Site icon Vistara News

DK Shivakumar: ಬೆಂಗಳೂರಿನ ನೈಸ್‌ ರಸ್ತೆ ಬಳಿ ದೇಶದ ಅತಿ ಎತ್ತರದ ಸ್ಕೈಡೆಕ್!

Opposition MLAs agree to Skydeck near Nice Road will discuss in Cabinet meeting says DCM DK Shivakumar

ಬೆಂಗಳೂರು: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬೆಂಗಳೂರಿನಲ್ಲಿ 250 ಮೀ. ಎತ್ತರದ ಸ್ಕೈಡೆಕ್ ನಿರ್ಮಿಸಲು ಮುಂದಾಗಿದ್ದು, ವಿರೋಧ ಪಕ್ಷಗಳ ನಾಯಕರು, ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ಶಾಸಕರ ಸಭೆ ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್, ಸಭೆಯಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ಶನಿವಾರ ಮಾಹಿತಿ ನೀಡಿದರು.

250 ಮೀಟರ್ ಎತ್ತರದ ಈ ಸ್ಕೈಡೆಕ್‌ಗಾಗಿ 25 ಎಕರೆ ಜಾಗ ಅಗತ್ಯವಿದೆ. ಕೊಮ್ಮಘಟ್ಟ ಹಾಗೂ ಬೆಂಗಳೂರು ವಿವಿ ಬಳಿಯ ಜಾಗವನ್ನು ನೋಡಿದ್ದೆವು. ಬೆಂಗಳೂರು ಬೆಳೆಯುತ್ತಿರುವಾಗ ಬೆಂಗಳೂರು ವಿವಿಯ ಬಳಿ 25 ಎಕರೆ ಭೂಮಿ ವ್ಯರ್ಥ ಮಾಡುವುದು ಬೇಡ, ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು ಎಂದು ಶಾಸಕರು ಅಭಿಪ್ರಾಯಪಟ್ಟರು. ಹೀಗಾಗಿ ಈಗ ನೈಸ್ ರಸ್ತೆಯ ಬಳಿ ಮಾಡಲು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಎಲ್ಲಾ ಶಾಸಕರು ಒಪ್ಪಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Bengaluru News: ಒಕ್ಕಲಿಗ ಯುವ ಬ್ರಿಗೇಡ್‌ನಿಂದ ಜು.28ರಂದು ʼನಿರ್ಮಲ ಸಹಾಯ ಹಸ್ತʼ ಕಾರ್ಯಕ್ರಮ

ಈ ಜಾಗ ನೈಸ್ ಸಂಸ್ಥೆ ಬಳಿ ಇದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸರ್ಕಾರಕ್ಕೆ ನೈಸ್ ಸಂಸ್ಥೆ 200 ಎಕರೆ ಭೂಮಿ ವಾಪಸ್ ನೀಡಬೇಕಿದೆ ಎಂದು ಅಶೋಕ್ ಅವರು ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ನೈಸ್ ಸಂಸ್ಥೆ ಬಳಿ ಚರ್ಚೆ ಮಾಡುತ್ತೇವೆ. ಈ ಯೋಜನೆಗಾಗಿ 10 ಜಾಗ ಹುಡುಕಲಾಗಿತ್ತು. ಆದರೆ ವಾಯುಸೇನೆ, ವಿಮಾನಯಾನ ಸಚಿವಾಲಯದವರು 20 ಕಿ.ಮೀ ವ್ಯಾಪ್ತಿಯಲ್ಲಿ ಈ ಯೋಜನೆ ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದರು. ಹೀಗಾಗಿ ನೈಸ್ ರಸ್ತೆ ಬಳಿ ಮಾಡುವ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಸ್ಕೈಡೆಕ್ ಅನ್ನು ನಗರದ ಹೊರ ಭಾಗಕ್ಕೆ ತೆಗೆದುಕೊಂದು ಹೋದರೆ ಅದರ ಉದ್ದೇಶ ಈಡೇರುವುದೇ ಎಂದು ಮಾಧ್ಯಮಗಳು ಕೇಳಿದಾಗ, ಎಲ್ಲಾ ರೀತಿಯ ಲೆಕ್ಕಾಚಾರವನ್ನು ನಾವು ಹಾಕಿಯೇ ಈ ತೀರ್ಮಾನ ಮಾಡಿದ್ದೇವೆ. ನೈಸ್ ರಸ್ತೆ ಬಳಿ ಮಾಡುವುದರಿಂದ ಪ್ರವಾಸಿಗರು ಮೈಸೂರು, ಕೊಡಗು ಭಾಗಕ್ಕೆ ತೆರಳಲು ಮುಕ್ತವಾದ ಸಂಚಾರ ಮಾರ್ಗವಿರುತ್ತದೆ. ಇನ್ನು ನೈಸ್ ರಸ್ತೆ ಅಗಲೀಕರಣಕ್ಕೂ ಅವಕಾಶ ಇರುವುದರಿಂದ ಇದು ಸೂಕ್ತ ಜಾಗ ಎಂದು ಅಶೋಕ್ ಅವರು ಸಲಹೆ ನೀಡಿದ್ದಾರೆ. ಅವರ ಸಲಹೆಯಲ್ಲೂ ಅರ್ಥವಿದೆ. ಪೆರಿಫೆರಲ್ ರಿಂಗ್ ರಸ್ತೆ ಮಾಡಿದಾಗ ಎಲ್ಲಾ ಭಾಗಗಳಿಂದಲೂ ಇಲ್ಲಿಗೆ ಸಂಪರ್ಕ ಸಾಧಿಸಬಹುದು. ಇವರ ಸಲಹೆಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದರು.

ಕೆಂಗೇರಿಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೂ ಮೆಟ್ರೋ ಸಂಪರ್ಕ ಮಾಡಬೇಕಿದೆ. ಇದಕ್ಕೆ ಆರ್ಥಿಕ ಹೊರೆ ಇದ್ದು, ಈ ಭಾಗದಲ್ಲಿ ಅಭಿವೃದ್ಧಿ ಕಡಿಮೆ ಇರುವ ಕಾರಣ ಭೂಮಿ ವಶಕ್ಕೆ ಪಡೆಯಲು ಕಡಿಮೆ ವೆಚ್ಚವಾಗಲಿದೆ ಎಂದು ಈ ಸಲಹೆ ನೀಡಲಾಗಿದೆ. ಆರ್ಥಿಕವಾಗಿ ಎಲ್ಲಿ ನಮಗೆ ಅನುಕೂಲವಾಗುತ್ತದೆ ಎಂದು ಪರಿಶೀಲಿಸಲಾಗುವುದು. ಇದನ್ನು ಸರ್ಕಾರದಿಂದಲೇ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ತಿಳಿಸಿದರು.

ಸುರಂಗ ರಸ್ತೆ

ಸುರಂಗ ರಸ್ತೆ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಮೊದಲು ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ 18.5 ಕಿ.ಮೀ ಉದ್ದದ ಟನಲ್ ರಸ್ತೆ ಮಾಡಲು ತೀರ್ಮಾನಿಸಲಾಗಿದೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ, ಟೆಂಡರ್ ಕರೆಯಲಾಗುವುದು. ಈ ರಸ್ತೆ ನಿರ್ಮಾಣದ ವೇಳೆ ಕೆಲವು ಜಾಗಗಳನ್ನು ವಶಕ್ಕೆ ಪಡೆಯಬೇಕಾಗುತ್ತದೆ. ಈ ಎಲ್ಲಾ ವಿಚಾರವಾಗಿ ಶಾಸಕರ ಮುಂದೆ ಪ್ರಸ್ತಾಪ ಮಾಡಿದ್ದು, ಶಾಸಕರು ಈ ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಇದನ್ನೂ ಓದಿ: Kannada Sahitya Sammelana: ಬೆಂಗಳೂರಿನಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

