ಬೆಂಗಳೂರು: ದೇಶದಲ್ಲಿ ಬಿಜೆಪಿಯೇತರ ಮೈತ್ರಿಕೂಟವೊಂದನ್ನು ರಚಿಸುವ ಮಹಾಪ್ರಯತ್ನವಾಗಿ ಜುಲೈ 17 ಮತ್ತು 18ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಪ್ರತಿಪಕ್ಷಗಳ ಸಭೆಯ (Opposition Meet) ಬಗ್ಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆಗೆ (Parliament Election) ರಣತಂತ್ರ, ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವುದು ಸೇರಿ ಹಲವು ವಿಷಯಗಳ ಕುರಿತು ಬೆಂಗಳೂರಿನಲ್ಲಿ ಸೋಮವಾರದಿಂದ ಎರಡು ದಿನ (ಜುಲೈ 17 ಹಾಗೂ 18) ಪ್ರತಿಪಕ್ಷಗಳ ಸಭೆ (Opposition Meet) ನಡೆಯಲಿದೆ. ಇದರಲ್ಲಿ ಜಾತ್ಯತೀತ ಜನತಾದಳ ಭಾಗವಹಿಸುವುದೇ ಇಲ್ಲವೇ ಎನ್ನುವ ಚರ್ಚೆಯೂ ಇದೆ. ಜುಲೈ 18ರಂದೇ ದೆಹಲಿಯಲ್ಲಿ ಎನ್‌ಡಿಎ ಮಿತ್ರ ಕೂಟದ (NDA meet in Delhi) ಸಭೆಯೂ ನಡೆಯಲಿದೆ. ಹೀಗಾಗಿ ಜೆಡಿಎಸ್ ಅಲ್ಲಿ ಹೋಗುತ್ತದೋ, ಇಲ್ಲಿರುತ್ತದೋ ಎನ್ನುವ ಕುತೂಹಲ ಎಲ್ಲೆಡೆ ಇದೆ.
ಆದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ನಿಟ್ಟಿನ ಎಲ್ಲ ಸಂಶಯಗಳನ್ನು ನಿವಾರಿಸುವ ರೀತಿಯಲ್ಲಿ ಪರೋಕ್ಷ ಹೇಳಿಕೆಯನ್ನು ನೀಡಿದ್ದಾರೆ. ಮಹಾಘಟಬಂಧನ್ (Mahaghatabandhan) ನಾಯಕರನ್ನು ಅವರು ತೀವ್ರ ತರಾಟೆಗೆ ತೆಗೆದುಕೊಳ್ಳುವ ಮೂಲಕ ತಮ್ಮ ದಾರಿ ಏನು ಎನ್ನುವ ಸೂಚನೆ ನೀಡಿದ್ದಾರೆ.
ಸೋಮವಾರ ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ʻʻಪಾಪ ಅವರು ನಮ್ಮ ಪಕ್ಷವನ್ನು ಲೆಕ್ಕಕ್ಕೆ ಇಟ್ಟಿಲ್ಲ. ಮಹಾಘಟಬಂದನ್ ವ್ಯವಸ್ಥಾಪಕರು ಜೆಡಿಎಸ್ ಮುಳುಗಿಹೋಗಿದೆ ಅನ್ನೋ ಭ್ರಮೆಯಲ್ಲಿದ್ದಾರೆ. ಆಹ್ವಾನ ಕೊಟ್ಟರೋ ಇಲ್ಲವೋ ಅನ್ನೋದರ ಬಗ್ಗೆ ನಾನು ಕೂಡಾ ತಲೆ ಕೆಡಿಸಿಕೊಂಡಿಲ್ಲʼʼ ಎಂದಿದ್ದಾರೆ.
ಕುಮಾರಸ್ವಾಮಿ ಮತ್ತು ಜಾತ್ಯತೀತ ಜನತಾದಳ ಕಳೆದ ಕೆಲವು ಸಮಯದಿಂದ ಬಿಜೆಪಿ ಜತೆಗೆ ಹೆಚ್ಚು ಆತ್ಮೀಯತೆಯನ್ನು ಹೊಂದಿದೆ. ಈ ಎರಡೂ ಪಕ್ಷಗಳು ಒಂದೋ ವಿಲೀನವಾಗುತ್ತವೆ. ಇಲ್ಲವೇ ಹೊಂದಾಣಿಕೆ ಮಾಡಿಕೊಂಡೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತವೆ ಎಂಬ ಮಾತು ಕೇಳಿಬರುತ್ತಿದೆ. ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕನ ವಿಚಾರದಿಂದಲೇ ಈ ಮೈತ್ರಿ- ಹೊಂದಾಣಿಕೆ ನಡೆಯಲಿದ್ದು, ಕುಮಾರಸ್ವಾಮಿ ಅವರೇ ಪ್ರತಿಪಕ್ಷ ನಾಯಕರಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕುಮಾರ ಸ್ವಾಮಿ ಅವರು ಮಂಗಳವಾರ ದಿಲ್ಲಿಯಲ್ಲಿ ನಡೆಯಲಿರುವ ಎನ್‌ಡಿಎ ಸಭೆಯ ವಿಚಾರದಲ್ಲೂ ಮಾತನಾಡಿದ್ದಾರೆ. ʻʻಎನ್‌ಡಿಎ ಸಭೆಯಲ್ಲಿ ಭಾಗಿಯಾಗುವ ವಿಚಾರದಲ್ಲಿ ಏನೂ ತೀರ್ಮಾನ ಆಗಿಲ್ಲ. ಇನ್ನೂ ಸಮಯವಿದೆ ನೋಡೋಣ. ಆದರೆ, ನಮಗೆ ಎಲ್ಲೂ ಆಹ್ವಾನವೂ ಸಿಕ್ಕಿಲ್ಲʼʼ ಎಂದಿದ್ದಾರೆ.
