Site icon Vistara News

Opposition Meet: ಪ್ರತಿಪಕ್ಷಗಳ ಬೆಂಗಳೂರು ಸಭೆಗೆ ಕಿಮ್ಮತ್ತಿಲ್ಲ: ಮೋದಿಯನ್ನು ಸೋಲಿಸುವುದು ಅಸಾಧ್ಯ ಎಂದ ಬಿಜೆಪಿ

N Ravikumar Basavaraj Bommai

ಹುಬ್ಬಳ್ಳಿ/ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸುವ ಏಕೈಕ ಉದ್ದೇಶದಿಂದ ಪ್ರತಿಪಕ್ಷಗಳು ಒಂದಾಗುತ್ತಿವೆ‌ (Opposition Meet). ಪ್ರತಿಕ್ಷಗಳ ಸಭೆಯಿಂದ ಯಾವುದೇ ರಾಜಕೀಯ ಲಾಭವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.‌

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷಗಳು ನಾಳೆಯಿಂದ ಎರಡು ದಿನಗಳ ಕಾಲ ಬೆಂಗಳೂರಲ್ಲಿ ಸಭೆ ಮಾಡುತ್ತಿವೆ. ಆದರೆ ಇಡೀ ಭಾರತದಲ್ಲಿ ಪ್ರತಿ ಪಕ್ಷಗಳು ಶಕ್ತಿಯುಯವಾಗಿಲ್ಲ. ಪ್ರತಿಪಕ್ಷಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಹೆಚ್ಚಿವೆ‌‌‌. ಅವು ಆಯಾ ರಾಜ್ಯಗಳಲ್ಲಿ ಪ್ರತಿಪಕ್ಷಗಳಾಗಿ ಕೆಲಸ ಮಾಡುತ್ತಿವೆ. ಒಕ್ಕೂಟ ರಚನೆಯಿಂದ, ನಾಳೆ ನಡೆಯುವ ಪ್ರತಿಪಕ್ಷ ಸಭೆಯಿಂದ ಯಾವುದೇ ರಾಜಕೀಯ ಲಾಭ ಆಗುವುದಿಲ್ಲ ಎಂದು ಹೇಳಿದರು.

ಮೋದಿಯವರನ್ನ ಸೋಲಿಸಬೇಕೆಂದು ಪ್ರತಿಪಕ್ಷಗಳ ನಾಯಕರು ಒಟ್ಟಾಗುತ್ತಿದ್ದಾರೆ. ಅದು ಸಾಧ್ಯವಿಲ್ಲದ ಮಾತು. ಪ್ರತಿ ಪಕ್ಷಗಳಿಗೆ ಯಾವುದೇ ಸ್ವಂತ ಬಲವಿಲ್ಲ, ನಿರ್ಧಿಷ್ಟವಾದ ಕಾರ್ಯಕ್ರಮವಿಲ್ಲ. ಭಾರತ ದೇಶ ಜಗತ್ತಿನಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿಯವರಿಗೆ ಗೌರವ, ಮನ್ನಣೆ ಸಿಗುತ್ತಿದೆ ಎಂದು ಹೇಳಿದರು.

ತತ್ವ- ಸಿದ್ಧಾಂತಗಳಿಗೆ ತಿಲಾಂಜಲಿ
ವಿವಿಧ ವಿರೋಧ ಪಕ್ಷಗಳು ತಮ್ಮ ತತ್ವ- ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಅಧಿಕಾರಕ್ಕೆ ಬರಬೇಕೆಂದು ಏಕೈಕ ಉದ್ದೇಶದೊಂದಿಗೆ ಹೊರಟಿದ್ದಾರೆ. ಅದಕ್ಕಾಗಿ ಇದೇ 18ರಂದು ವಿಪಕ್ಷಗಳ ಸಭೆ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಆಕ್ಷೇಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರು 2047ರ ವೇಳೆಗೆ ಪ್ರಪಂಚದಲ್ಲಿ ಭಾರತವನ್ನು ನಂಬರ್ 1 ರಾಷ್ಟ್ರವಾಗಿ ಮಾಡುವ ದೂರದೃಷ್ಟಿಯನ್ನು ಇಟ್ಟುಕೊಂಡಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಭಾರತವನ್ನು ಪರಿವರ್ತಿಸುವ ಒಂದೇ ಕನಸು ಮೋದಿ ಅವರದು. ಪಾರ್ಟಿ ಬೆಳೆಸುವುದು, ಮತಬ್ಯಾಂಕ್ ದೃಢೀಕರಣದ ಉದ್ದೇಶ ಅವರದಲ್ಲ. ಅಂಥ ದುರುದ್ದೇಶದ ಚಿಂತನೆ ವಿಪಕ್ಷಗಳದು ಎಂದು ಟೀಕಿಸಿದರು.

ನಿಸ್ವಾರ್ಥ ಮತ್ತು ದೂರದೃಷ್ಟಿಯ ಸಮರ್ಥ ನಾಯಕತ್ವವನ್ನು ಮೋದಿ ಕೊಡುತ್ತಿದ್ದು, ಅದನ್ನು ಜನರೂ ಅರ್ಥ ಮಾಡಿಕೊಂಡಿದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕೆಂಬ ಆಶಯ, ಅಭಿಲಾಷೆ ಜನರದು. ಅವರಿಗೆ ಅಧಿಕಾರ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Exit mobile version