ಬೆಂಗಳೂರು: ಆಹಾರ ಧಾನ್ಯಗಳ ಮೇಲೆ ಶೇ. 5ರಷ್ಟು ಜಿ.ಎಸ್.ಟಿ ವಿರೋಧಿಸಿ ಪ್ರಮುಖ ವ್ಯಾಪಾರಿ ಸಂಘಟನೆಗಳು ರಾಜ್ಯಾದ್ಯಂತ ವ್ಯಾಪಾರ ಬಂದ್ ಮಾಡಿ ಪ್ರತಿಭಟಿಸಿದವು.
ದೇಶದ ಜನಸಂಖ್ಯೆಯ ಶೇ. 60ರಷ್ಟು ಜನರಿಗೆ ಆಹಾರ ಧಾನ್ಯವಾದ ಅಕ್ಕಿ ಅತ್ಯಂತ ಮುಖ್ಯ ಆಹಾರವಾಗಿದೆ. ಜಿ.ಎಸ್.ಟಿ ಜಾರಿಗೆ ಬರುವ ಮೊದಲು ಕೆಲವು ರಾಜ್ಯಗಳನ್ನು ಹೊರತುಪಡಿಸಿ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಅಕ್ಕಿಗೆ ಮಾರಾಟ ತೆರಿಗೆ ಮತ್ತು ವ್ಯಾಟ್ ತೆರಿಗೆ ವಿಧಿಸುತ್ತಿರಲಿಲ್ಲ ಎಂದು ಸಂಘಟನೆಗಳು ಪ್ರಮುಖರು ಹೇಳಿದರು.
ಈಗ ಜಿ.ಎಸ್.ಟಿ ಜಾರಿಯೊಂದಿಗೆ, ಜಿ.ಎಸ್.ಟಿ ಕೌನ್ಸಿಲ್ ಎಲ್ಲಾ ಟ್ರೇಡ್ ಮಾರ್ಕ್ ನೋಂದಾಯಿತ ಬ್ರಾಂಡ್‌ಗಳ ಮೇಲೆ ಶೇಕಡಾ 5ರಷ್ಟು ಜಿ.ಎಸ್.ಟಿ ತೆರಿಗೆ ವಿಧಿಸುತ್ತಿದೆ. ಜೊತೆಗೆ ನೋಂದಾಯಿಸದ ಎಲ್ಲಾ ಬ್ರಾಂಡ್‌ಗಳಿಗೂ ತೆರಿಗೆ ವಿಧಿಸುತ್ತದೆ. ಅಕ್ಕಿ ಗಿರಣಿಗಾರರು ಅಥವಾ ವ್ಯಾಪಾರಿಯು ತೆರಿಗೆ ಅಥವಾ ದರ ವಿಧಿಸಲು ಬಯಸದಿದ್ದರೆ ನ್ಯಾಯ ವ್ಯಾಪ್ತಿಯ ಆಯುಕ್ತರಿಗೆ ಅಫಿಡವಿಟ್ ಸಲ್ಲಿಸುವ ಮೂಲಕ ಈ ಬ್ರಾಂಡ್ ಮೇಲಿನ ಕ್ರಮಬದ್ಧವಾದ ಹಕ್ಕನ್ನು ಬಿಟ್ಟು ಬಿಡಬೇಕಾಗುತ್ತದೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ GST | 12% ಜಿಎಸ್‌ಟಿ ಏರಿಕೆ ವಿರುದ್ಧ ಹೋಟೆಲ್ ಮಾಲೀಕರ ಆಕ್ರೋಶ
ಅನೇಕ ಅಕ್ಕಿ ಗಿರಣಿದಾರರು ಮತ್ತು ವ್ಯಾಪಾರಿಗಳು ಬ್ರಾಂಡ್‌ಗಳನ್ನು ನೋಂದಣಿ ಮಾಡಿಕೊಳ್ಳದಿರುವುದರಿಂದ ಈಗ ತೆರಿಗೆ ಹೇರಿಕೆಯಿಂದ ತಪ್ಪಿಸಿಕೊಳ್ಳಬೇಕಾದರೆ ತಮ್ಮ ಛಾಪನ್ನು ಬಿಟ್ಟುಬಿಡಬೇಕಾಗುತ್ತದೆ. ಅದು ಮಾರುಕಟ್ಟೆಯಲ್ಲಿ ತಮ್ಮ ಗುರುತು, ಅಸ್ತಿತ್ವವನ್ನು ಕಳೆದುಕೊಂಡಂತೆ ಆಗಲಿದೆ. ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಪರ್ಧೆಯಿರುವಾಗ ಈಗಿರುವ ಬ್ರಾಂಡ್‌ಗಳ ಅನುಕರಣೆ ಮಾಡಿ ಕಡಿಮೆ ಗುಣಮಟ್ಟದ ಅಕ್ಕಿಯನ್ನು ಪೂರೈಕೆ ಮಾಡಿ ವಂಚನೆ ಮಾಡುವ ಸಾಧ್ಯತೆಯಿದೆ. ಇದರಿಂದಾಗಿ ಮತ್ತೆ ಸಾಮಾನ್ಯ ಜನರು ಉತ್ತಮ ಗುಣಮಟ್ಟದ ಉತ್ಪನ್ನವನ್ನು ಪಡೆಯುವುದರಿಂದ ವಂಚಿತರಾಗುತ್ತಾರೆ ಎಂದು ಸಂಘಟನೆಯ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.