ಬೆಂಗಳೂರಿನ ಪೂರ್ವದಿಂದ ಪಶ್ಚಿಮಕ್ಕೆ ಒಂದು ಮಾರ್ಗ ಸಿದ್ಧ ಮಾಡಲಾಗಿದ್ದು, ಮುಂದಿನ ಹಂತಗಳಲ್ಲಿ ತೆಗೆದುಕೊಳ್ಳಲಾಗುವುದು. ಇನ್ನು ಮುಂದಿನ ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಮೆಟ್ರೋ ಮಾರ್ಗಗಳನ್ನು ಡಬಲ್ ಡೆಕ್ಕರ್ ಮೇಲ್ಸೇತುವೆ ಮಾಡಲಾಗುವುದು. ಪಾಲಿಕೆ ಹಾಗೂ ಮೆಟ್ರೋ ಎರಡೂ ಇಲಾಖೆಗಳು ಇದರ ವೆಚ್ಚವನ್ನು ಭರಿಸಲಿವೆ ಎಂದರು.

ಟನಲ್ ರಸ್ತೆ ಜತೆಗೆ 17-18 ಕಡೆಗಳಲ್ಲಿ ಜಾಗ ಹುಡುಕಿದ್ದು, ಸದ್ಯಕ್ಕೆ 100 ಕಿ.ಮೀ ನಷ್ಟು ಸಿಗ್ನಲ್ ಮುಕ್ತ ಕಾರಿಡಾರ್ ಮೇಲ್ಸೇತುವೆ ಮಾಡಲು ಮುಂದಾಗಿದ್ದು, ಇದಕ್ಕಾಗಿ 12 ಸಾವಿರ ಕೋಟಿಯಷ್ಟು ವೆಚ್ಚ ತಗುಲಲಿದೆ. ಇದಕ್ಕಾಗಿ ಟೆಂಡರ್ ಕರೆಯಲು ಸಿದ್ಧತೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ನಗರದ ಹೊರಗೆ ಕಸ ವಿಲೇವಾರಿ

ಇನ್ನು ಕಸ ವಿಲೇವಾರಿಗೆ ಬೆಂಗಳೂರಿನ ಹೊರಭಾಗದ 15-20 ಕಿ.ಮೀ ದೂರ ವ್ಯಾಪ್ತಿಯಲ್ಲಿ ನಾಲ್ಕು ಕಡೆಗಳಲ್ಲಿ ಜಾಗ ಗುರುತಿಸಿ ಅಲ್ಲಿ ಕಸ ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ. ಸರ್ಕಾರಿ ಜಾಗ ಇದ್ದಲ್ಲಿ ಅದನ್ನು ಬಳಸಲಾಗುವುದು. ಇಲ್ಲವಾದರೆ ಖಾಸಗಿ ಜಮೀನುಗಳನ್ನು ಆಯುಕ್ತರು ಖರೀದಿ ಮಾಡಲಿದ್ದಾರೆ. ಕೇಂದ್ರ ಪರಿಸರ ಇಲಾಖೆ ನಿಯಮಾನುಸಾರ ಇದನ್ನು ಮಾಡಲಾಗುವುದು.

ಸಂಚಾರಿ ದಟ್ಟಣೆ ವಿಚಾರವಾಗಿ ಹಳೇ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿರುವುದರ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಆಯ್ಕೆ ನೀಡಲಾಗಿದ್ದು, ಇಂತಹ ಗಾಡಿಗಳನ್ನು ಅವರು ತೆಗೆದುಕೊಂಡು ಯಾರ್ಡ್‌ಗಳಿಗೆ ಹಾಕಿ ಹರಾಜು ಮಾಡಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಆಗಸ್ಟ್ 20ರ ವೇಳೆಗೆ ಕಾವೇರಿ 5ನೇ ಹಂತಕ್ಕೆ ಚಾಲನೆ

ಕಾವೇರಿ 5ನೇ ಹಂತದ ನೀರು ಪೂರೈಕೆ ಯೋಜನೆ ಪ್ರಯೋಗ ಹಂತದಲ್ಲಿದೆ. ಆಗಸ್ಟ್ 15ರಂದು ಇದಕ್ಕೆ ಚಾಲನೆ ನೀಡಲು ತೀರ್ಮಾನಿಸಿದ್ದೆ. ಆದರೆ ಅಧಿಕಾರಿಗಳು ಇನ್ನು ಐದಾರು ದಿನ ಸಮಯಾವಕಾಶ ಕೇಳುತ್ತಿದ್ದು, ಆಗಸ್ಟ್ 20ರ ವೇಳೆಗೆ ನೀರು ನೀಡಲಾಗುವುದು ಎಂದರು.

