ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತು ಬಿಜೆಪಿ ಸದಸ್ಯರು ಧ್ವನಿ ಎತ್ತಿದರೆ ಅವರನ್ನು ಒತ್ತಾಯಪೂರ್ವಕವಾಗಿ ಕೂರಿಸುವ ಕೆಲಸವನ್ನು ಸ್ಪೀಕರ್ ಯು.ಟಿ. ಖಾದರ್ ಮಾಡಿದ್ದಾರೆ. ಮಳೆ ಹಾನಿಗೆ ಪರಿಹಾರ ನೀಡದೆ ಹಗರಣ ಮುಚ್ಚಿ ಹಾಕಲು ನಡುವೆ ಈ ವಿಷಯ ತರಲಾಗಿದೆ. ಇದು ಸದನಕ್ಕೆ ಹಾಗೂ ಸ್ಪೀಕರ್‌ಗೆ ಗೌರವ ತರುವ ಕೆಲಸವಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಆಕ್ರೋಶ ವ್ಯಕ್ತಪಡಿಸಿದರು.
ಸದನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಸದಸ್ಯರು ಮಾತನಾಡುವಾಗ ಅವರನ್ನು ಒತ್ತಾಯಪೂರ್ವಕವಾಗಿ ಸ್ಪೀಕರ್ ಕೂರಿಸುತ್ತಿದ್ದಾರೆ. ಇದು ಸದನಕ್ಕೆ ಅಥವಾ ಸ್ಪೀಕರ್‌ಗೆ ಗೌರವ ತರುವುದಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಈ ರೀತಿ ಸದನ ನಡೆದಿಲ್ಲ. ಸ್ಪೀಕರ್ ಸದನ ನಡೆಸಲು ಸಂಪೂರ್ಣ ವಿಫಲರಾಗಿದ್ದಾರೆ. ಇಂತಹ ಸ್ಪೀಕರ್‌ರಿಂದ ನಾವು ಏನೂ ನಿರೀಕ್ಷೆ ಮಾಡಲಾಗುವುದಿಲ್ಲ. ಮಳೆ ಹಾನಿ ಕುರಿತು 15 ದಿನಗಳ ಹಿಂದೆಯೇ ಹೇಳಬೇಕಿತ್ತು. ಸ್ಪೀಕರ್ ನಡೆ ಸದನಕ್ಕೆ ಗೌರವ ತರುವುದಿಲ್ಲ. ಸೋಮವಾರದ ಅಧಿವೇಶನದಲ್ಲಿ ಬಿಜೆಪಿ ಈ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಹಲವೆಡೆ ನಾಳೆ ಕರೆಂಟ್ ಇರಲ್ಲ!
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಿಂದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿರುವುದು ಎಂದರೆ ಅದು ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ಕೊಲೆ. 187 ಕೋಟಿ ರೂ. ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಲೂಟಿ ಮಾಡಿ ಚುನಾವಣೆಗೆ ಬಳಸಿದ್ದಾರೆ ಎಂಬುದು ಜಾರಿ ನಿರ್ದೇಶನಾಲಯದ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟವಾಗಿದೆ. ಈ ಕುರಿತು ಸದನದಲ್ಲಿ ನಿಲುವಳಿ ಸೂಚನೆಯಲ್ಲಿ ಮಾತನಾಡಲಾಗಿದೆ. ಲೂಟಿಯಾದ ಹಣವನ್ನು ಯಾವಾಗ ವಾಪಸ್ ತರಲಾಗುತ್ತದೆ ಎಂದು ನಾವು ಪ್ರಶ್ನೆ ಮಾಡಿದ್ದೇವೆ. ಇದು ಎಟಿಎಂ ಸರ್ಕಾರದ ಮೂಲಕ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ತಲುಪಿದೆಯೇ ಎಂದು ಕೇಳಿದ್ದೇವೆ ಎಂದರು.
