ಬೆಂಗಳೂರು: ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಎಂದ ಕೂಡಲೆ ಆಪರೇಷನ್ ಕಮಲ ಎಂದು ಬ್ರ್ಯಾಂಡ್ ಆಗಿಬಿಟ್ಟಿದೆ. ಇದೇ ರೀತಿಯಲ್ಲಿ ವಿಧಾನಸೌಧದಲ್ಲಿ, ಅದರಲ್ಲೂ ಮಾಧ್ಯಮಗಳ ಎದುರೇ ಕಾಂಗ್ರೆಸ್ ಶಾಸಕರೊಬ್ಬರನ್ನು ಆಪರೇಷನ್ ಕಮಲ ಮಾಡುವ ಪ್ರಸಂಗ ಸೋಮವಾರ ನಡೆಯಿತು.
ಹಾಗೆಂದು ಇದು ನಿಜವಾಗಿ ನಡೆದ ಆಪರೇಷನ್ ಕಮಲ ಅಲ್ಲ. ರಾಷ್ಟ್ರಪತಿ ಚುನಾವಣೆ ಪ್ರಯುಕ್ತ ಎಲ್ಲ ಪಕ್ಷಗಳೂ ಶಾಸಕರೂ ವಿಧಾನಸೌಧಕ್ಕೆ ಆಗಮಿಸಿದ್ದರು. ಹೆಬ್ಬಾಳ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಸಹ ಆಗಮಿಸಿದ್ದರು. ಈ ವೇಳೆ ಬಿಜೆಪಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ರಾಜುಗೌಡ, ಶಾಸಕ ಗೂಳಿಹಟ್ಟಿ ಶೇಖರ್ ಸೇರಿ ಭೈರತಿ ಸುರೇಶ್ ಅವರಿಗೆ ಕೇಸರಿ ಶಾಲು ಹಾಕಿದರು.
ಹಾಕಬೇಡಿ ಎಂದು ಕೇಳಿಕೊಂಡರೂ ಎಲ್ಲರೂ ಸೇರಿ ಎರಡು ಕೇಸರಿ ಶಾಲನ್ನು ಕುತ್ತಿಗೆಗೆ ಹಾಕಿ ಭದ್ರವಾಗಿ ಹಿಡಿದರು. ಸುಮ್ಮನಿರ್ರೋ ಸುಮ್ಮನಿರ್ರೋ ಎನ್ನುತ್ತಲೇ ದೂರದಲ್ಲಿದ್ದ ಸಚಿವ ವಿ. ಸೋಮಣ್ಣ ಅವರನ್ನು ಸಹಾಯಕ್ಕೆ ಸುರೇಶ್ ಕರೆದರು. ಕೇಸರಿ ಶಾಲು ಹಾಕಿಕೊಂಡೆ ಕ್ಯಾಮೆರಾಗಳಿಗೆ ಪೋಸ್ ಕೊಟ್ಟು ನಂತರ ತೆಗೆದು ಹೊರನಡೆದರು. ಅತ್ಯಂತ ಗಂಭೀರವಾಗಿ ನಡೆಯುತ್ತಿದ್ದ ರಾಷ್ಟ್ರಪತಿ ಚುನಾವಣೆಯ ನಡುವೆ ಇದೊಂದು ಹಾಸ್ಯ ಪ್ರಸಂಗ ವಿಧಾನಸೌಧದ ಪಡಸಾಲೆಯಲ್ಲಿ ನಡೆಯಿತು.
ಇದನ್ನೂ ಓದಿ | ರಾಷ್ಟ್ರಪತಿ ಪದವಿಗೆ ದೇವೇಗೌಡರು ಆಸಕ್ತಿ ತೋರಿಸಿಲ್ಲ: ಎಚ್.ಡಿ. ಕುಮಾರಸ್ವಾಮಿ