ವಿಶೇಷ ಅನುದಾನಕ್ಕೆ ಬೇಡಿಕೆ

ಇದೆಲ್ಲದರ ಜತೆಗೆ ಬೆಂಗಳೂರಿನ ಶಾಸಕರು ವಿಶೇಷ ಅನುದಾನಗಳನ್ನು ಕೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಚಿವರ ಜತೆ ಚರ್ಚೆ ಮಾಡಿ ಎಷ್ಟು ಅನುದಾನ ನೀಡಲು ಸಾಧ್ಯವೋ ಅದನ್ನು ನೀಡುತ್ತೇವೆ. ಇಂದಿನ ಸಭೆಯಲ್ಲಿ ಎಲ್ಲರೂ ಉತ್ತಮವಾದ ಸಲಹೆಗಳನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬಹಳ ಅನುಭವದ ಶಾಸಕರಿದ್ದು, ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಲು ಬಿಚ್ಚುಮನಸ್ಸಿನಿಂದ ಸಲಹೆ ನೀಡಿದ್ದಾರೆ ಎಂದರು.

ಇದನ್ನೂ ಓದಿ: MB Patil: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ; ಪರಿಣತರ ಜತೆ ಎಂ.ಬಿ.ಪಾಟೀಲ್‌ ಸಮಾಲೋಚನೆ

ಬ್ರ್ಯಾಂಡ್ ಬೆಂಗಳೂರು ವಿಚಾರವಾಗಿ ಚರ್ಚೆಯಾಗಿದೆ. ಇನ್ನು ಗ್ರೇಟರ್ ಬೆಂಗಳೂರು ವಿಧೇಯಕ ವಿಚಾರವಾಗಿ ಎಲ್ಲಾ ಪಕ್ಷದ ಶಾಸಕರು ಸದನ ಸಮಿತಿ ರಚನೆಗೆ ಮನವಿ ಮಾಡಿದ ಕಾರಣ ಸಮಿತಿ ರಚನೆಗೆ ನಿರ್ಧರಿಸಿದ್ದೇವೆ. ವಿರೋಧ ಪಕ್ಷದ ನಾಯಕರು ಅವರ ಪಕ್ಷದ ಶಾಸಕರ ಹೆಸರನ್ನು ಎಷ್ಟು ಬೇಗ ನೀಡುತ್ತಾರೋ ಅಷ್ಟು ಬೇಗ ಸಮಿತಿ ರಚನೆ ಮಾಡಲಾಗುವುದು ಎಂದರು.

