ಉಡುಪಿ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ, ಬಿಜೆಪಿ ಜತೆ ಗುರುತಿಸಿಕೊಂಡಿರುವ ನಾಯಕ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಕಾಂಗ್ರೆಸ್ ಕಡೆಗೆ ಸೆಳೆಯುವ ಪ್ರಯತ್ನವೊಂದು (Operation politics) ಜೋರಾಗಿ ನಡೆಯುತ್ತಿದೆ. ಅವರಿಗೆ ಕಾರ್ಕಳ ಕ್ಷೇತ್ರದ ಟಿಕೆಟ್ ಆಫರ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಜನತಾ ಪರಿವಾರ ಮೂಲದ ಜಯಪ್ರಕಾಶ್ ಹೆಗ್ಡೆ ಅವರು ಬಲಶಾಲಿ ನಾಯಕರಾಗಿದ್ದು, ಬ್ರಹ್ಮಾವರ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ಹಲವು ಬಾರಿ ಸಚಿವರಾಗಿದ್ದವರು. ಬ್ರಹ್ಮಾವರ ಕ್ಷೇತ್ರ ರದ್ದಾದ ಬಳಿಕ ಅತಂತ್ರರಾದದಂತೆ ಕಂಡುಬಂದ ಅವರು ಬಳಿಕ ಕಾಂಗ್ರೆಸ್ ಸೇರಿದ್ದರು. ೨೦೦೯ರಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅವರು ಬಿಜೆಪಿಯ ಡಿ.ವಿ. ಸದಾನಂದ ಗೌಡ ವಿರುದ್ಧ ಸೋಲು ಅನುಭವಿಸಿದರು. ೨೦೧೨ರಲ್ಲಿ ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಅವರಿಗೆ ಗೆಲುವು ದಕ್ಕಿತ್ತು. ಆದರೆ, ೨೦೧೪ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರ ಎದುರು ಸೋಲು ಕಂಡರು.
ಈ ನಡುವೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ವಿರುದ್ಧ ಅವರು ಕಣಕ್ಕಿಳಿದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿತ್ತು ಮಾತ್ರವಲ್ಲ, ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗಿಂತ ಜಯಪ್ರಕಾಶ್ ಹೆಗ್ಡೆ ಅವರಿಗೇ ಹೆಚ್ಚು ಮತ ಸಿಕ್ಕಿತ್ತು.
ಇದಾದ ಬಳಿಕ ಸ್ವಲ್ಪ ಕಾಲ ರಾಜಕೀಯದಿಂದಲೇ ದೂರವಿದ್ದ ಅವರು ಈಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು. ಬಿಜೆಪಿ ನಾಯಕರಿಗೂ ಹತ್ತಿರವಾಗಿದ್ದಾರೆ. ಈ ಹಂತದಲ್ಲಿ ಅವರನ್ನು ಮತ್ತೆ ಕಾಂಗ್ರೆಸ್ ಸೆಳೆಯುವ ಪ್ರಯತ್ನ ನಡೆಯುತ್ತಿದೆ.
ಈ ಹಿಂದೆಯೇ ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಜಯಪ್ರಕಾಶ್ ಹೆಗ್ಡೆ ಅವರಿಗೆ ಕರೆ ಮಾಡಿ ಕಾಂಗ್ರೆಸ್‌ಗೆ ಬರುವಂತೆ ಕೇಳಿಕೊಂಡಿದ್ದರು, ಆದರೆ ಮತ್ತೆ ಪಕ್ಷ ಬದಲಿಸುವ ಚಿಂತನೆ ನಾನು ಮಾಡಿಲ್ಲ ಎನ್ನುವ ಉತ್ತರವನ್ನು ಜಯಪ್ರಕಾಶ್ ಹೆಗ್ಡೆ ನೀಡಿದ್ದರು ಎನ್ನಲಾಗಿದೆ.
ಚುನಾವಣಾ ಬಿಸಿ ಏರುತ್ತಿರುವ ಹಿನ್ನೆಲೆಯಲ್ಲಿ ಕಾರ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸೂತ್ರವಿಲ್ಲದ ಗಾಳಿಪಟವಾಗಿದೆ. ಮಾಜಿ ಸಿಎಂ ವೀರಪ್ಪ ಮೊಯಿಲಿ ಅವರ ಕ್ಷೇತ್ರವಾಗಿರುವ ಕಾರ್ಕಳದಲ್ಲಿ, ಹಾಲಿ ಇಂಧನ ಸಚಿವ ಸುನೀಲ್ ಕುಮಾರ್ ಮತ್ತು ಪಕ್ಷೇತರವಾಗಿ ಕಣಕ್ಕಿಳಿಯುವ ನಿರ್ಧಾರ ಮಾಡಿರುವ ಶ್ರೀರಾಮ ಸೇನೆಯ ಸಂಚಾಲಕ ಪ್ರಮೋದ್ ಮುತಾಲಿಕ್ ಗೆ ಠಕ್ಕರ್ ನೀಡುವ ಯಾವುದೇ ಮುಖ ಕಾರ್ಕಳ ಕಾಂಗ್ರೆಸ್ ನಲ್ಲಿಲ್ಲ.
ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೆ.ಜಯಪ್ರಕಾಶ್ ಹೆಗ್ಡೆ ಅವರಿಗೆ ಕರೆ ಮಾಡಿದ್ದು, ಕಾರ್ಕಳ ಕ್ಷೇತ್ರದಿಂದ ಕಾಂಗ್ರೆಸ್ ಆಭ್ಯರ್ಥಿಯಾಗಿ ಸ್ಪರ್ಧಿಸುವ ಆಫರ್ ನೀಡಿದ್ದಾರೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಕಾಂಗ್ರೆಸ್ ಮಾಜಿ ಶಾಸಕ, ಕಾಪು ಕ್ಷೇತ್ರದ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಅವರು ಜಯಪ್ರಕಾಶ್ ಹೆಗ್ಡೆ ಅವರನ್ನು ಮನವೊಲಿಸಲು ಮಾತುಕತೆ ನಡೆಸಲು ಬರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇತ್ತ ಬಿಜೆಪಿ ಕೂಡಾ ಅವರನ್ನು ಎಲ್ಲಾದರೂ ಕಣಕ್ಕಿಳಿಸುವ ಚಿಂತನೆಯಲ್ಲಿದೆ ಎನ್ನಲಾಗಿದೆ. ಜಯಪ್ರಕಾಶ್ ಹೆಗ್ಡೆ ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : CT Ravi: ಮಾಂಸ ತಿಂದಿದ್ದು ನಿಜವಾದ್ರೂ ದೇಗುಲದ ಒಳಗೆ ಹೋಗಿಲ್ಲ, ಬೇರೆಯವರಂತೆ ಏನಿವಾಗ ಅನ್ನಲ್ಲ: ಸಿ.ಟಿ. ರವಿ; ಸಿದ್ದರಾಮಯ್ಯ ಹೇಳಿದ್ದೇನು?