ರೈತರು ಸಾಯುತ್ತಿದ್ದರೂ ಇವರದು ಸಂಭ್ರಮ
ನಾನು ಸದ್ಯಕ್ಕೆ ನನ್ನ ಪಕ್ಷ ಸಂಘಟನೆ, ನಾಡಿನ ಸಮಸ್ಯೆ ಈ ವಿಚಾರದ ಬಗ್ಗೆಯಷ್ಟೇ ಯೋಚಿಸುತ್ತಿದ್ದೇನೆ ಎಂದು ಹೇಳಿದ ಕುಮಾರಸ್ವಾಮಿ ಅವರು, ವಿಪಕ್ಷಗಳ ಸಭೆಯನ್ನೂ ಟೀಕಿಸಿದರು.
ʻʻರಾಜ್ಯದಲ್ಲಿ 42 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇವರಿಗೆ ಅದರ ಬಗ್ಗೆ ಯಾವುದೇ ಕಾಳಜಿ ಇಲ್ಲ. ರಸ್ತೆಯುದ್ದಕ್ಕೂ ಯಾರು ಮಾಡದ ಸಾಧನೆ ಮಾಡಿದ್ದೇವೆ ಅಂತ ಜೋರಾಗಿ ಬ್ಯಾನರ್ ಹಾಕಿದ್ದಾರೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೂತಿದ್ದಾರೆ. ಇವರಿಗೆ ರೈತರ ನೋವು ಕಾಣಿಸುತ್ತಿಲ್ಲ. ಇಂದಿನವರೆಗೂ ಆತ್ಮಹತ್ಯೆಗೆ ಒಳಗಾಗಬೇಡಿ ಎಂದು ಸಂದೇಶ ಸರ್ಕಾರ ನೀಡಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲʼʼ ಎಂದು ಕೆಂಡ ಕಾರಿದರು.
ಜೆಡಿಎಸ್ ಯಾರ ಬೆಂಬಲಕ್ಕೆ ನಿಲ್ಲುತ್ತದೆ, ಎನ್‌ಡಿಎ ಜತೆ ಕೈಜೋಡಿಸುತ್ತದೋ? ವಿಪಕ್ಷ ಜತೆ ಸೇರುತ್ತದೋ ಎಂಬ ನೇರ ಪ್ರಶ್ನೆಗೆ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಅವರು, ʻʻನಮ್ಮ ಪಕ್ಷಕ್ಕೆ ಕಾರ್ಯಕರ್ತರಿದ್ದಾರೆ. ನಾಡಿನ ಜನ ತೀರ್ಮಾನ ತೆಗೆದುಕೊಂಡಿದ್ದಾರೆ. ಪ್ರತಿ ಚುನಾವಣೆಗೆ ಅದು ಬದಲಾವಣೆ ಆಗಲಿದೆ. ಪ್ರತಿ ಚುನಾವಣೆಗೂ ಒಂದೊಂದು ರೀತಿಯ ಜನರ ತೀರ್ಮಾನವಿರಲಿದೆ. ಈಗ ಎಲ್ಲವೂ ಪ್ರಿಮೆಚ್ಯುರ್ ಆಗಿದೆ. ಚುನಾವಣೆಗೆ ಇನ್ನೂ ಏಳೆಂಟು ತಿಂಗಳಿದೆ, ನೋಡೋಣʼʼ ಎಂದರು ಕುಮಾರಸ್ವಾಮಿ.
ಎಂಟು ಪಕ್ಷಗಳಿಂದ ಬೆಂಬಲ ಘೋಷಣೆ
ಕಾಂಗ್ರೆಸ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಗೆ ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಕ್ಷಗಳ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಅದರಂತೆ, ಎಂಡಿಎಂಕೆ, ಕೇರಳ ಕಾಂಗ್ರೆಸ್ (ಜೋಸೆಫ್), ಕೆಡಿಎಂಕೆ ಸೇರಿ ಹಲವು ಪ್ರತಿಪಕ್ಷಗಳು ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿವೆ. ಡಿಎಂಕೆ, ಜೆಡಿಯು, ಆರ್‌ಜೆಡಿ ಸೇರಿ ಹಲವು ಪ್ರಮುಖ ಪಕ್ಷಗಳ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಕೆಲವು ನಾಯಕರು ಬೆಂಗಳೂರು ತಲುಪಿದ್ದಾರೆ.
ಇದನ್ನೂ ಓದಿ: BJP-JDS Coalition: ಕಮಲ-ದಳ ಮೈತ್ರಿ ಫಿಕ್ಸ್: ಬಿಜೆಪಿ ಶಾಸಕಾಂಗ ಪಕ್ಷಕ್ಕೆ ಎಚ್.ಡಿ. ಕುಮಾರಸ್ವಾಮಿ ನಾಯಕ?