Site icon Vistara News

Operation Tiger : ಆಪರೇಷನ್‌ ಟೈಗರ್‌ ಸಕ್ಸಸ್‌; ಕೊಡಗಿನಲ್ಲಿ ಇಬ್ಬರನ್ನು ಬಲಿ ಪಡೆದ ನರಹಂತಕ ಹುಲಿ ಕೊನೆಗೂ ಸೆರೆ

kodagu huli

#image_title

ಮಡಿಕೇರಿ: ಪೊನ್ನಂಪೇಟೆಯಲ್ಲಿ ಕೇವಲ ೧೨ ಗಂಟೆ ಅವಧಿಯಲ್ಲಿ ಇಬ್ಬರನ್ನು ಕೊಂದು ಹಾಕಿದ ಹುಲಿ ಕೊನೆಗೂ ಸೆರೆ ಸಿಕ್ಕಿದೆ. ಮಂಗಳವಾರ ಮುಂಜಾನೆಯಿಂದಲೇ ಅರಣ್ಯ ಇಲಾಖೆಯ ೧೫೦ಕ್ಕೂ ಅಧಿಕ ಸಿಬ್ಬಂದಿ ಹಾಗೂ ನಾಲ್ಕು ಆನೆಗಳ ಮೂಲಕ ಕಾರ್ಯಾಚರಣೆ (Operation Tiger) ಆರಂಭಿಸಿ ಮಧ್ಯಾಹ್ನದ ಹೊತ್ತಿಗೆ ಹುಲಿ ಸೆರೆಯಾಗಿದೆ.

ಮೂಲತಃ ಮೈಸೂರು ಜಿಲ್ಲೆಯ ಕೊಳವಿಗೆ ಹಾಡಿಯ ನಿವಾಸಿಯಾದ ರಾಜು ಬಾಡಗ (೭೨) ಅವರು ಕುಟುಂಬದೊಂದಿಗೆ ಪೊನ್ನಂಪೇಟೆಗೆ ಕಾಫಿ ತೋಟದ ಕೆಲಸಕ್ಕೆ ಬಂದಿದ್ದರು. ಪೂಣಚ್ಚ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲೇ ಪಂಚವಳ್ಳಿಯ ಬಾಲಕ ಚೇತನ್‌ ಕೂಡಾ ಇದ್ದ. ಚೇತನ್(12) ಭಾನುವಾರ ಸಂಜೆ ಹೊತ್ತಿಗೆ ಕಾಫಿ ಬೀಜ ಹೆಕ್ಕುತ್ತಿದ್ದಾಗ ಹುಲಿ ದಾಳಿ ಮಾಡಿ ಸಾಯಿಸಿತ್ತು. ಇದಾದ ಒಂದು ದಿನದಲ್ಲಿ ಬಾಲಕನನ್ನು ಕೊಂದ ಜಾಗದ ಸಮೀಪವೇ ರಾಜು ಅವರನ್ನೂ ಹುಲಿ ಬಲಿ ಪಡೆದಿತ್ತು. ಜನರ ಆಕ್ರೋಶ ಮಿತಿ ಮೀರಿದಾಗ ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿತ್ತು. ಅದರಂತೆ ಕಾರ್ಯಾಚರಣೆ ಆರಂಭಗೊಂಡಿತ್ತು.

ಹುಲಿ ಸಿಕ್ಕಿದ್ದೆಲ್ಲಿ?

ನರಹಂತಕ ಹುಲಿಯನ್ನು ಹಿಡಿಯುವುದಕ್ಕಾಗಿ ಬೆಳಗ್ಗಿನಿಂದ ನಡೆದ ಕಾರ್ಯಾಚರಣೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ಮುಕ್ತಾಯಗೊಂಡಿತು. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ನಾಣಚ್ಚಿ ಗೇಟ್‌ ಬಳಿ ಹುಲಿ ಸೆರೆ ಸಿಕ್ಕಿದೆ. ದೂರದಿಂದಲೇ ಹುಲಿಯನ್ನು ಗುರುತಿಸಿ ಅದಕ್ಕೆ ಅರಿವಳಿಕೆಯನ್ನು ಶೂಟ್‌ ಮಾಡುವ ಮೂಲಕ ಪ್ರಜ್ಞೆ ತಪ್ಪಿಸಿ ಹುಲಿಯನ್ನು ಹಿಡಿಯಲಾಯಿತು.

ಈಗ ಸೆರೆ ಹಿಡಿದಿರುವ ಹುಲಿಯ ವಯಸ್ಸು ಅಂದಾಜು ೮ರಿಂದ ೯ ಎಂದು ಹೇಳಲಾಗಿದೆ. ಹುಲಿಯನ್ನು ಸೆರೆ ಹಿಡಿದ ಹಿನ್ನೆಲೆಯಲ್ಲಿ ಗ್ರಾಮದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ಹುಲಿ ಏಕೆ ಕಾಡು ಬಿಟ್ಟು ಬರುತ್ತಿದೆ?

