Site icon Vistara News

Opposition Meet : ವಿಪಕ್ಷಗಳ ರಣತಂತ್ರ ಸಭೆ ಆರಂಭ; ಇಂದೇ ಬದಲಾಗುತ್ತಾ UPA ಹೆಸರು, ಕ್ಯಾಪ್ಟನ್‌ ಯಾರು?

Sonia Gandhi and Mallikarjuna Kharge in UPA Meet

ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ (Parliament Election 2024) ವಿಪಕ್ಷಗಳ ಮಿತ್ರಕೂಟದ ಹೋರಾಟದ ದಾರಿಯನ್ನು ಗುರುತಿಸುವುದಕ್ಕಾಗಿ ಆಯೋಜಿಸಲಾಗಿರುವ ವಿಪಕ್ಷಗಳ ನಾಯಕರ ಮಹತ್ವದ ಸಭೆಯ (Opposition meet) ಎರಡನೇ ದಿನ ಸಮಾಲೋಚನೆ ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಆರಂಭಗೊಂಡಿದೆ. ಈ ಸಭೆಯಲ್ಲಿ 26 ಪಕ್ಷಗಳ 49 ನಾಯಕರು ಭಾಗವಹಿಸಿದ್ದಾರೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಸಾರಥ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರ ಆತಿಥ್ಯದಲ್ಲಿ ಈ ಸಭೆ ನಡೆಯುತ್ತಿದ್ದು, ಇದರಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಆರಂಭಗೊಂಡಿದೆ.

ಸಭೆಗೆ ಆಗಮಿಸಿದ ಶರದ್‌ ಪವಾರ್‌

ಪ್ರತಿಪಕ್ಷಗಳ ಈ ಮಹತ್ವದ ಸಭೆ ಎರಡು ದಿನಗಳಲ್ಲಿ ನಡೆದಿದೆ. ಮಂಗಳವಾರವೇ ಬಹುತೇಕ ಎಲ್ಲ ನಾಯಕರು ಆಗಮಿಸಿ ಅನೌಪಚಾರಿಕ ಸಭೆಯಲ್ಲಿ ಭಾಗಹಿಸಿದ್ದರು. ಬುಧವಾರ ಔಪಚಾರಿಕ ಸಭೆ ನಡೆಯುತ್ತಿದೆ. ಈ ನಡುವೆ, ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರು ಈ ಸಭೆಗೆ ಆಗಮಿಸುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆ ಕೇಳಿಬಂದಿತ್ತು. ಮೊದಲ ದಿನದ ಸಭೆಗೆ ಅವರು ಬಂದಿರಲಿಲ್ಲ. ಹೀಗಾಗಿ ಶರದ್‌ ಪವಾರ್‌ ಅವರು ತಮ್ಮ ಸಂಬಂಧಿ ಅಜಿತ್‌ ಪವಾರ್‌ ಅವರ ಜತೆ ಎನ್‌ಡಿಎ ಸಭೆಗೆ ಹೋಗಬಹುದೇ ಎಂಬ ಕುತೂಹಲ ಹುಟ್ಟಿಕೊಂಡಿತ್ತು. ಆದರೆ, ಶರದ್‌ ಪವಾರ್‌ ಬುಧವಾರ ಬೆಂಗಳೂರಿಗೆ ಆಗಮಿಸುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

49 leaders from 26 political parties participated in Bangalore meet

ಬದಲಾಗುತ್ತಾ ಯುಪಿಎ ಹೆಸರು?

ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಭೆ ಕೆಲವೊಂದು ಕಾರ್ಯಸೂಚಿಗಳನ್ನು ಹೊಂದಿದೆ. ಅದರಲ್ಲಿ ಮುಖ್ಯವಾಗಿ ಯುಪಿಎಗೆ ಮರು ನಾಮಕರಣ ಮಾಡುವುದು. ಯುನೈಟೆಡ್‌ ಪ್ರಾಗ್ರೆಸಿವ್‌ ಅಲಯನ್ಸ್‌ (ಯುಪಿಎ) ಹೆಸರನ್ನು ಬದಲಾಯಿಸಿ ಹೊಸ ಹೆಸರು ಇಡಬೇಕು ಎನ್ನುವ ಬೇಡಿಕೆ ಇದ್ದು, ಅದರ ಬಗ್ಗೆ ಚರ್ಚೆ ನಡೆಯಲಿದೆ. ಹೊಸ ಹೆಸರುಗಳನ್ನು ಪರಿಗಣಿಸಿ ಸಭೆಯ ಮುಕ್ತಾಯದ ನಿರ್ಣಯದಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ.

