Site icon Vistara News

Opposition Meet : ಘಟಬಂಧನ್‌ ಅಲ್ಲ ಘಟಶ್ರಾದ್ಧ; ರಾಜಕಾರಣಿಗಳ ಸೇವೆಗೆ IAS ಬಳಕೆಗೆ HDK ಕೆಂಡ

HD Kumaraswamy

ಬೆಂಗಳೂರು: ರಾಜಧಾನಿಯಲ್ಲಿ ನಡೆಯುತ್ತಿರುವ ಯುಪಿಎ ಮಿತ್ರಕೂಟದ ಪಕ್ಷಗಳ ನಾಯಕರ ಸಭೆಗೆ (Opposition Meet) ಬರುವ ನಾಯಕರ ಸ್ವಾಗತ ಮತ್ತು ಆತಿಥ್ಯಕ್ಕೆ ಐಎಎಸ್‌ ಅಧಿಕಾರಿಗಳನ್ನು (IAS officers) ಬಳಸಿಕೊಂಡಿರುವುದನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಖಂಡಿಸಿದ್ದಾರೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ಪ್ರತಿಪಕ್ಷಗಳ ನಾಯಕರ ಸಭೆಯನ್ನು ಸರ್ಕಾರಿ ಕಾರ್ಯಕ್ರಮದಂತೆ ನಡೆಸುತ್ತಿದ್ದು, ಐಎಎಸ್‌ ಅಧಿಕಾರಿಗಳನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದೆ ಎಂದು ಆಪಾದಿಸಿದ್ದಾರೆ. ಇದು ಘಟಬಂಧನ್‌ ಅಲ್ಲ, ನಮ್ಮ ಹೆಮ್ಮೆ, ಪರಂಪರೆ ಮತ್ತು ಸ್ವಾಭಿಮಾನಿಗಳ ಘಟಶ್ರಾದ್ಧ ಎಂದಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸಿ ನಿಲ್ಲುವ ಪ್ರಯತ್ನವಾಗಿ ವಿಪಕ್ಷಗಳ ಸಭೆ ಜುಲೈ 17 (ಸೋಮವಾರ)ರಿಂದಲೇ ಆರಂಭವಾಗಿದೆ. ಮಂಗಳವಾರ ಮಹತ್ವದ ಅಧಿಕೃತ ಸಭೆ ಆರಂಭವಾಗಲಿದೆ. ಬಹುತೇಕ ಎಲ್ಲ ರಾಷ್ಟ್ರೀಯ ನಾಯಕರು, ಪ್ರಾದೇಶಿಕ ಪಕ್ಷಗಳ ಮುಖಂಡರು ಸೋಮವಾರವೇ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಸಭೆಗೆ ಆಗಮಿಸಿದ ನಾಯಕರನ್ನು ಸ್ವಾಗತಿಸಲು ಐಎಎಸ್‌ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ ಎನ್ನುವುದು ಕುಮಾರಸ್ವಾಮಿ ಅವರ ಆರೋಪ.

ಯಾವ ಅಧಿಕಾರಿಯನ್ನು ಯಾರ ಸೇವೆಗೆ ಬಳಸಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಪಟ್ಟಿಯನ್ನು ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿರುವ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಸರ್ಕಾರ ಐಎಎಸ್‌ ಜೀತಪದ್ಧತಿಯನ್ನು ಆರಂಭಿಸಿದ್ದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾರ ಸೇವೆಗೆ ಯಾವ ಅಧಿಕಾರಿ: ಎಚ್‌ಡಿಕೆ ನೀಡಿದ ಪಟ್ಟಿ
ಯಾವ ನಾಯಕರ ಸೇವೆಗೆ ಯಾವ ಅಧಿಕಾರಿ?

