ಬೆಳಗಾವಿ: ಕುಂದಾನಗರಿ ಬೆಳಗಾವಿಯ ಚಿರತೆ ಸೆರೆಯು (Operation Leopard) ರಾಮಾಯಣದ ಮಾಯಾ ಜಿಂಕೆಯ ಕತೆಯಂತಾಗಿದೆ. ಅರಣ್ಯ ಅಧಿಕಾರಿಗಳ ಮುಂದೆ ಪ್ರತ್ಯಕ್ಷವಾಗಿ ಕ್ಷಣಾರ್ಧದಲ್ಲಿಯೇ ಚಿರತೆ ಮಾಯಾವಾಗುತ್ತಿದೆ. ಚಿರತೆ ಹಿಡಿಯಲು ಬೆಳಗಾವಿಯ ಅರಣ್ಯಾಧಿಕಾರಿ, ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದಾರೆ.
ಇಲ್ಲಿನ ಹಿಂಡಲಗಾದಲ್ಲಿ ಚಿರತೆ ಶೋಧ ಕಾರ್ಯವು 21ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ಚಿರತೆ ಶೋಧಕ್ಕೆ ಆನೆ ಬಲ ಸಿಕ್ಕಿದ್ದು, ಜತೆಗೆ 8ಕ್ಕೂ ಅಧಿಕ ಪರಿಣಿತರೂ ಬೆಳಗಾವಿಗೆ ದೌಡಾಯಿಸಿದ್ದಾರೆ. ಚಿರತೆ ಸೆರೆ ಹಿಡಿಯಲು ನಾನಾ ಕಾರ್ಯತಂತ್ರದ ಪ್ರಯೋಗ ನಡೆಯುತ್ತಿರುವ ಹೊತ್ತಿನಲ್ಲಿಯೇ ಹಂದಿ ಬಲೆ ಬೀಸಲು ಸಿಬ್ಬಂದಿ ಸಜ್ಜಾಗುತ್ತಿದ್ದಾರೆ.
ಕತ್ತಿ ಸೂಚನೆ ಮೇರೆಗೆ ಹಂದಿ ಬಲೆ
ಅರಣ್ಯ ಸಚಿವ ಉಮೇಶ ಕತ್ತಿ ಸೂಚನೆ ಮೇರೆಗೆ ಹುಕ್ಕೇರಿಯಿಂದ ಹಂದಿ ಹಿಡಿಯುವ ಮಂದಿಯನ್ನು ಕಾರ್ಯಾಚರಣೆಗಾಗಿ ಕಳುಹಿಸಿದ್ದಾರೆ. ಶಿಕಾರಿ ನಾಯಿ, ಶಿವಮೊಗ್ಗದ ಆನೆ, ಬೆಂಗಳೂರು ಡ್ರೋಣ್ ಜತೆಗೆ ಈಗ ಹಂದಿ ಹಿಡಿಯುವವರು ಚಿರತೆಗೆ ಬಲೆ ಬೀಸಲು ಬೆಳಗಾವಿಗೆ ಆಗಮಿಸಿ ಕಾರ್ಯನಿರತರಾಗಿದ್ದಾರೆ.
ಚಿರತೆ ಸೆರೆಗೆ ಹಂದಿ ಹಿಡಿಯುವ ಬಲೆ ಬಳಕೆ ಮಾಡಲಾಗುತ್ತಿದ್ದು, ಬೆಳಗಾವಿಯ ಗಾಲ್ಫ್ ಮೈದಾನದ ಸುತ್ತ ಹಂದಿ ಬಲೆ ಅಳವಡಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಮಾತನಾಡಿರುವ ಈರಪ್ಪ, ಸಚಿವ ಉಮೇಶ್ ಕತ್ತಿ ಅವರು ನಮ್ಮನ್ನು ಕಳಿಸಿದ್ದಾರೆ. ಹೀಗಾಗಿ ಚಿರತೆ ಹಿಡಿಯಲು ಬಂದಿದ್ದೇವೆ. “ಚಿರತೆ ಹಿಡೀರಿ ನಿಮ್ಮದಾ ಹವಾ ಆಗ್ತೇತಿ” ಎಂದು ಹೇಳಿದ್ದು, ಅವರ ಸೂಚನೆ ಮೇರೆಗೆ ಆಗಮಿಸಿದ್ದೇವೆ ಎಂದಿದ್ದಾರೆ. ಗಜಪಡೆಗೆ ಹುಕ್ಕೇರಿಯ ಹಂದಿ ಹಿಡಿಯುವ 10 ಜನರ ತಂಡ ಸಾಥ್ ನೀಡುತ್ತಿದ್ದಾರೆ.
ಇದನ್ನೂ ಓದಿ | Operation leopard | ಚಿರತೆ ಸೆರೆಗೆ ಬಂದಿದ್ದ ಗಜಪಡೆಗಾಗಿ ಕಬ್ಬು ಕದ್ದರಾ ಅರಣ್ಯ ಇಲಾಖೆ ಸಿಬ್ಬಂದಿ?