ಈ ಹಗರಣ ಮಾಡಿದ ತಪ್ಪಿತಸ್ಥರಿಗೆ ಶಿಕ್ಷಯಾಗಬೇಕೆಂದರೆ ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ಶಾಸಕ ಬಸವನಗೌಡ ದದ್ದಲ್ ಅವರ ಹೆಸರು ಎಫ್‌ಐಆರ್‌ನಲ್ಲಿ ಬರಬೇಕು. ಆದರೆ ಇವರಿಬ್ಬರ ಹೆಸರು ಕೂಡ ಎಫ್‌ಐಆರ್‌ನಲ್ಲಿ ಬಾರದಂತೆ ಮಾಡಲು ಪೊಲೀಸರಿಗೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಾವೇಶದಿಂದ ಭಾಷಣ ಮಾಡಿದ್ದಾರೆ. ನಮ್ಮ ಸರ್ಕಾರದಲ್ಲಿ ಯಾರೂ ಭಾಗಿಯಾಗಿಲ್ಲ ಎಂದಿದ್ದಾರೆ. ಆದರೆ ಸಚಿವರು ರಾಜೀನಾಮೆ ನೀಡಿದ್ದಾರೆ. ಹಣ ಲೂಟಿಯಾಗಿದೆ ಎಂದು ಮುಖ್ಯಮಂತ್ರಿಯೇ ಒಪ್ಪಿಕೊಂಡಿದ್ದಾರೆ. 40 ಪರ್ಸೆಂಟ್ ಎಂದು ಭಿತ್ತಿಪತ್ರ ಅಂಟಿಸಿ, ಅಧಿಕಾರಕ್ಕೆ ಬಂದ ಮೇಲೆ ತನಿಖೆಗೆ ವಹಿಸಿದ್ದಾರೆ. ಆದರೆ ಇದರ ವರದಿ ಮಾತ್ರ ಬಂದಿಲ್ಲ. ಆದರೂ ಬಿಜೆಪಿ ಹಗರಣ ಮಾಡಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಪ್ರಶ್ನೆ ಮಾಡಿದ ನಂತರ ದಿಢೀರನೆ ಹಳೆ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಗರಣದಲ್ಲಿ ಭಾಗಿಯಾಗಿದ್ದು, ರಾಜೀನಾಮೆ ಕೊಡಬೇಕಿತ್ತು. ಆದರೆ ಅದನ್ನೂ ಮಾಡಿಲ್ಲ, ಸಿಬಿಐ ತನಿಖೆಗೂ ವಹಿಸಿಲ್ಲ. ಹಗರಣವನ್ನು ಮುಚ್ಚಿಹಾಕಲು ಎಲ್ಲ ವ್ಯವಸ್ಥಿತ ಸಂಚು ಮಾಡಲಾಗಿದೆ. ಬಿಜೆಪಿಯಿಂದ ಇದರ ವಿರುದ್ಧ ತೀವ್ರ ಹೋರಾಟ ಮುಂದುವರಿಯಲಿದೆ. ದಲಿತರ ಹಣ ವಾಪಸ್ ಸಿಗಬೇಕು, ಅಪರಾಧಿಗಳಿಗೆ ಶಿಕ್ಷೆ ಸಿಗಬೇಕು ಎಂಬುದು ಬಿಜೆಪಿಯ ಬೇಡಿಕೆ ಎಂದರು.
ಇದನ್ನೂ ಓದಿ: Karnataka Weather : ವಾಯುಭಾರ ಕುಸಿತ ಎಫೆಕ್ಟ್; ವಾರಾಂತ್ಯದಲ್ಲಿ ಭಾರಿ ಮಳೆ ಎಚ್ಚರಿಕೆ, ಶಾಲೆಗಳಿಗೆ ರಜೆ ಘೋಷಣೆ
ಮಳೆ ಹಾನಿಗೆ ಕ್ರಮವಿಲ್ಲ
ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಹಾನಿಯಾಗಿ ಜನರು ಸತ್ತಿದ್ದರೂ ಸಚಿವರು ಘಟನಾ ಸ್ಥಳಕ್ಕೆ ಹೋಗಿ ಸಂತ್ರಸ್ತರನ್ನು ಭೇಟಿ ಮಾಡಿಲ್ಲ. ಹಾನಿಗೊಳಗಾದವರಿಗೆ ಬಿಜೆಪಿ ಸರ್ಕಾರ 10,000 ರೂ. ಪರಿಹಾರ ನೀಡುತ್ತಿತ್ತು. ಈಗ ಸರ್ಕಾರ ಪರಿಹಾರವನ್ನು 5,000 ರೂ. ಗೆ ಇಳಿಸಿದೆ. ಮನೆ ಕಳೆದುಕೊಂಡವರಿಗೆ ಬಿಜೆಪಿ ತಲಾ 5 ಲಕ್ಷ ರೂ. ಪರಿಹಾರ ನೀಡುತ್ತಿತ್ತು. ಈಗ ಅದು ಕೂಡ ಇಲ್ಲ. ಸರ್ಕಾರ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.