ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಲೋಕಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬಹಳ ಭಾವುಕ ವ್ಯಕ್ತಿ. ಆದ್ದರಿಂದ ಅವರು ಈ ಸೋಲಿನಿಂದ ರಾಜೀನಾಮೆ ನೀಡಬಹುದು ಎಂದು ಭಾವಿಸಿದ್ದೇನೆ. ಈ ಚುನಾವಣೆಯಲ್ಲಿ ಎಲ್ಲ ಮಹಿಳೆಯರಿಗೆ ಗ್ಯಾರಂಟಿ ನೀಡಿ, ಅವರ ಗಂಡಂದಿರಿಗೆ ಟ್ಯಾಕ್ಸ್ ಹಾಕಿದ್ದಾರೆ. ಕಾಂಗ್ರೆಸ್‌ಗೆ ಮಾನ ಮರ್ಯಾದೆ ಹೋಗಿದೆ. ಮುಸ್ಲಿಂ ತುಷ್ಟೀಕರಣ ಮಾಡಿ ಬಹುಸಂಖ್ಯಾತರನ್ನು ಕಡೆಗಣಿಸಿದ್ದರಿಂದ ಕಾಂಗ್ರೆಸ್‌ಗೆ ಹೀಗಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸೇರಿ ಎನ್‌ಡಿಎಗೆ 51.66% ಮತ ಬಂದಿದೆ. 136 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ಗೆ 45.43% ಬಂದಿದೆ. ಅಂದರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಯೋಗ್ಯತೆ ಏನು ಎಂದು ಗೊತ್ತಾಗಿದೆ. ಎರಡಂಕಿ ದಾಟುತ್ತೇವೆ ಎಂದು ಅವರು ಹೇಳುತ್ತಲೇ ಇದ್ದರು. ಆದರೆ ಅವರು ವಿಫಲರಾಗಿದ್ದಾರೆ ಎಂದರು.
ಇದನ್ನೂ ಓದಿ: NEET UG Result 2024 : ಮೊದಲ ರ‍್ಯಾಂಕ್ ಪಡೆದ 100 ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಆರು ಮಂದಿ ನೀಟ್ ಟಾಪರ್ಸ್
ಕಾಂಗ್ರೆಸ್ ಈ ಬಾರಿ ದೇಶದಲ್ಲಿ 21.56% ಮತ ಪಡೆದಿದೆ. ಬಿಜೆಪಿಗೆ ಕಳೆದ ಬಾರಿ 35% ಇದ್ದು, ಈ ಬಾರಿ 36.8% ಮತ ಗಳಿಕೆಯಾಗಿದೆ. ಕಾಂಗ್ರೆಸ್ ಮೂರಂಕಿಗೆ ಹೋಗಲೇ ಇಲ್ಲ. 18-20 ಸ್ಥಾನ ಗೆಲ್ಲುತ್ತೇವೆ ಎಂದು ಸಿಎಂ, ಡಿಸಿಎಂ ಹೇಳಿದ್ದು, ಆ ಹೇಳಿಕೆ ತಲೆ ಕೆಳಗಾಗಿದೆ. ಸಿಎಂ ಸಿದ್ದರಾಮಯ್ಯನವರ ತವರು ಕ್ಷೇತ್ರ ಮೈಸೂರಿನಲ್ಲಿ 1.39 ಲಕ್ಷ ಅಂತರ ಬಂದಿದ್ದು, ಮುಖ್ಯಮಂತ್ರಿ ಫೇಲ್ ಆಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರ ಸಹೋದರ ಹೀನಾಯವಾಗಿ ಸೋತಿದ್ದಾರೆ. ರಾಜಕೀಯಕ್ಕೆ ಮೊದಲ ಬಾರಿಗೆ ಬಂದ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ 2.69 ಲಕ್ಷ ಅಂತರ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Novak Djokovic: ಫ್ರೆಂಚ್ ಓಪನ್ ಟೂರ್ನಿಯಿಂದ ಹಿಂದೆ ಸರಿದ ಜೊಕೊವಿಕ್
2009 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 206 ಸ್ಥಾನಗಳನ್ನು ಗಳಿಸಿತ್ತು. ಅದು ಕೂಡ ಸರಳ ಬಹುಮತ ಅಲ್ಲ. ಅಷ್ಟೇ ಅಲ್ಲ ಈಗ ಬಿಜೆಪಿ ಗಳಿಸಿದ್ದಷ್ಟೂ ಅಲ್ಲ. 2014 ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 44 ಸ್ಥಾನ ಗಳಿಸಿತ್ತು. ಕೇವಲ ಐದು ವರ್ಷದ ದುರಾಡಳಿತದಿಂದಾಗಿ 160 ಸ್ಥಾನಗಳನ್ನು ಕಳೆದುಕೊಂಡಿತ್ತು. 2019 ರಲ್ಲಿ ಬಿಜೆಪಿ 303 ಸ್ಥಾನ ಪಡೆದಿದ್ದು, 2024 ರಲ್ಲಿ 239 ಸ್ಥಾನ ಪಡೆದು, 64 ಸ್ಥಾನ ಮಾತ್ರ ಮೈನಸ್ ಆಗಿದೆ.
2019 ರಲ್ಲಿ ಕಾಂಗ್ರೆಸ್ 52 ಸ್ಥಾನ ಪಡೆದಿದ್ದು, 2024 ರಲ್ಲಿ 99 ಸ್ಥಾನ ಪಡೆದು, 47 ಸ್ಥಾನ ಹೆಚ್ಚಿಸಿಕೊಂಡಿದೆ. ಈಗ ಇಂಡಿಯಾ ಕೂಟದಿಂದಾಗಿ ಕಾಂಗ್ರೆಸ್ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಕಾಂಗ್ರೆಸ್‌ಗೆ ಸಿಕ್ಕಿರುವುದು 99 ಸ್ಥಾನ ಮಾತ್ರ. ಇಂಡಿಯಾ ಒಕ್ಕೂಟಕ್ಕೆ ಸಿಕ್ಕಿರುವುದು 232 ಸ್ಥಾನಗಳು. ಬಿಜೆಪಿಗೆ 239 ಸ್ಥಾನಗಳಿವೆ. ಅಂದರೆ ಒಟ್ಟು ಇಂಡಿಯಾ ಕೂಟ ಪಡೆದ ಸ್ಥಾನಗಳು ಬಿಜೆಪಿಗಿಂತಲೂ ಕಡಿಮೆ ಇದೆ ಎಂದರು.
2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 80 ಸೀಟು ಪಡೆದಿತ್ತು. ಬಿಜೆಪಿ 104 ಪಡೆದು ದೊಡ್ಡ ಪಕ್ಷವಾಗಿತ್ತು. ಆದರೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದಾಗ ಸಿದ್ದರಾಮಯ್ಯ ಕೈ ಕಟ್ಟಿಕೊಂಡು ಕೂತಿದ್ದರು. ಆಗ ನೈತಿಕತೆ ಇರಲಿಲ್ಲವೇ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Karnataka Weather : ಕಾರವಾರ, ಯಾದಗಿರಿಯಲ್ಲಿ ಅಬ್ಬರಿಸಿದ ವರುಣ; ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಮಳೆ
ಕಾಂಗ್ರೆಸ್ ಸಚಿವರ ಮಕ್ಕಳು ಸೋತಿರುವುದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಜನರು ತೋರಿರುವ ವಿರೋಧ ಎಂದ ಅವರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.