ಬೆಂಗಳೂರು: ರಾಜಧಾನಿಯಲ್ಲಿ ನಡೆಯುತ್ತಿರುವ ಯುಪಿಎ ಮಿತ್ರ ಕೂಟಗಳ ಸಭೆಯ (Opposition Meet) ಬಗ್ಗೆ ಬಿಜೆಪಿ (BJP Karnataka) ಗೇಲಿ ಮಾಡಿದೆ. ಇದು ದೇಶದ ಹಿತಕ್ಕಾಗಿ ನಡೆಯುತ್ತಿರುವ ಸಭೆಯಲ್ಲ. ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಅವಕಾಶವಾದಿಗಳ ಸಭೆ (Opportunists Meet) ಎಂದು ಅದು ಹೀಗಳೆದಿದೆ.
2024ರ ಲೋಕಸಭಾ ಚುನಾವಣೆಯ (Parliament Elections 2024) ಹಿನ್ನೆಲೆಯಲ್ಲಿ ಮಿತ್ರಕೂಟವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ನಡೆಯುತ್ತಿರುವ ಈ ಸಭೆಯಲ್ಲಿ 26 ರಾಜಕೀಯ ಪಕ್ಷಗಳ 49 ನಾಯಕರು ಭಾಗವಹಿಸಿದ್ದಾರೆ. ಇವರೆಲ್ಲರ ಅಜೆಂಡಾ ಮೋದಿ ದ್ವೇಷವೊಂದೇ (Revenge against Modi) ಎಂದು ಬಿಜೆಪಿ ಕಾಲೆಳೆದಿದೆ.
ಯುಪಿಎ ಅಂಗ ಪಕ್ಷಗಳ ಸಭೆ ಕುರಿತು ಬಿಜೆಪಿ ಮಾಡಿದ ಟ್ವೀಟ್‌ನ ಮುಖ್ಯಾಂಶ
1.ಮೋದಿ ದ್ವೇಷವೋಂದೇ ಇವರ ಪ್ರಮುಖ ಅಜೆಂಡಾ
ದೇಶದ ಹಿತವನ್ನು ಬಯಸದ, ಸದಾ ವೈಯುಕ್ತಿಕ ಹಿತಾಸಕ್ತಿಗಳ ಮೇಲಾಟದಲ್ಲಿ ತೊಡಗುವ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ “ಅವಕಾಶವಾದಿಗಳ ಸಭೆ ಇಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಜಗಮೆಚ್ಚಿದ ನಾಯಕ @narendramodi ಅವರ ಮೇಲೆ ದ್ವೇಷ ಕಾರುವುದಷ್ಟೇ ಇವರ ಪ್ರಮುಖ ಅಜೆಂಡಾ.
2. ಭ್ರಷ್ಟಾಚಾರ, ಕುಟುಂಬ ರಾಜಕಾರಣದ ರಕ್ಷಣೆಗೆ ಈ ನಾಟಕ
ಸದಾ ಅಧಿಕಾರಕ್ಕಾಗಿ ಕಚ್ಚಾಡುವ ಇವರುಗಳು ರಾಜಕಾರಣದಲ್ಲಿ ಇದುವರೆಗೂ ಬದ್ಧತೆ ಎಂಬುದನ್ನು ಒಮ್ಮೆಯೂ ಪ್ರದರ್ಶಿಸಿಲ್ಲ. ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತಗಳು ಇವರ ಮುಖ್ಯ ಸಿದ್ಧಾಂತವಾಗಿದ್ದು, ಅದನ್ನು ಸಾಧಿಸಲು ಈಗ ಒಂದಾಗುವ ನಾಟಕವಾಡುತ್ತಿದ್ದಾರೆ.
3. ಈ ಕೂಟಕ್ಕೆ ಯಾರು ಅಪ್ಪ-ಅಮ್ಮ?
ಈ ಸಭೆಯ ಆಯೋಜಕರು ಯಾರು?
ಈ ಸಭೆಯ ಅಧ್ಯಕ್ಷರು ಯಾರು?
ಈ ಸಭೆಯ ಸಂಯೋಜನೆ ಯಾವ ಪಕ್ಷದ್ದು?
ಇದ್ಯಾವುದರ ಬಗ್ಗೆ ಸ್ವಲ್ಪವೂ ಸ್ಪಷ್ಟತೆ ಇಲ್ಲ.
“ಯುನೈಟೆಡ್ ವಿ ಸ್ಟಾಂಡ್” ಎಂಬ ಈ ಕಿಟ್ಟಿ ಪಾರ್ಟಿಯ ಹೆಸರೇ ಇವರ ಮಧ್ಯೆ ಒಗ್ಗಟ್ಟು ದೂರದ ಬೆಟ್ಟ ಎಂಬುದನ್ನು ನಿರೂಪಿಸುತ್ತದೆ!
4. ಕಟ್ಟಾ ವಿರೋಧಿಗಳು ಒಂದುಗೂಡುವುದು ನಿಜವಾ?
-ದಶಕಗಳಿಂದ ಪಶ್ಚಿಮ ಬಂಗಾಳದಲ್ಲಿ ಪರಸ್ಪರ ಕಚ್ಚಾಡುತ್ತಿರುವ ಮಮತಾ ಬ್ಯಾನರ್ಜಿಯ ಟಿಎಂಸಿ ಹಾಗೂ ಕಮ್ಯುನಿಸ್ಟರು ಇಂದು ಒಂದೇ ಟೇಬಲ್‌ನಲ್ಲಿ ಕುಳಿತು ಒಗ್ಗಟ್ಟು ಪ್ರದರ್ಶಿಸುತ್ತಾರಂತೆ!!