ಈ ನಡುವೆ, ಕೇವಲ ಭಾವನಾತ್ಮಕ ಮಾತುಗಳಿಂದ, ಒಂದು ಹುಲಿಯನ್ನು ಹಿಡಿಯುವುದರಿಂದ ಗುಂಡು ಹಾರಿಸಿ ಕೊಲ್ಲುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಇಲ್ಲಿನ ನಾಯಕರು ಈ ರೀತಿಯ ಹೇಳಿಕೆಯಿಂದ ಜನರನ್ನು ದಾರಿತಪ್ಪಿಸುವುದನ್ನು ಮೊದಲು ನಿಲ್ಲಿಸಬೇಕು. ಹುಲಿ ದಾಳಿಯಿಂದ ಇಲ್ಲಿಯವರೆಗೆ ಏನು ಕ್ರಮ ಕೈಗೊಂಡಿದ್ದಾರೆ? ಹುಲಿ‌ ಅರಣ್ಯ ಬಿಟ್ಟು ಯಾಕೆ ಹೊರಬರುತ್ತಿದೆ ಎಂಬುದರ ಅಧ್ಯಯನ ನಡೆಸಬೇಕು ಎಂದು ಕೆ‌ಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಮಡಿಕೇರಿಯಲ್ಲಿ ಹೇಳಿದ್ದಾರೆ.

ʻʻಹುಲಿಯನ್ನು ಕೊಂದು ಹಾಕುತ್ತೇವೆ ಅಂತಾರೆ. ಆದರೆ, ಹುಲಿಯನ್ನು ಹೊಡೆದ್ರೆ ಜೈಲು ಸೇರಬೇಕು. ಹುಲಿ ಕೊಂದ ತಕ್ಷಣ ಏನೂ ಆಗೊಲ್ಲ. ಕೊಲ್ಲೋದು ಹಿಡಿಯೋದು ಪರಿಹಾರ ಅಲ್ಲ. ಸೂಕ್ತ ಪರಿಹಾರ ಏನಿದೆ ಅಂತ ಮೊದಲು ಹೇಳಿʼʼ ಎಂದು ಅವರು ಹೇಳಿದರು.

ʻʻಭಾನುವಾರ ಸಂಜೆ ಒಂದು ಜೀವ ಹೋದ ಮೇಲೂ ಅರಣ್ಯ ಇಲಾಖೆ ಎಚ್ಚೆತ್ತಿರಲಿಲ್ಲ. ಎರಡನೇ ದಾಳಿ ಆಗುವವರೆಗೆ ಅರಣ್ಯ ಇಲಾಖೆ ಏನು ಮಾಡುತ್ತಿತ್ತು?ʼʼ ಎಂದು ಪ್ರಶ್ನಿಸಿರುವ ಅವರು, ಜಿಲ್ಲಾಡಳಿತ, ಅರಣ್ಯ ಇಲಾಖೆ, ಜನಪ್ರತಿನಿಧಿಗಳೇ ಹುಲಿ ದಾಳಿಗೆ ನೇರ ಹೊಣೆ. ತಪಿತಸ್ಥ ಅಧಿಕಾರಿ ಮೇಲೆ ಮೊದಲು ಎಫ್‌ಐಆರ್‌ ಆಗಬೇಕುʼʼ ಎಂದರು ಪೊನ್ನಣ್ಣ.

ʻʻಜನರು ಕಾಫಿ‌ ತೋಟದಲ್ಲೂ ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಬೇರೆ ದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಇದೂ ಕೃಷಿ ಚೆನ್ನಾಗೇ ನಡೆಯುತ್ತಿದೆ. ಆದರೆ ಇಲ್ಲಿ ಯಾಕೆ ಹಾಗೆ ಆಗುತ್ತಿಲ್ಲ ಎನ್ನುವುದರ ಅಧ್ಯಯನ ಆಗಬೇಕುʼʼ ಎಂದ ಪೊನ್ನಣ್ಣ, ʻʻಕಾಡನೆಲ್ಲ ಧ್ವಂಸ ಮಾಡಿ ಕಾಫಿ ತೋಟವನ್ನೇ ಕಾಡು ಅನ್ನುತ್ತಿರುವುದು ಸರಿಯಲ್ಲʼʼ ಎಂದು ಹೇಳಿದರು.

ಇದನ್ನೂ ಓದಿ : ಕ್ಷಣ ಮಾತ್ರದಲ್ಲಿ ಹುಲಿಯ ಕೈಯಲ್ಲಿ ಗೊಂಬೆಯಂತಾದ ಹುಡುಗಿ; ಯುವತಿಯನ್ನು ದರದರನೇ ಎಳೆದೊಯ್ದ ವಿಡಿಯೊ ಇಲ್ಲಿದೆ ನೋಡಿ

Exit mobile version