Site icon Vistara News

Opposition Leader : ವಿಶ್ವಾಸ ಸೂತ್ರ ಹಿಡಿದ ಸಾಮ್ರಾಟ್‌; ಬೊಮ್ಮಾಯಿ, ಅಶ್ವತ್ಥ್‌ ಭೇಟಿ

R Ashok meet Basavaraj Bommai and Ashwath Narayan

ಬೆಂಗಳೂರು: ರಾಜ್ಯ ವಿಧಾನಸಭಾ ಪ್ರತಿಪಕ್ಷ ನಾಯಕರಾಗಿ (Opposition Leader) ಆಯ್ಕೆಯಾಗಿರುವ ಆರ್.‌ ಅಶೋಕ್‌ (R Ashok) ಈಗ ಪಕ್ಷದ ಪ್ರಮುಖ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ. ಸದನದಲ್ಲಿ ಬಿಜೆಪಿ ಶಾಸಕರ ನಾಯಕತ್ವವನ್ನು ವಹಿಸಿರುವ ಅವರು, ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಪ್ರಮುಖ ನಾಯಕರ ಮನೆಗಳಿಗೆ ಭೇಟಿ ನೀಡಿ ಸಹಕಾರ ಕೋರುತ್ತಿದ್ದಾರೆ. ಈ ಮೂಲಕ ವಿಶ್ವಾಸ ಸೂತ್ರಕ್ಕೆ ಮೊರೆ ಹೋಗಿದ್ದಾರೆ.

ಶನಿವಾರ (ನ. 18) ಬೆಳಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮನೆಗೆ ಭೇಟಿ ನೀಡಿದ ಆರ್. ಅಶೋಕ್ ಅವರು ವಿಪಕ್ಷ ನಾಯಕನಾಗಿರುವ ತಮಗೆ ಸದನದ ಒಳಗೆ ಹಾಗೂ ಹೊರಗೆ ಸಹಕಾರ ನೀಡುವಂತೆ ಕೋರಿದ್ದಾರೆ.

ಅಲ್ಲಿಂದ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್‌ (Former Deputy CM Ashwath Narayan) ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಅಶ್ವತ್ಥ್‌ ನಾರಾಯಣ ಸಹ ವಿಪಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಕೆಲವು ದಿನಗಳ ಹಿಂದೆ ತಾವೂ ಸಹ ಆಕಾಂಕ್ಷಿ ಎಂದು ನೇರವಾಗಿಯೇ ಹಂಬಲವನ್ನು ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಸಹಕಾರ ಕೋರಿದ್ದಾರೆ.

ಇದನ್ನೂ ಓದಿ: Job Alert: ಸೆಂಟ್ರಲ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಸಲು ನಾಳೆಯೇ ಕಡೆಯ ದಿನ

2 ದಿನದಲ್ಲಿ ಕೋರ್‌ ಕಮಿಟಿ ರಚನೆ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್, ಆತ್ಮೀಯ ಗೆಳೆಯ ಮಾಜಿ ಸಿಎಂ ಬೊಮ್ಮಾಯಿ ಜತೆ ಒಂದು ಗಂಟೆ ಮಾತನಾಡಿದ್ದೇನೆ. ಪಕ್ಷದ ಸಂಘಟನೆ, ಬೆಳಗಾವಿ ಅಧಿವೇಶನದಲ್ಲಿ ನಮ್ಮ ನಿಲುವು, ಲೋಕಸಭಾ ಚುನಾವಣೆ (Lok Sabha Election) ಸಿದ್ಧತೆ ಕುರಿತು ಚರ್ಚೆ ಮಾಡಿದ್ದೇನೆ. ಇನ್ನೆರಡು ದಿನದಲ್ಲಿ ಕೋರ್ ಕಮಿಟಿ ರಚನೆ ಮಾಡಿ, ಅಧಿವೇಶನದಲ್ಲಿ ಚರ್ಚಿಸುವ ಕುರಿತು ಸಭೆ ಮಾಡಲಾಗುವುದು ಎಂದು ತಿಳಿಸಿದರು.