-ಕೇರಳದಲ್ಲಿ ಅಧಿಕಾರಕ್ಕಾಗಿ ಹೊಡೆದಾಡುವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಕಾಮ್ರೇಡ್‌ಗಳಂತೆ!!
-ಪಂಜಾಬ್‌ನಲ್ಲಿ ಬಾಯಿಗೆ ಬಂದಂತೆ ಪರಸ್ಪರ ಬೈದಾಡಿಕೊಳ್ಳುವ ಆಮ್ ಆದ್ಮಿ ಪಕ್ಷದವರು ಹಾಗೂ ಕಾಂಗ್ರೆಸ್‌ನವರು, ಇಲ್ಲಿ ಮಾತ್ರ ಬಾಂಧವರಂತೆ!!
-ಕನ್ನಡಿಗರ ಕುಡಿಯುವ ನೀರಿಗೆ, ಕಾವೇರಿ ಹಾಗೂ ಮೇಕೆದಾಟು ಯೋಜನೆಗಳಿಗೆ ಸದಾ ಇನ್ನಿಲ್ಲದಂತೆ ತೊಂದರೆ ಕೊಡುವ ತಮಿಳುನಾಡಿನ ಸಿಎಂ ಸ್ಟಾಲಿನ್‌ಗೆ, ಕರ್ನಾಟಕದ ಕಾಂಗ್ರೆಸ್ ಪಕ್ಷ ಚಿನ್ನತಂಬಿಯಂತೆ!!
5. ಪರಸ್ಪರ ಕಂಡರಾಗದವರು ಟೇಬಲ್ ನಲ್ಲಿ ಕೂತರೆ ಭಾಯಿ-ಭಾಯಿಯಾ?
-ಕನ್ನಡಿಗರಿಗೆ ಮಹಾದಾಯಿ ನದಿಯ ಒಂದು ತೊಟ್ಟು ನೀರು ಬಿಡುವಿದೆಲ್ಲವೆಂದು ಗೋವಾದಲ್ಲಿ ಘೋಷಿಸಿದ್ದ ಸೋನಿಯಾ ಗಾಂಧಿಗೆ ಇಲ್ಲಿ ದೊಡ್ಡ ಕುರ್ಚಿಯಂತೆ!!
-ಸೋನಿಯಾ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬಾರದೆಂದು, ಕಾಂಗ್ರೆಸ್ ಪಕ್ಷವನ್ನೇ ತುಂಡರಿಸಿ ಹೊರ ಬಂದ ಎನ್.ಸಿ.ಪಿ ಸಹ ಇಲ್ಲಿ ಅತಿಥಿಯಂತೆ!!
-ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಬಿಹಾರವನ್ನು ‘ಬಿಮಾರು’ಗೊಳಿಸಿದ್ದ ನಿತೀಶ್ ಕುಮಾರ್ & ಲಾಲೂ ಪ್ರಸಾದ್ ಯಾದವ್, ಇಲ್ಲಿ ಭಾಯಿ-ಭಾಯಿಗಳಂತೆ!!
6. ಭಾರತ ವಿರೋಧಿಗಳು, ಹಿಂದೂ ವಿರೋಧಿಗಳಿಗೆ ಇಲ್ಲಿ ಮಣೆ
-ಭಾರತವನ್ನು ತುಂಡರಿಸುವಂತಹ ಹೇಳಿಕೆಗಳನ್ನು ನೀಡುವ, ಪಾಕಿಸ್ಥಾನ ಪ್ರೇಮಿ ಫಾರೂಕ್ ಅಬ್ದುಲ್ಲಾಗೂ ಸಹ ಇಲ್ಲಿಗೆ ಆಹ್ವಾನವಿದೆಯಂತೆ!!
-ಹಿಂದೂ ಧರ್ಮವನ್ನು ಸದಾ ಅವಹೇಳನ ಮಾಡುವ, ಹಿಂದೂಗಳನ್ನು ಅತ್ಯಂತ ಕೆಟ್ಟದಾಗಿ ನಿಂದಿಸುವ, ದ್ವೇಷಿಸುವ ತಮಿಳುನಾಡಿನ ತೋಳ್ ತಿರುಮಾವಳವನ್, ಮುಸ್ಲಿಂ ಲೀಗ್‌ಗೆ ಇಲ್ಲಿ ಪಾಲಿದೆಯಂತೆ!!
ಇದನ್ನೂ ಓದಿ: Opposition Meet : ಘಟಬಂಧನ್ ಅಲ್ಲ ಘಟಶ್ರಾದ್ಧ; ರಾಜಕಾರಣಿಗಳ ಸೇವೆಗೆ IAS ಬಳಕೆಗೆ HDK ಕೆಂಡ
ಈ ರೀತಿ ಪರಸ್ಪರ ಭಿನ್ನಭಾವ, ದ್ವೇಷ ಹೊಂದಿದರೂ ಮುಖವಾಡ ಧರಿಸಿಕೊಂಡು ಬರುವವರಿಂದ ಸದೃಢ ಭಾರತ ಹಾಗೂ ಸಶಕ್ತ ಭಾರತವನ್ನು ನಿರ್ಮಿಸಲು ಸಾಧ್ಯವೇ? ಎಂದು ಬಿಜೆಪಿ ಪ್ರಶ್ನಿಸಿದೆ. ತಿಂಡಿ ತಿನ್ನುವ ವೇಳೆ ಇರುವ ಇವರುಗಳ ಸ್ನೇಹ, ಊಟದ ವೇಳೆಗೆ ಮಾಯವಾದರೂ ಅಚ್ಚರಿ ಇಲ್ಲ ಎಂದು ಗೇಲಿ ಮಾಡಿದೆ.