ರಾಗಿಗುಡ್ಡದ ಬಳಿ ಡಬಲ್ ಡೆಕ್ಕರ್ ಮೇಲ್ಸೇತುವೆ ಮಾಡಲಾಗಿದ್ದು, ಈ ಯೋಜನೆ ಅನುಕೂಲವಾಗಿದೆ ಎಂಬ ವರದಿ ಬಂದಿದೆಯೇ ಎಂದು ಕೇಳಿದಾಗ, “ನಾಗ್ಪುರದಲ್ಲಿ ಮಾಡಲಾಗಿರುವ ಡಬಲ್ ಡೆಕ್ಕರ್ ಮೇಲ್ಸೇತುವೆ ಪರಿಶೀಲನೆ ಮಾಡಿದ್ದೆ. ದಕ್ಷಿಣ ಭಾರತದಲ್ಲಿ ನಮ್ಮಲ್ಲೇ ಮೊದಲ ಬಾರಿಗೆ ಇದನ್ನು ಮಾಡಲಾಗಿದೆ. ಅವುಗಳ ಸಾಧಕ ಭಾದಕ ಗಮನಿಸಿದ್ದೇವೆ. ಈಗ ಸಿದ್ಧವಾಗಿರುವ ಮೇಲ್ಸೇತುವೆಯ ಒಂದು ಭಾಗ ಮಾತ್ರ ಚಾಲನೆಯಾಗಿದ್ದು, ಮತ್ತೊಂದು ಭಾಗ ಚಾಲನೆ ಆಗಬೇಕು. ಕೆಲವು ಭಾಗಗಳಲ್ಲಿ ಅಂಡರ್ ಪಾಸ್ ಮಾಡಲು ರಾಮಲಿಂಗಾ ರೆಡ್ಡಿ ಹಾಗೂ ಇತರರು ಸಲಹೆ ನೀಡಿದ್ದು, ಆ ಬಗ್ಗೆ ಪ್ರಸ್ತಾವನೆ ನೀಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಸ್ಕೈಡೆಕ್ ಯೋಜನೆಗೆ ಅಗತ್ಯವಿರುವ ಜಾಗ ಹಾಗೂ ವೆಚ್ಚದ ಬಗ್ಗೆ ಕೇಳಿದಾಗ, ಮೊದಲು ಈ ಯೋಜನೆಯನ್ನು ಕಂಠೀರವ ಕ್ರೀಡಾಂಗಣದ ಎದುರು ಮಾಡಲು ಪ್ರಸ್ತಾವನೆ ನೀಡಿದ್ದರು. ಸಂಚಾರಿ ದಟ್ಟಣೆ ಸಮಸ್ಯೆ ಹೆಚ್ಚಾಗುತ್ತದೆ ಹಾಗೂ ಎಚ್ಎಎಲ್‌ನಿಂದ ಇದಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಅಲ್ಲಿ ಮಾಡುತ್ತಿಲ್ಲ. ಈ ಯೋಜನೆಗೆ 400-500 ಕೋಟಿ ವೆಚ್ಚವಾಗಲಿದ್ದು, ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿರುವ ಉದ್ದೇಶದಿಂದ ಕನಿಷ್ಠ ಪಕ್ಷ 25 ಎಕರೆ ಜಾಗ ಅಗತ್ಯವಿದೆ ಎಂದು ಅಂದಾಜಿಸಿದ್ದೇವೆ ಎಂದು ತಿಳಿಸಿದರು.

ಬೆಂಗಳೂರು ಕೆರೆಗಳ ವಿಚಾರವಾಗಿ ಕೇಳಿದಾಗ, ಬೆಂಗಳೂರು ಕೆರೆಗಳ ವಿಚಾರವಾಗಿ ಮತ್ತೊಂದು ಸಭೆ ಕರೆಯಲಿದ್ದೇನೆ. ಬಿಡಬ್ಲ್ಯೂಎಸ್ಎಸ್‌ಬಿ ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರ ಮಾಡಿ ಎಲ್ಲಾ ಕೆರೆಗಳಿಗೆ ಶುದ್ಧೀಕರಿಸಿದ ನೀರನ್ನು ಹರಿಸಲಾಗುವುದು. ಆ ಮೂಲಕ ಅಂತರ್ಜಲ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ಚುನಾವಣೆ ಸಂಬಂಧ ಚರ್ಚೆ ಆಯಿತಾ, ಚುನಾವಣೆ ಯಾವಾಗ ಮಾಡಬಹುದು ಎಂದು ಕೇಳಿದಾಗ, ನ್ಯಾಯಾಲಯ ಆದೇಶ ನೀಡಿದ ನಂತರ ಖಂಡಿತವಾಗಿ ಚುನಾವಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ವಿಜಯೇಂದ್ರ ಅಪ್ರಬುದ್ಧ ರಾಜಕಾರಣಿ

ರಾಹುಲ್ ಗಾಂಧಿ ಪದೇ ಪದೆ ಪರಿಶಿಷ್ಟರ ಬಗ್ಗೆ ಮಾತನಾಡುತ್ತಾರೆ, ಹಾಗಾಗಿ ವಾಲ್ಮೀಕಿ ನಿಗಮದ ಹಗರಣ ಹಾಗೂ ಮುಡಾ ಹಗರಣದ ಬಗ್ಗೆ ಮಾತನಾಡಬೇಕು ಎಂಬ ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ರಾಹುಲ್ ಗಾಂಧಿ ಅವರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಹಾಗೆ ನೋಡಿದರೆ ವಾಲ್ಮೀಕಿ ಹಗರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿರುವುದರಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಮಾತನಾಡಬೇಕು. ಬ್ಯಾಂಕ್‌ಗಳು ಕೇವಲ 2 ಗಂಟೆಗಳಲ್ಲಿ ಸಾಲವನ್ನು ಮಂಜೂರು ಮಾಡಿದ್ದು, ಬ್ಯಾಂಕುಗಳ ಅಧಿಕಾರವನ್ನು ಹೊಂದಿರುವ ನಿರ್ಮಲಾ ಸೀತರಾಮನ್ ಮಾತನಾಡಬೇಕು ಎಂದು ಅವರು ಕೇಳುತ್ತಿಲ್ಲ ಯಾಕೆ?

