾಗಿತ್ತು.
ಈ ನಡುವೆ ಅರಣ್ಯಾಧಿಕಾರಿಗಳು ಜೆಸಿಬಿಯನ್ನು ತರಿಸಿ ಖಾಲಿ ಜಾಗವನ್ನು ಲೆವೆಲ್ ಮಾಡಿದರು. ಮಾತ್ರವಲ್ಲ, ಜೆಸಿಬಿಯನ್ನು ಬಳಸಿಕೊಂಡೇ ವೈದ್ಯರು ಅರಿವಳಿಕೆ ನೀಡಲು ಮುಂದಾದರು. ಅಂತಿಮವಾಗಿ ಅದು ಅಲ್ಲಿಂದ ತಪ್ಪಿಸಿಕೊಂಡು ಓಡಿತಾದರೂ ಅಲ್ಲಿ ಕಟ್ಟಿದ್ದ ಬಲೆಯಲ್ಲಿ ಬಿದ್ದು ಒದ್ದಾಡಿತು.
ಬೊಮ್ಮನಹಳ್ಳಿಯಲ್ಲಿ ಸೆರೆಸಿಕ್ಕ ಈ ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಶಿಫ್ಟ್ ಮಾಡಲಾಯಿತು. ಅಲ್ಲಿಗೆ ಒಯ್ಯುವ ವೇಳೆ ಬನ್ನೇರುಘಟ್ಟ ವೈದ್ಯಕೀಯ ಆಸ್ಪತ್ರೆಗೆ ಒಯ್ದು ಪರೀಕ್ಷೆ ನಡೆಸಿದಾಗ ಅದು ಪ್ರಾಣ ಕಳೆದುಕೊಂಡಿರುವುದು ಗೊತ್ತಾಗಿದೆ. ಜೈವಿಕ ಉದ್ಯಾನವನದ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಚಿರತೆಯನ್ನು ಗುಂಡಿಟ್ಟು ಕೊಂದ ಅಧಿಕಾರಿಗಳು
ಈ ನಡುವೆ, ಈ ಸಾವಿನ ಬಗ್ಗೆ ಹಲವು ಪ್ರಶ್ನೆಗಳು ಎದುರಾಗಿವೆ. ಚಿರತೆಗೆ ಹಲವು ಬಾರಿ ಅರಿವಳಿಕೆ ನೀಡಿದ ಕಾರಣದಿಂದಾಗಿ ಸಾವು ಸಂಭವಿಸಿತಾ? ಅಥವಾ ಅದಕ್ಕೆ ಗುಂಡಿಟ್ಟು ಸಾಯಿಸಲಾಯಿತಾ ಎಂಬ ಚರ್ಚೆ ನಡೆದಿದೆ.
ಕಟ್ಟಡದಿಂದ ಜಿಗಿದ ಚಿರತೆ ಪಕ್ಕದ ಒಂದು ಖಾಲಿ ಜಾಗದ ಕುರುಚಲು ಸಸ್ಯಗಳ ನಡುವೆ ಆಶ್ರಯ ಪಡೆದಿತ್ತು. ಜೆಸಿಬಿ ಮೂಲಕ ಅದು ಅಡಗಿದ್ದ ಪೊದೆಯನ್ನು ಸರಿಸಲಾಯಿತು. ಇದರಿಂದ ಹೆದರಿದ ಅದು ವಿರುದ್ಧ ದಿಕ್ಕಿನಲ್ಲಿ ಓಡಿತು. ಆ ದಾರಿಯಲ್ಲಿ ದೊಡ್ಡ ಬಲೆಯನ್ನೇ ಹಾಕಲಾಗಿತ್ತು. ಅದರಲ್ಲಿ ಚಿರತೆ ಸಿಕ್ಕಿಹಾಕಿಕೊಂಡಿತು. ಈ ನಡುವೆ, ಚಿರತೆ ಇನ್ನೂ ಆಕ್ರೋಶಿತವಾಗಿರುವುದನ್ನು ಕಂಡ ಅರಣ್ಯಾಧಿಕಾರಿಯೊಬ್ಬರು ಗುಂಡು ಹಾರಿಸಿದ್ದಾರೆ.
ಚಿರತೆ ಸಾವು ಖಚಿತ ಪಡಿಸಿದ ಸಿಸಿಎಫ್ ಲಿಂಗರಾಜು ಅವರು ಗುಂಡು ಹಾರಿಸಿದ್ದನ್ನು ಖಚಿತಪಡಿಸಿದ್ದಾರೆ.
ʻʻ ಬೆಳಗ್ಗೆ ವೈದ್ಯರು ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ ಮಾಡಿದೆ. ಈ ವೇಳೆ ವೈದ್ಯರು ಮತ್ತು ಓರ್ವ ಸಿಬ್ಬಂದಿಗೆ ಗಂಭೀರ ಗಾಯವಾಗಿದೆ. ಹಾಗಾಗಿ ಮೇಲಾಧಿಕಾರಿಗಳಿಗೆ ದಾಳಿ ಬಗ್ಗೆ ಮಾಹಿತಿ ನೀಡಿದೆವು. ಆಗ ಅವರು ಅನಿವಾರ್ಯ ಸಂದರ್ಭದಲ್ಲಿ ಗುಂಡೇಟಿಗೆ ಅನುಮತಿ ನೀಡಿದರು. ಸಂಜೆ ಅರವಳಿಕೆ ಚುಚ್ಚು ಮದ್ದು ನೀಡಿದ ಬಳಿಕವೂ ಅದು ಸಿಬ್ಬಂದಿ ಮೇಲೆ ದಾಳಿಗೆ ಯತ್ನ ಮಾಡಿದೆ. ಈ ವೇಳೆ ಆತ್ಮ ರಕ್ಷಣೆಗಾಗಿ ಚಿರತೆಗೆ ಗುಂಡೇಟು ಹೊಡೆಯಲಾಗಿದೆ. ಚಿಕಿತ್ಸೆಗಾಗಿ ಕೂಡಲೇ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಶಿಫ್ಟ್ ಮಾಡಿದೆವು. ಆದರೆ, ಅದಾಗಲೇ ಚಿರತೆ ಸಾವನ್ನಪ್ಪಿತ್ತುʼʼ ಎಂದು ಅವರು ಹೇಳಿಕೆ ನೀಡಿದ್ದಾರೆ.
ಈ ಚಿರತೆಯನ್ನು ಹಿಡಿಯುವ ವಿಚಾರದಲ್ಲಿ ಅಧಿಕಾರಿಗಳು ಆರಂಭದಿಂದಲೂ ಎಡವಟ್ಟು ಮಾಡಿಕೊಂಡಿದ್ದರು. ಬೆಳಗ್ಗೆ ವೈದ್ಯರು ಎರಡು ಸುತ್ತು ಅರಿವಳಿಕೆ ನೀಡಿ ಅದನ್ನು ಪರೀಕ್ಷಿಸಲೆಂದು ಹತ್ತಿರ ಹೋಗಿದ್ದೂ ದೊಡ್ಡ ಎಡವಟ್ಟು. ಆಗ ಚಿರತೆ ಎಚ್ಚೆತ್ತು ಮೂವರ ಮೇಲೆ ದಾಳಿ ಮಾಡಿ ಅಲ್ಲಿಂದ ತಪ್ಪಿಸಿಕೊಂಡಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.
ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