ಆಹಾರ ಉದ್ಯಮದಲ್ಲಿ ಟ್ರೇಡ್ ಮಾರ್ಕ್ ನೋಂದಾಯಿತ ಬ್ರಾಂಡ್‌ಗಳ ಉದ್ದೇಶವು ಸಾಮಾನ್ಯ ಜನರಿಗೆ ಗುಣಮಟ್ಟದ ಅಕ್ಕಿಯನ್ನು ಪೂರೈಕೆ ಮಾಡುವುದು, ಗುಣಮಟ್ಟ ಕಾಯ್ದುಕೊಳ್ಳುವುದಾಗಿರುತ್ತದೆ. ಆಹಾರ ಸುರಕ್ಷತಾ ಕಾಯ್ದೆಗೆ ಸರ್ಕಾರ ಒತ್ತು ನೀಡುತ್ತಿರುವಾಗ, ಎಫ್ಎಸ್ಎಸ್ಐ ಮಾನದಂಡಗಳ ಪ್ರಕಾರ ಗುಣಮಟ್ಟದ ಅಕ್ಕಿಯನ್ನು ನೀಡುತ್ತಿರುವಾಗ, ಸಾಮಾನ್ಯ ಜನರಿಗೆ ಜಿ.ಎಸ್.ಟಿ ರಹಿತ ಅಕ್ಕಿಯನ್ನು ಒದಗಿಸುವುದು ಉದ್ದೇಶವಾಗಬೇಕೆಂದು ಗಿರಣಿ ಸಂಘಟನೆಗಳು ಬೇಡಿಕೆ ಇಟ್ಟಿವೆ.
ಆಹಾರ ಭದ್ರತೆ ಮೇಲೆ ಗಂಭೀರ ಪರಿಣಾಮ
ಅಕ್ಕಿಯ ಹೆಚ್ಚಿನ ಸ್ಪರ್ಧಾತ್ಮಕ ಬೆಲೆ, ತೆರಿಗೆಯ ಹೊರೆ ವಿಧಿಸಿದರೆ ರೈತರಿಂದ ಕಚ್ಚಾವಸ್ತುಗಳ ಖರೀದಿ ದರಗಳ ಮೇಲೆ ಪರಿಣಾಮ ಬೀರಿ ಭತ್ತಕ್ಕೆ ಕಡಿಮೆ ಬೆಲೆ ಉಂಟಾಗುತ್ತದೆ. ಇದರಿಂದ ರೈತರನ್ನು ಬೇರೆ ಲಾಭದಾಯಕ ಬೆಳೆಗಳನ್ನು ಬೆಳೆಸುವತ್ತ ವಾಲುವಂತೆ ಮಾಡುತ್ತದೆ. ಆಗ ದೇಶದ ಮುಖ್ಯ ಆಹಾರಧಾನ್ಯ ಉತ್ಪಾದನೆಯು ತೀವ್ರವಾಗಿ ಕುಸಿಯುತ್ತದೆ. ಇದು ರಾಷ್ಟ್ರದ ಆಹಾರ ಭದ್ರತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಸಂಘಟನೆಗಳು ಹೇಳುತ್ತಿವೆ.
ಎಲ್ಲಾ ಆಹಾರ ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ಈಗ ಜಿಎಸ್‌ಟಿ ವ್ಯಾಪ್ತಿಗೆ ತರಲಾಗಿರುವುದರಿಂದ ಸಾಮಾನ್ಯ ಜನರಿಗೆ ಸರಾಸರಿ ಮನೆಯ ಖರ್ಚಿನ ಹೊರೆಯು ಸುಮಾರು 500 ರೂ.ಗಳಷ್ಟು ಹೆಚ್ಚಾಗುತ್ತದೆ. ಈಗಾಗಲೇ ಹಣದುಬ್ಬರದ ಹೊಡೆತಕ್ಕೆ ಸಿಲುಕಿರುವ ಸಾಮಾನ್ಯ ಜನರ ಮೇಲೆ ಇದು ಇನ್ನಷ್ಟು ಹೊರೆಬಿದ್ದು ನಲುಗಿ ಹೋಗುವ ಪರಿಸ್ಥಿತಿಯುಂಟಾಗುತ್ತದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ ಆಹಾರ ಧಾನ್ಯಗಳು, ಅಗತ್ಯ ಸಾಮಗ್ರಿಗಳನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಯಿಂದ ಹೊರಗಿಡಬೇಕು ಅಥವಾ ವಿನಾಯ್ತಿ ನೀಡಬೇಕು ಎಂದು ಜಿ.ಎಸ್.ಟಿ ಕೌನ್ಸಿಲ್ ಸಭೆಯಲ್ಲಿ ಒತ್ತಾಯಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಗಿರಣಿ ಸಂಘಟನೆಗಳು ಮನವಿ ಮಾಡಿವೆ.
ಇದನ್ನೂ ಓದಿ GST | ಆಹಾರ ಧಾನ್ಯಗಳ ಮೇಲೆ ಜಿಎಸ್‌ಟಿ ಖಂಡಿಸಿ ಜು. 15ರಂದು ಅಕ್ಕಿ ಗಿರಣಿ ಬಂದ್