ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಎನ್‌ಡಿಎಗೆ ಪ್ರತಿಯಾಗಿ ಬೆಂಗಳೂರಿನಲ್ಲಿ ನಡೆದಿರುವ ಮಹಾಘಟಬಂಧನಕ್ಕೆ (Opposition Meet) INDIA ಎಂದು ನಾಮಕರಣ ಮಾಡುವ ಸಾಧ್ಯತೆಯಿದೆ. ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕಕ್ಕೆ ಇಡೀ ದೇಶದ ರಾಜಕಾರಣ ಶಿಫ್ಟ್ ಆಗಿದ್ದು, ಖಾಸಗಿ ಹೋಟೆಲ್‌ನಲ್ಲಿ 23 ಪಕ್ಷಗಳ 45ಕ್ಕೂ ಹೆಚ್ಚು ಪ್ರಮುಖ ನಾಯಕರು ಭಾಗವಹಿಸಿದ್ದಾರೆ.
ಈ ಹಿಂದೆ ಯುಪಿಎ ಎಂದು ನಾಮಕರಣ ಮಾಡಲಾಗಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎಯಲ್ಲಿ ಅನೇಕ ಪಕ್ಷಗಳಿದ್ದವು. ಯುಪಿಎ-1 ಹಾಗೂ ಯುಪಿಎ-2ರ ಮೈತ್ರಿಕೂಟವು ಒಟ್ಟು 10 ವರ್ಷ ದೇಶವನ್ನು ಆಳಿತು. ನಂತರ 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಯುಪಿಎ ಬಲಗುಂದಿದೆ.
ಪ್ರತಿಪಕ್ಷಗಳು ಛಿದ್ರಛಿದ್ರವಾಗಿ ಒಡೆದುಹೋಗಿವೆ. ಒಂದೇ ರಾಜ್ಯದಲ್ಲಿ ವಿರುದ್ಧವಿರುವ ಎರಡು ಪಕ್ಷಗಳು ಒಟ್ಟಿಗೆ ಸೇರಬೇಕಾದ ಅನಿವಾರ್ಯತೆ ಎದುರಾಗಿದೆ. ಯುಪಿಎ ಬದಲಿಗೆ ಬೇರೆ ಹೆಸರನ್ನು ಇರಿಸಬೇಕು ಎಂಬ ಚರ್ಚೆ ಬೆಂಗಳೂರಿನಲ್ಲಿ ನಡೆದಿದೆ.
INDIA ಎಂದರೆ Indian National Developmental Inclusive Alliance ಎಂದಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಸಭೆಯು ಇನ್ನೂ ನಡೆಯುತ್ತಿದೆ. ಕೆಲ ಹೊತ್ತಿನಲ್ಲೇ ಈ ಕುರಿತು ಅಧಿಕೃತ ಹೇಳಿಕೆ ಹೊರಬೀಳಬಹುದು ಎನ್ನಲಾಗಿದೆ.
ಈ ವೇಳೆಗಾಗಲೆ ಟಿಎಂಸಿ ಸಂಸದ ಡೆರೆಕ್ ಒ ಬ್ರಿಯಾನ್ ಟ್ವೀಟ್ ಮಾಡಿದ್ದಾರೆ. ಚಕ್ ದೇ INDIA ಎಂದು ತಿಳಿಸಿದ್ದಾರೆ. ಇದು INDIA ಹೆಸರೇ ಅಂತಿಮಗೊಳ್ಳಬಹುದು ಎನ್ನುವುದರ ಮುನ್ಸೂಚನೆ ನೀಡಿದೆ.
Chak De! INDIA
— Derek O'Brien | ডেরেক ও'ব্রায়েন (@derekobrienmp) July 18, 2023