ಕೆಂಡಾಮಂಡಲ ಕುಮಾರಸ್ವಾಮಿ ಟ್ವೀಟ್‌ಗಳು

1.ಕರ್ನಾಟಕದ ಹೆಮ್ಮೆ,, ಪರಂಪರೆ ಸ್ವಾಭಿಮಾನಕ್ಕೆ ಘಟಶ್ರಾದ್ಧ

ಅಧಿಕಾರ ಬಂಧನಕ್ಕಾಗಿ ಘಟಬಂಧನಕ್ಕೆ ಒಳಗಾದ ಕಾಂಗ್ರೆಸ್ ಪಕ್ಷವು ಕರ್ನಾಟಕದ ಹೆಮ್ಮೆ, ಪರಂಪರೆ, ಸ್ವಾಭಿಮಾನಕ್ಕೆ ಘಟಶ್ರಾದ್ಧ ಮಾಡಿದೆ. ಘಟಬಂಧನಕ್ಕೆ ಬಂದ ಹೊರರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ ಹೆಮ್ಮೆಯ ಐಎಎಸ್ ಅಧಿಕಾರಿಗಳನ್ನು ಕಳಿಸಿದ ಕರ್ನಾಟಕ ಕಾಂಗ್ರೆಸ್‌ (@INCKarnataka) ಸರಕಾರದ ನಡೆ ತಪ್ಪು. ನುಡಿದಂತೆ ನಡೆಯುವುದು ಎಂದರೆ ಇದೇನಾ?

2. ಐಎಎಸ್‌ ಅಧಿಕಾರಿಗಳ ಬಳಕೆ ಘೋರ ಅಪರಾಧ

ಇದು ರಾಜ್ಯ ಸರಕಾರಿ ಕಾರ್ಯಕ್ರಮ ಅಲ್ಲ, ಹೊಸ ಸರಕಾರದ ಪ್ರಮಾಣ ಸ್ವೀಕಾರವೂ ಅಲ್ಲ. ಕೇವಲ ರಾಜಕೀಯ ಸಭೆಯಷ್ಟೇ. ಇಂಥ ಸಭೆಗೆ ಬಂದ ರಾಜಕೀಯ ನಾಯಕರಿಗೆ ಆತಿಥ್ಯ ನೀಡಲು ಜವಾಬ್ದಾರಿಯುತ ಅಧಿಕಾರಿಗಳನ್ನು ಕಳಿಸಿದ್ದು ಆರೂವರೆ ಕೋಟಿ ಕನ್ನಡಿಗರಿಗೆ ಎಸಗಿದ ಘೋರ ಅಪಚಾರ ಹಾಗೂ ರಾಜ್ಯದ ಪಾಲಿಗೆ ಮಹಾ ದುರಂತ.

3. ಐಎಎಸ್‌ ಅಧಿಕಾರಿಗಳಿಗೆ ಬಾಗಿಲು ಕಾಯುವ ಕೆಲಸ

ಯಾವುದೇ ಒಂದು ರಾಜ್ಯದ ಅಭಿವೃದ್ಧಿ, ಆಡಳಿತ, ಮುನ್ನಡೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಐಎಎಸ್ ಅಧಿಕಾರಿಗಳು ಕೇವಲ ಅಧಿಕಾರಿಗಳಷ್ಟೇ ಅಲ್ಲ; ಆಯಾ ರಾಜ್ಯಗಳ ಕ್ಷಮತೆ, ದಕ್ಷತೆಯ ಪ್ರತೀಕ. ಅಂಥವರನ್ನು ಇನ್ನೊಬ್ಬರ ಆಜ್ಞಾಪಾಲಕರನ್ನಾಗಿ ಮಾಡಿ, ಬಾಗಿಲು ಕಾಯುವ ಕೆಲಸ ಹಚ್ಚಿದ್ದು ಆಡಳಿತ ಪಕ್ಷದ ಅಹಂಕಾರದ ಪರಮಾವಧಿ.