ಸರ್ಕಾರದಲ್ಲಿ ಬಣ ರಾಜಕೀಯ

ಕಾವೇರಿ ಹೋರಾಟದಲ್ಲಿ ಜನರಿಗೆ ಮಾಡಿದ ಮೋಸ ಮಾಡಲಾಗಿದೆ. ಬರಗಾಲದಲ್ಲಿ ಮಂತ್ರಿಗಳು ಬೆಂಗಳೂರಲ್ಲಿ ಠಿಕಾಣಿ ಹೂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಬಣ ಮಾಡಿಕೊಂಡಿದ್ದಾರೆ. ಅವರು ಪ್ರತ್ಯೇಕವಾಗಿ ಸಭೆ ಮಾಡುತ್ತಿದ್ದಾರೆ. ಈಗ ಟ್ರಾನ್ಸ್‌ಫರ್ ದಂಧೆಯಲ್ಲಿ ತೊಡಗಿದ್ದು 60 ಪರ್ಸೆಂಟ್ ಸರ್ಕಾರ ಅಂತ ಜನರು ಹೇಳುತ್ತಿದ್ದಾರೆ. ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಅವರು ಜನರ ಬಳಿ ಹೋಗುತ್ತಿಲ್ಲ. ಉಚಿತ ಹೆಸರಿನಲ್ಲಿ ಹಣ ನೀಡುತ್ತಿರುವುದಾಗಿ ಹೇಳಿದ್ದಾರೆ‌. ಆದರೆ, ಆ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಎಲ್ಲ ಹಣ ಪಂಚರಾಜ್ಯ ಚುನಾವಣೆಗೆ ಹೋಗುತ್ತಿದೆ ಎಂದು ಆರ್.‌ ಅಶೋಕ್‌ ಕಿಡಿಕಾರಿದರು.

ಕಿತ್ತಾಟದಿಂದಲೇ ಸರ್ಕಾರ ಪತನ

ಈ ಕಾಂಗ್ರೆಸ್‌ ಸರ್ಕಾರವನ್ನು ಕೆಡವಲು ನಾವು ಯಾರೂ ಏನೂ ಮಾಡಬೇಕಿಲ್ಲ. ಹಿಂದೆ ಅವರ ಸರ್ಕಾರ ಹೇಗೆ ಬಿದ್ದು ಹೋಯಿತು ಅಂತ ಅವರಿಗೆ ಗೊತ್ತಿದೆ. ಅವರ ನಡುವಿನ ಕಿತ್ತಾಟದಿಂದಲೇ ಸರ್ಕಾರ ಬಿದ್ದು ಹೋಗುತ್ತದೆ. ನಾವ್ಯಾಕೆ ಬೀಳಿಸೋಣ? ಏನೂ ಸಮಸ್ಯೆ ಇಲ್ಲ ಅಂದರೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಮ್ಮ ಮನೆಯಲ್ಲಿ ಯಾಕೆ ಸಭೆ ಮಾಡಿದರು? ಪಕ್ಕದ ಮನೆಯಲ್ಲಿರುವ ಡಿ.ಕೆ. ಶಿವಕುಮಾರ್ ಅವರನ್ನು‌ ದೂರ ಇಟ್ಟು ಸಭೆ ಮಾಡಿದ್ದು ಯಾಕೆ?‌ ಎಂದು ಆರ್.‌ ಅಶೋಕ್‌ ಪ್ರಶ್ನೆ ಮಾಡಿದರು.

ಸಚಿವ ಜಮೀರ್ ಅಹ್ಮದ್ ಹೇಳಿಕೆ ಕುರಿತು ಅಧಿವೇಶನದಲ್ಲಿ ಮಾತನಾಡುತ್ತೇವೆ‌. ಅವರದು ಸಂವಿಧಾನ ವಿರೋಧಿ ನಡೆಯಾಗಿದೆ. ಅದನ್ನು ನಾವು ಖಂಡಿಸಿದ್ದೇವೆ ಎಂದು ಆರ್.‌ ಅಶೋಕ್‌ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಹೈಕಮಾಂಡ್ ಸೂಚನೆ ನೀಡಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಉತ್ತರ – ದಕ್ಷಿಣ ಕರ್ನಾಟಕ ಅಂತ ಇಲ್ಲ. ನಾವೆಲ್ಲರೂ ಒಟ್ಟಾಗಿ ಹೋಗುತ್ತೇವೆ. ಎಲ್ಲರೂ ಸೇರಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಶ್ರಮಿಸುತ್ತೇವೆ‌ ಎಂದು ಆರ್.‌ ಅಶೋಕ್‌ ಹೇಳಿದರು.

ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಸುಮಾರು 40 ವರ್ಷಗಳ ಕಾಲ ಬಿ.ಎಸ್. ಯಡಿಯೂರಪ್ಪ‌ ಅವರ ಜತೆ ಪಕ್ಷ ಸಂಘಟನೆಗೆ ದುಡಿದಿದ್ದೇನೆ. ಇವತ್ತು ಅನಂತ್ ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಹಳೇ ಬೇರು ಹೊಸ ಚಿಗುರು ಫಾರ್ಮುಲಾ ಮೂಲಕ ಪಕ್ಷ ಸಂಘಟನೆ ಮಾಡಬೇಕಿದೆ. ಈಗ ಸವಾಲಿನ ಸಮಯ. ಕಾಂಗ್ರೆಸ್‌ ಆಡಳಿತವನ್ನು ಜನ ಥೂ.. ಛೀ‌. ಎನ್ನುತ್ತಿದ್ದಾರೆ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಾರೆ. ಇವರ ಖಜಾನೆ ಖಾಲಿಯಾಗಿದೆ. ಇವರ ದುರಾಡಳಿತದ ವಿರುದ್ಧ ಸದನದ ಒಳಗೆ – ಹೊರಗೆ ಹೋರಾಡುತ್ತೇವೆ ಎಂದು ಆರ್.‌ ಅಶೋಕ್‌ ಹೇಳಿದರು.

ವಿರೋಧ ಪಕ್ಷವಾಗಿ ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ಮಾಡುತ್ತೇವೆ. ಸರಿದಾರಿಗೆ ಬಾರದೆ ಹೋದರೆ ಸರ್ಕಾರವನ್ನು ಕಿತ್ತೊಗೆಯುತ್ತೇವೆ ಎಂದು ಆರ್.‌ ಅಶೋಕ್‌ ಹೇಳಿದರು.

ಇದನ್ನೂ ಓದಿ: Yathindra Siddaramaiah : ಟ್ರಾನ್ಸ್‌ಫರ್‌ ಆಗಿರುವ ವಿವೇಕಾನಂದ ಯಾರೆಂದೇ ಗೊತ್ತಿಲ್ಲ!; ಯತೀಂದ್ರ ಸ್ಪಷ್ಟನೆ

ಉತ್ತರ ಕರ್ನಾಟಕಕ್ಕೆ ಪ್ರಾಧಾನ್ಯತೆ ಕೊಡಲಾಗಿದೆ

ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ನೀಡಿಲ್ಲ ಎಂಬ ಅಸಮಾಧಾನ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್.‌ ಅಶೋಕ್‌, ಉತ್ತರ ಕರ್ನಾಟಕ ಭಾಗದಲ್ಲಿ ಇಬ್ಬರು ಮುಖ್ಯಮಂತ್ರಿ ಆಗಿದ್ದಾರೆ. ಈಗಾಗಲೇ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಹಳೇ ಮೈಸೂರು, ಕೋಸ್ಟಲ್ ಕರ್ನಾಟಕ ಎಂಬ ನಾಲ್ಕು ಭಾಗಗಳಿವೆ. ಕರಾವಳಿ ಕರ್ನಾಟಕ ಭಾಗದಿಂದ ಸದಾನಂದ ಗೌಡರು ಮುಖ್ಯಮಂತ್ರಿ ಆಗಿದ್ದಾರೆ. ಮಧ್ಯ ಕರ್ನಾಟಕದಿಂದ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ.‌ ಆದರೆ, ಹಳೇ ಮೈಸೂರು ಭಾಗಕ್ಕೆ ಯಾವತ್ತೂ ಪ್ರಾತಿನಿಧ್ಯ ಸಿಕ್ಕಿಲ್ಲ. ಇದೇ ಮೊದಲು ಸಿಕ್ಕಿದೆ. ಬಿಜೆಪಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಕ್ಕಿರುವುದು. ಉಳಿದಂತೆ ಸಿಎಂ ಆಗಿರೋದು ಎಲ್ಲವೂ ಉತ್ತರ ಕರ್ನಾಟಕ ಭಾಗದವರೇ ಹೆಚ್ಚು. ನಮ್ಮಲ್ಲಿ ಆ ಭೇದ – ಭಾವ ಇಲ್ಲ. ಎಲ್ಲರನ್ನೂ ಇವತ್ತಿನಿಂದಲೇ ಮಾತನಾಡಿಸಿ ಅಸಮಾಧಾನ ಮಾಡುತ್ತೇನೆ. ಎಲ್ಲವನ್ನೂ ಸರಿಪಡಿಸುತ್ತೇವೆ. ಎಲ್ಲ ಭಿನ್ನಾಭಿಪ್ರಾಯ ಇರುವವರ ಜತೆ ಮಾತನಾಡಿ ಸರಿಪಡಿಸುತ್ತೇವೆ ಎಂದು ಆರ್.‌ ಅಶೋಕ್‌ ಹೇಳಿದರು.

Exit mobile version