Site icon Vistara News

Operation leopard |ಬೆಳಗಾವಿಯಲ್ಲಿ ಸೆರೆಯಾಗದ ಚಿರತೆ; ನಾಳೆಯೂ ಮುಂದುವರಿಯಲಿದೆ ಕಾರ್ಯಾಚರಣೆ

Operation leopard

ಬೆಳಗಾವಿ: ನಗರದಲ್ಲಿ ಕಣ್ಣು ತಪ್ಪಿಸಿ ಓಡಾಡುತ್ತಿರುವ ಚಿರತೆ ಪತ್ತೆಗಾಗಿ ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದು, 21ನೇ ದಿನದ ಕಾರ್ಯಾಚರಣೆಯೂ (Operation leopard) ನಿರಾಸೆಯಿಂದಲೇ ಅಂತ್ಯಗೊಂಡಿದೆ. ಬುಧವಾರ ಚಿರತೆ ಸೆರೆಗೆ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದ ಬಂದಿದ್ದ ಆಲೆ ಮತ್ತು ನೇತ್ರಾ ಎಂಬ ಎರಡು ಆನೆಗಳು ನೆರವಾಗಿದ್ದವು. ಆದರೂ ಏನೂ ಪ್ರಯೋಜನವಾಗಲಿಲ್ಲ.

ಗಾಲ್ಫ್‌ನ 250 ಎಕರೆ ಪ್ರದೇಶದಲ್ಲಿ ಎರಡು ಆನೆಗಳ ಬಳಸಿ ಮಧ್ಯಾಹ್ನ 12.30 ರಿಂದ ಕೂಂಬಿಂಗ್‌ ಕಾರ್ಯಾಚರಣೆ ನಡೆಸಲಾಯಿತು. 250 ಎಕರೆ ಪ್ರದೇಶದಲ್ಲಿ 7 ಕಿಮೀ ವ್ಯಾಪ್ತಿಯಲ್ಲಿ ಕೂಂಬಿಂಗ್‌ ನಡೆದಿದೆ. ಕಾರ್ಯಾಚರಣೆ ವೇಳೆ ಅಲ್ಲಲ್ಲಿ ಕೆಲವೆಡೆ ಚಿರತೆ ಓಡಾಡಿದ ಕುರುಹುಗಳು ಪತ್ತೆಯಾಗಿವೆ. ಹಂದಿ ಬೇಟೆಯಾಡಿ ಅರ್ಧ ಮಾಂಸ ತಿಂದು ಬಿಸಾಕಿರುವುದು ಪತ್ತೆಯಾಗಿದೆ. ಆದರೆ ಚಿರತೆ ಎಲ್ಲಿ ಅಡಗಿದೆ ಎಂದು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.

ಹುಕ್ಕೇರಿಯಿಂದ ಶ್ವಾನ, ಹಂದಿ ಬಲೆ ಬಳಕೆ

ಬಲೆ ಹಾಕಿ ಬೇಟೆಯಾಡುವ ಕಲೆ ಗೊತ್ತಿರುವ ಅಲೆಮಾರಿ ಜನಾಂಗದವರ ನೆರವನ್ನೂ ಈ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಪ್ರಾಣಿಗಳ ಚಲನವಲನ ಹಾಗೂ ಬಲೆ ಎಲ್ಲಿ ಹಾಕಬೇಕು ಎಂಬುದು ಚೆನ್ನಾಗಿಯೇ ಅಲೆಮಾರಿಗಳಿಗೆ ತಿಳಿದಿರಲಿದೆ. ಅವರನ್ನು ಕರೆಸಿ, ಹಂದಿ ಬಲೆ ಕಟ್ಟಲಾಗುತ್ತಿದೆ. ಹುಕ್ಕೇರಿ ಶಿಕಾರಿ ನಾಯಿಗಳಿಂದ ಚಿರತೆಯನ್ನು ಪತ್ತೆ ಹಚ್ಚುವ ತಂತ್ರಗಾರಿಕೆಯನ್ನೂ ಬಳಸಲಾಗಿದೆ.

ಗುರುವಾರ ಶಾಲೆಗಳಿಗೆ ರಜೆ ಮುಂದುವರಿಕೆ

ಚಿರತೆ ಸೆರೆ ಸಿಗದ ಹಿನ್ನೆಲೆಯಲ್ಲಿ ಗಾಲ್ಫ್ ಮೈದಾನದ ಒಂದು ಕಿ.ಮೀ ವ್ಯಾಪ್ತಿಯ 22 ಶಾಲೆಗಳಿಗೆ ಗುರುವಾರವೂ ರಜೆ ಮುಂದುವರಿಸಲಾಗಿದೆ. ಮಕ್ಕಳಿಗೆ ಶಿಕ್ಷಣಕ್ಕೆ ತೊಡಕು ಆಗದಂತೆ ಆನ್‌ಲೈನ್ ಮೂಲಕ ಪಾಠ ಮಾಡಲು ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ.