4. ಐಎಎಸ್‌ ನೀತಿಸಂಹಿತೆಯ ಉಲ್ಲಂಘನೆ

ಇದು ನಿಶ್ಚಿತವಾಗಿಯೂ ಐಎಎಸ್ ಸೇವಾ ನೀತಿ ಸಂಹಿತೆಯ ಉಲ್ಲಂಘನೆ. ಇದು ತಮ್ಮ ಸ್ವಾಭಿಮಾನ, ಗೌರವಕ್ಕೆ ಧಕ್ಕೆ ತರುವಂತದ್ದು ಎಂದು ಗೊತ್ತಿದ್ದರೂ ಅಧಿಕಾರಿಗಳು ಈ ಕೆಲಸಕ್ಕೆ ಒಪ್ಪಿದ್ದು ನನಗೆ ಅತೀವ ಅಚ್ಚರಿ, ಆಘಾತ ಉಂಟು ಮಾಡಿದೆ. ಇಂಥ ವಿವಾದಾಸ್ಪದ ಆದೇಶ ಹೊರಡಿಸಿದ ಮುಖ್ಯ ಕಾರ್ಯದರ್ಶಿಗಳು ಜನತೆಗೆ ಉತ್ತರ ಕೊಡಲೇಬೇಕಿದೆ.

5. ರಾಜ್ಯದಲ್ಲಿ ಐಎಎಸ್‌ ಜೀತ ಪದ್ಧತಿ ಜಾರಿ

ಬಂಡವಾಳಶಾಹಿ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವ ಕಾಂಗ್ರೆಸ್ ಪಕ್ಷ, ರಾಜ್ಯದಲ್ಲಿ ‘ಐಎಎಸ್ ಜೀತ ಪದ್ಧತಿ’ಯನ್ನು ಜಾರಿಗೆ ತರುವ ಮೂಲಕ ಹೊಸ ನಮೂನೆಯ ‘ರಾಜಕೀಯ, ಆಡಳಿತ ವಸಾಹತುಶಾಹಿ’ಯನ್ನು ದೇಶಕ್ಕೆ ಪರಿಚಯ ಮಾಡಿದೆ. ಹೌದು; ಕಾಂಗ್ರೆಸ್ ಯಾವಾಗಲೂ ಕುಖ್ಯಾತಿಗಳಿಗೇ ಕುಖ್ಯಾತಿ. ಅಂಥ ಅಪಾಯಕಾರಿ ಹಸ್ತವಾಸಿಯೇ ಕೈ ಪಕ್ಷದ ಆಸ್ತಿ.

6. ಕಾಂಗ್ರೆಸ್‌ಗೆ ಗೆಲುವಿನ ಮದ ಎಂದ ಕುಮಾರಸ್ವಾಮಿ

135 ಸೀಟು ಕೊಟ್ಟ ತಪ್ಪಿಗೆ ಕನ್ನಡಿಗರಿಗೆ ವಿಪರೀತ ದರ್ಪ ತೋರಿದೆ ಕಾಂಗ್ರೆಸ್. ಸತ್ಯಯುಗದಲ್ಲಿ ಹಿರಣ್ಯಕಶಿಪು ಅಷ್ಟದಿಕ್ಪಾಲಕರನ್ನು ಸೆರೆಹಿಡಿದು ಮೆಟ್ಟಿಲು ಮಾಡಿಕೊಂಡ ಪಾಪಕ್ಕೆ ಸರ್ವನಾಶವಾದ. ಕಾಂಗ್ರೆಸ್ ಕೂಡ 30 ಐಎಎಸ್ ಅಧಿಕಾರಿಗಳನ್ನು ರಾಜಕಾರಣಿಗಳ ದ್ವಾರಪಾಲಕರನ್ನಾಗಿ ಮಾಡುವ ಮೂಲಕ ತನ್ನ ನಾಶಕ್ಕೆ ತಾನೇ ನಾಂದಿ ಹಾಡಿದೆ.

ಇದನ್ನೂ ಓದಿ: Parliament Election 2024 : ಲೋಕಸಮರ ಗೆಲ್ಲಲು ರಣತಂತ್ರ; ಬೆಂಗಳೂರಲ್ಲಿ UPA, ದಿಲ್ಲಿಯಲ್ಲಿ NDA!

Exit mobile version