ಉಳಿದಂತೆ ವಿಪಕ್ಷಗಳ ಮೈತ್ರಿ ಕೂಟವನ್ನು ಯಾರು ಮುನ್ನಡೆಸಬೇಕು, ಅಧ್ಯಕ್ಷರು ಯಾರಾಗಬೇಕು ಎನ್ನುವ ಚರ್ಚೆಯೂ ಪ್ರಮುಖವಾಗಿದೆ. ಬಹುತೇಕ ಎಲ್ಲ ಪಕ್ಷಗಳು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿಯೇ ಮೈತ್ರಿಕೂಟದ ನೇತೃತ್ವ ವಹಿಸಬೇಕು ಎಂಬ ಬೇಡಿಕೆ ಇದೆ. ಆದರೆ ಸೋನಿಯಾ ಗಾಂಧಿ ಅವರು ಇದನ್ನು ಒಪ್ಪಿಕೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

ಸಭೆಯಲ್ಲಿ ಚರ್ಚೆಯಾಗುವ ಪ್ರಮುಖ ವಿಷಯಗಳಲ್ಲಿ ಮುಂದಿನ ಚುನಾವಣಾ ಪ್ರಚಾರ ಹೇಗೆ ಎನ್ನುವುದೂ ಮುಖ್ಯ. ಈಗಿನಿಂದಲೇ ಚುನಾವಣೆಯ ಪ್ರಚಾರ ಆರಂಭ ಮಾಡಬೇಕು ಎಂಬ ಆಗ್ರಹವಿದೆ. ಬೇರೆ ಬೇರೆ ರಾಜ್ಯಗಳ ನಾಯಕರು ಎಲ್ಲ ಕಡೆ ಪ್ರಚಾರಕ್ಕೆ ಹೋಗುವ ಮೂಲಕ ಏಕಮತ್ಯವನ್ನು ಸಾರಬೇಕು ಎನ್ನುವುದು ಕೆಲವರ ಆಗ್ರಹ. ಇದರ ಬಗ್ಗೆಯೂ ಚರ್ಚೆಯಾಗಲಿದೆ.

49 leaders from 26 political parties participated in Bangalore meet

ಪರಸ್ಪರ ಬದ್ಧ ದ್ವೇಷಿಗಳು ಏನು ಮಾಡಬೇಕು?

ಇಲ್ಲಿ ಚರ್ಚೆಯಾಗಲಿರುವ ಅತ್ಯಂತ ಪ್ರಮುಖ ವಿಷಯಗಳಲ್ಲಿ ಮಿತ್ರರು ತಮ್ಮ ರಾಜ್ಯಗಳಲ್ಲಿ ಹೊಂದಿರುವ ಪ್ರತಿಸ್ಪರ್ಧಿ ರಾಜಕೀಯ ವರ್ತುಲದಿಂದ ಹೇಗೆ ಹೊರಗೆ ಬರುವುದು ಎನ್ನುವುದು. ವಿಪಕ್ಷಗಳ ಮಿತ್ರ ಕೂಟದಲ್ಲಿರುವ ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಾರ್ಟಿಗಳು ದಿಲ್ಲಿಯಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಹೇಗೆ ನಡೆದುಕೊಳ್ಳಬೇಕು, ಹೊಂದಾಣಿಕೆ ಮಾಡಿಕೊಳ್ಳಬೇಕಾ? ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಾ? ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿಗೆ ಕಾಂಗ್ರೆಸ್‌, ಎಡಪಕ್ಷಗಳು ವಿರೋಧಿಗಳೇ. ಕೇರಳದಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಬದ್ಧ ವಿರೋಧಿಗಳು. ಇಂಥ ಪರಿಸ್ಥಿತಿಯಲ್ಲಿ ಹೊಂದಾಣಿಕೆ ಹೇಗೆ ಎನ್ನುವ ವಿಷಯ ಚರ್ಚೆಯಲ್ಲಿದೆ.

ಇದನ್ನೂ ಓದಿ: Opposition Meet : ರಾಹುಲ್‌ ಗಾಂಧಿ ಫುಲ್‌ ಬ್ಯುಸಿ ; ನಾಳೆಗೆ ನಿಗದಿಯಾಗಿದ್ದ ಸಚಿವರ ಜತೆಗಿನ ಸಭೆ ರದ್ದು

Exit mobile version