ಚಿರತೆ ಹೆಜ್ಜೆ ಗುರುತು…

ಜಾಧವ್‌ ನಗರದ ಬಳಿ ಆಗಸ್ಟ್‌ ೫ರಂದು ಕಾರ್ಮಿಕರೊಬ್ಬರ ಮೇಲೆ ದಾಳಿ ಮಾಡಿದ ಚಿರತೆ ಬಳಿಕ ನಾಪತ್ತೆಯಾಗಿತ್ತು. ಜಾಧವ್‌ ನಗರದ ಗಾಲ್ಫ್‌ ಮೈದಾನದಲ್ಲಿ ಈ ಚಿರತೆ ಅಡಗಿಕೊಂಡಿದೆ ಎಂದು 20ಕ್ಕೂ ಹೆಚ್ಚು ದಿನಗಳಿಂದ ಹುಡುಕಾಟ ನಡೆಸಲಾಗಿತ್ತು. ಗಾಲ್ಫ್ ಮೈದಾನ ಇರುವ 250 ಎಕರೆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು.

ಇದಕ್ಕಾಗಿ 22 ಟ್ರ್ಯಾಪ್ ಕ್ಯಾಮೆರಾ, 8 ಬೋನುಗಳನ್ನು ಇರಿಸಲಾಗಿತ್ತು. ಚಿರತೆಗಾಗಿ ೫೦ ಮಂದಿ ಅರಣ್ಯ ಮತ್ತು ಪೊಲೀಸ್‌ ಸಿಬ್ಬಂದಿ ಕಾವಲು ಕಾಯುತ್ತಿದ್ದರು. ಆದರೂ ಚಿರತೆ ಕಣ್ಣಿಗೆ ಬಿದ್ದಿರಲಿಲ್ಲ. ಈ ನಡುವೆ, ಆಗಸ್ಟ್‌ ೭ ಮತ್ತು ೮ರಂದು ಸಿಸಿ ಕ್ಯಾಮೆರಾದಲ್ಲಿ ಚಿರತೆ ಸೆರೆಯಾಗಿತ್ತು. ಚಿರತೆಯ ಕಾರಣದಿಂದಾಗಿ ಜಾಧವ ನಗರ ಹಲವು ದಿನಗಳ ಕಾಲ ಪೂರ್ಣವಾಗಿ ಬಂದ್‌ ಆಗಿದೆ. ಶಾಲೆಗಳನ್ನೂ ಮುಚ್ಚಲಾಗಿದೆ.

ಆಗಸ್ಟ್‌ 19ರಂದು ಬೃಹತ್‌ ಕಾರ್ಯಾಚರಣೆಯ ಮೂಲಕ ಎಲ್ಲಿದ್ದರೂ ಹುಡುಕುವ ಪ್ರಯತ್ನವೊಂದು ನಡೆಯಿತು. ಆದರೆ, ಆಗಲೂ ಚಿರತೆ ಕಣ್ಣಿಗೆ ಕಾಣಲಿಲ್ಲ. ಗಾಲ್ಫ್‌ ಪ್ರದೇಶದಿಂದ ಚಿರತೆ ಬೇರೆಡೆಗೆ ಹೋಗಿರಬಹುದು ಎಂದು ಭಾವಿಸಲಾಗಿತ್ತು. ಈಗ ಮತ್ತೆ ಆಗಸ್ಟ್‌ 22ರ ಬೆಳಗ್ಗೆ ಖಾಸಗಿ ಕಂಪನಿಯ ಬಸ್ ಚಾಲಕರೊಬ್ಬರ ಮೊಬೈಲ್‌ನಲ್ಲಿ ಚಿರತೆ ಚಲನವಲನ ಸೆರೆಯಾಗಿತ್ತು. ಹಿಂಡಲಗಾದ ರಸ್ತೆಯಲ್ಲಿ ಬಸ್ಸು ಓಡಿಸಿಕೊಂಡು ಹೋಗುವಾಗ ಚಿರತೆಯೊಂದು ಮುಖ್ಯರಸ್ತೆ ದಾಟಿ ಹೋಗಿತ್ತು. ಬಳಿಕ ಆಗಸ್ಟ್‌ 22ರಂದೇ ಚಿರತೆ ಸೆರೆಗೆ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ‌ ಸಿಬ್ಬಂದಿ ಎದುರೆ ಡಬಲ್ ರೋಡ್ ಕ್ರಾಸ್‌ ಮಾಡಿದ ಚಿರತೆ ಮತ್ತೆ ಗಾಲ್ಫ್ ಮೈದಾನಕ್ಕೆ ನುಗ್ಗಿತ್ತು.

ಇದನ್ನೂ ಓದಿ | Operation Leopard | ಚಿರತೆ ಸೆರೆಗೆ ಹಂದಿ ಬಲೆ ಬೀಸಿದ ಸಿಬ್ಬಂದಿ!

Exit mobile version