ವಿಜಯೇಂದ್ರ ಓರ್ವ ಅಪ್ರಬುದ್ಧ ರಾಜಕಾರಣಿ. ಅವರ ಹಗರಣಗಳನ್ನು ನಾವು ಸಧ್ಯದಲ್ಲೇ ಬಹಿರಂಗಪಡಿಸುತ್ತೇವೆ. ಅವರ ಹಗರಣಗಳ ಬಗ್ಗೆ ಬಿಜೆಪಿ ಪಕ್ಷಕ್ಕೂ ಗೊತ್ತಿದೆ. ಅವರ ಅಂತಾರಾಷ್ಟ್ರೀಯ ಮಟ್ಟದಿಂದ ಹಣ ವರ್ಗಾವಣೆಯಾಗಿರುವುದು ಸೇರಿದಂತೆ ಅನೇಕ ವಿಚಾರಗಳಿವೆ. ಅವರ ತಂದೆ ಮುಖ್ಯಮಂತ್ರಿಯಾಗಿದ್ದಾಗ ಏನೆಲ್ಲಾ ಮಾಡಿದ್ದಾರೆ ಎಂದು ಗೊತ್ತಿದೆ. ಅವರ ತಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಯಾಕೆ? ವಿಜಯೇಂದ್ರ ಅವರು ಪ್ರಮಾಣಿಕರಾಗಿಲ್ಲ. ಹೀಗಾಗಿ ಅವರು ಈ ವಿಚಾರದಲ್ಲಿ ಮಾತನಾಡುವ ನೈತಿಕತೆ ಹೊಂದಿಲ್ಲ ಎಂದು ತಿಳಿಸಿದರು.

ಮುಡಾ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂಬ ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಮುಡಾ ಹಗರಣಗಳನ್ನು ಮಾಡಿರುವುದು ಬಿಜೆಪಿ. ನಮ್ಮ ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬದವರಿಗೂ ಈ ಅಕ್ರಮಕ್ಕೂ ಸಂಬಂಧವಿಲ್ಲ. ಮುಡಾ ಅವರು ಇವರ ಜಮೀನನ್ನು ಒತ್ತುವರಿ ಮಾಡಿಕೊಂಡ ಪರಿಣಾಮ ಮುಖ್ಯಮಂತ್ರಿಗಳ ಕುಟುಂಬದವರು ಮುಡಾ ಸಂಸ್ಥೆಯಿಂದ ಪರಿಹಾರ ಪಡೆಯಲು ಅರ್ಹರಾಗಿದ್ದು, ಅವರು ಪರಿಹಾರ ಪಡೆದಿದ್ದಾರೆ. ಕಾನೂನು ಪ್ರಕಾರವಾಗಿ ಅವರು ಪರಿಹಾರ ಪಡೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬದಲಿ ನಿವೇಶನ ಕೇಳಿದ್ದಾರೆ. ಅದೇ ರೀತಿ ಅನೇಕರು ನಿವೇಶನ ಪಡೆದಿದ್ದಾರೆ.

ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

ಮುಡಾದಲ್ಲಿ ಅಕ್ರಮ ನಡೆದಿದ್ದರೆ ಅದು ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದಿದೆ. ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅಕ್ರಮ ನಡೆದಿದೆ. ಈ ಕಾರಣಕ್ಕೆ ನಮ್ಮ ಮುಖ್ಯಮಂತ್ರಿಗಳು 2006ರಿಂದ ಮುಡಾ ಅಕ್ರಮ ತನಿಖೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

Exit mobile version