ಬೆಂಗಳೂರು: 2024ರ ಲೋಕಸಭಾ ಚುನಾವಣೆಯ (Parliament Election 2024) ಹಿನ್ನೆಲೆಯಲ್ಲಿ ನಡೆಸಲು ಉದ್ದೇಶಿಸಿದ್ದ ಸಚಿವರ ಜತೆಗಿನ ರಾಹುಲ್ ಗಾಂಧಿ (Rahul Gandhi) ಸಭೆಯನ್ನು ರದ್ದುಪಡಿಸಲಾಗಿದೆ. ಜುಲೈ 18ರಂದು ಬೆಳಗ್ಗೆ ಈ ಸಭೆ ನಡೆಸಲು (Rahul Gandhi Meet with Ministers) ಯೋಜಿಸಲಾಗಿತ್ತು ಆದರೆ, ರಾಹುಲ್ ಗಾಂಧಿ ಅವರು ಕರೆದಿರುವ ಈ ಸಭೆಯನ್ನು ರದ್ದುಪಡಿಸಿರುವುದಾಗಿ ಪ್ರಕಟಿಸಲಾಗಿದೆ.
2024ರ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಗೆ (Opposition Meet) ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಆಗಮಿಸಿದ್ದಾರೆ. ಸೋಮವಾರವೇ ಆಗಮಿಸಿರುವ ಅವರು ಮಂಗಳವಾರ ಸಂಜೆ ದಿಲ್ಲಿಗೆ ವಾಪಸ್ ಆಗಲಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ರಾಹುಲ್ ಗಾಂಧಿ ಅವರು ಬುಧವಾರ (ಜುಲೈ 19) ಕೂಡಾ ಬೆಂಗಳೂರಿನಲ್ಲಿದ್ದು ಸಚಿವರ ಜತೆ ಸಭೆ ನಡೆಸುವ ಪ್ಲ್ಯಾನ್ ಇತ್ತು. ಈಗ ಅದು ಬದಲಾಗಿದೆ. ರಾಹುಲ್ ಗಾಂಧಿ ಅವರು ತುರ್ತಾಗಿ ದಿಲ್ಲಿಗೆ ಹೋಗಬೇಕಾಗಿರುವುದಿಂದ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ನಿಜವೆಂದರೆ, ರಾಜ್ಯ ಸಚಿವ ಸಂಪುಟದ ಸದಸ್ಯರು ದಿಲ್ಲಿಗೆ ಹೋಗಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವುದಾಗಿ ಹಿಂದೊಮ್ಮೆ ನಿರ್ಧರಿಸಲಾಗಿತ್ತು. ಆದರೆ, ಎಲ್ಲರೂ ಅಲ್ಲೇ ಹೋಗಿ ಭೇಟಿಯಾಗುವುದು ಬೇಡ. ಅವರು ಬೆಂಗಳೂರಿಗೆ ಬಂದಾಗ ಸಭೆ ನಡೆಸುತ್ತಾರೆ ಎಂದು ಪ್ರಕಟಿಸಲಾಗಿತ್ತು.
ಅದಕ್ಕಿಂತಲೂ ಮುಖ್ಯವಾಗಿ ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು, ಸಚಿವರ ಕಾರ್ಯ ನಿರ್ವಹಣೆ ಹೇಗಿರಬೇಕು ಎಂಬ ವಿಚಾರದಲ್ಲಿ ರಾಹುಲ್ ಗಾಂಧಿ ಸಮಾಲೋಚನೆ ನಡೆಸುತ್ತಾರೆ ಎಂದು ಹೇಳಲಾಗಿತ್ತು.
ಕೆಲವೊಬ್ಬರು ಸಚಿವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ವಿಚಾರದಲ್ಲಿ ಕೂಡಾ ಚರ್ಚೆಗಳು ನಡೆಯುತ್ತಿದ್ದು, ಅಂಥ ಸಚಿವರ ಜತೆ ರಾಹುಲ್ ಗಾಂಧಿ ಪ್ರತ್ಯೇಕವಾಗಿ ಮಾತನಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ರಾಹುಲ್ ಗಾಂಧಿ ಅವರು ಈ ಸಭೆಯನ್ನು ರದ್ದು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಲೋಕಸಭಾ ಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣು
ರಾಜ್ಯದಲ್ಲಿ ಭರ್ಜರಿ ಬಹುಮತದೊಂದಿಗೆ (224 ಕ್ಷೇತ್ರಗಳ ಪೈಕಿ 135) ಗೆದ್ದಿರುವ ಕಾಂಗ್ರೆಸ್ ಇದೇ ರೀತಿಯ ನಿರ್ವಹಣೆಯನ್ನು ಲೋಕಸಭಾ ಚುನಾವಣೆಯಲ್ಲೂ ನಿರೀಕ್ಷೆ ಮಾಡುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 26 ಸ್ಥಾನಗಳನ್ನು ಗೆದ್ದಿದ್ದರೆ ಕಾಂಗ್ರೆಸ್ ಕೇವಲ ಒಂದು ಸ್ಥಾನಕ್ಕೆ ಸೀಮಿತವಾಗಿತ್ತು. ಇಂಥ ಪರಿಸ್ಥಿತಿಯನ್ನು ಬದಲಾಯಿಸಿ ಕನಿಷ್ಠ 15 ಸ್ಥಾನಗಳನ್ನಾದರೂ ಪಡೆಯಲೇಬೇಕು ಎನ್ನುವ ಹಠದಲ್ಲಿದೆ. ಹೀಗಾಗಿಯೇ ಅದು ಚುನಾವಣೆಯಲ್ಲಿ ಘೋಷಿಸಿದ ಎಲ್ಲ ಭಾಗ್ಯಗಳನ್ನು ಈಡೇರಿಸುವ ಹಠ ತೊಟ್ಟು ನಿಂತಿದೆ. ಉಳಿದ ರಾಜ್ಯಗಳಲ್ಲೂ ಇದೇ ತಂತ್ರವನ್ನು ಅಳವಡಿಸಿಕೊಳ್ಳುತ್ತಿದೆ. ಹೀಗಾಗಿ ರಾಜ್ಯದ ಸಚಿವರ ಜತೆಗಿನ ರಾಹುಲ್ ಗಾಂಧಿ ಮಾತುಕತೆ ಮಹತ್ವವನ್ನು ಪಡೆದಿತ್ತು.
ಇದನ್ನೂ ಓದಿ: Parliament Election 2024 : ಲೋಕಸಮರ ಗೆಲ್ಲಲು ರಣತಂತ್ರ; ಬೆಂಗಳೂರಲ್ಲಿ UPA, ದಿಲ್ಲಿಯಲ್ಲಿ NDA!