ಬೆಂಗಳೂರು/ಕನಕಪುರ: ಅಪಘಾತದಲ್ಲಿ ರೈತರೊಬ್ಬರ ಮೆದುಳು ನಿಷ್ಕ್ರಿಯಗೊಂಡಿದ್ದು ಅಂಗಾಂಗ ದಾನದ (Organ donation) ಮೂಲಕ ಹಲವರ ಜೀವಗಳನ್ನು ಉಳಿಸಿ ಸಾರ್ಥಕತೆ ಮೆರೆದಿದ್ದಾರೆ. ಕನಕಪುರದ ರವಿ (55) ಎಂಬುವವರು ಡಿಸೆಂಬರ್ 22 ರಂದು ಕನಕಪುರದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮತ್ತೊಂದು ಬೈಕ್‌ಗೆ ಡಿಕ್ಕಿ ಸಂಭವಿಸಿ ಗಾಯಗೊಂಡಿದ್ದರು.
ಅಪಘಾತದಲ್ಲಿ ರವಿ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಚಿಕಿತ್ಸೆಗಾಗಿ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ತರಲಾಗಿತ್ತು. ಎಲ್ಲ ಪ್ರಯತ್ನಗಳ ನಂತರ ಡಿಸೆಂಬರ್ 26ರಂದು ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಲಾಯಿತು. ಬಳಿಕ ರವಿ ಅವರ ಪತ್ನಿ ಗೌರಮ್ಮ, ಮಗಳು ಮತ್ತು ಸಹೋದರರು ಅವರ ಅಂಗಾಂಗವನ್ನು ದಾನ ಮಾಡಲು ಸಮ್ಮತಿಸಿದರು.
ಜೀವ ಸಾರ್ಥಕತೆ ಕಾರ್ಯಕ್ರಮದಡಿ ರವಿ ಅವರ ಕಾರ್ನಿಯ, ಮೂತ್ರಪಿಂಡ, ಹೃದಯದ ಕವಾಟ ಮತ್ತು ಯಕೃತ್ ಅನ್ನು ಕಸಿಗಾಗಿ ಪಡೆಯಲಾಯಿತು. ಬಿಜಿಎಸ್ ಜಿಜಿಎಚ್‌ನಲ್ಲಿ 24 ವರ್ಷದ ಯುವಕ ಯಕೃತ್, 39 ವರ್ಷದ ಮಹಿಳೆ ಮೂತ್ರಪಿಂಡ ಕಸಿಗೆ ಒಳಗಾದರು. ಹೃದಯದ ಕವಾಟ ಮತ್ತು ಕಾರ್ನಿಯಾ ಹಾಗೂ ಮತ್ತೊಂದು ಮೂತ್ರಪಿಂಡವನ್ನು ಕ್ರಮವಾಗಿ ಜಯದೇವ ಹೃದ್ರೋಗ ಆಸ್ಪತ್ರೆ, ಪ್ರಭಾ ಕಣ್ಣಿನ ಆಸ್ಪತ್ರೆ ಮತ್ತು ಎನ್.ಯು ಆಸ್ಪತ್ರೆಗೆ ನೀಡಲಾಯಿತು.
ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಎಚ್‌ಒಡಿ ಮತ್ತು ಎಚ್‌ಪಿಬಿ ಯಕೃತ್ ಕಸಿ ತಜ್ಞ ಡಾ. ಮಹೇಶ್ ಗೋಪಶೆಟ್ಟಿ ನೇತೃತ್ವದಲ್ಲಿ ಯಶಸ್ವಿಯಾಗಿ ಯೃಕತ್ ಕಸಿ ಮಾಡಲಾಯಿತು. ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಎಚ್‌ಒಡಿ ಮತ್ತು ಮೂತ್ರಪಿಂಡ ಶಾಸ್ತ್ರಜ್ಞ ಮತ್ತು ಹಿರಿಯ ಕಸಿ ಶಸ್ತ್ರಚಿಕಿತ್ಸಕ ಡಾ. ಅನಿಲ್ ಕುಮಾರ್ ಬಿ.ಟಿ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ನೊಂದವರನ್ನು ಸಂತೈಸುವ ವಿಭಾಗದ ಮುಖ್ಯ ಸಲಹೆಗಾರರು ಮತ್ತು ಕಸಿ ಶಸ್ತ್ರಚಿಕಿತ್ಸೆ ಸಮನ್ವಯಕಾರರಾದ ಸರಳ ಅನಂತರಾಜ್ ಮಾತನಾಡಿ, ಕೃಷಿಕರ ಕುಟುಂಬ ಅಂಗಾಂಗದ ಮಹತ್ವವನ್ನು ಅರಿತು ದಾನ ಮಾಡಲು ಮುಂದೆ ಬಂದು, ಅಗತ್ಯವಿರುವವರಿಗೆ ಪುನರ್ಜನ್ಮ ನೀಡಿರುವುದು ಕೃತಜ್ಞತೆಗೆ ಪಾತ್ರವಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡು ಸಂಕಟದಲ್ಲಿರುವ ಕುಟುಂಬದ ಸದಸ್ಯರ ಧೈರ್ಯ, ಸಹಾನುಭೂತಿ ಮತ್ತು ವಿವೇಚನೆ ಸ್ಫೂರ್ತಿದಾಯಕವಾಗಿದೆ. ವೈದ್ಯಕೀಯ ತಂಡ ಈ ಅವಕಾಶವನ್ನು ಸಮರ್ಥ ಮತ್ತು ರಚನಾತ್ಮಕವಾಗಿ ಬಳಸಿಕೊಂಡು ಸಾರ್ಥಕತೆ ಮೆರೆದಿದೆ ಎಂದು ಹೇಳಿದರು.
ಇದನ್ನೂ ಓದಿ | Bomb Threat | ಭಟ್ಕಳ ಪೊಲೀಸರಿಗೆ ಬಂತು ಬಾಂಬ್ ಬ್ಲ್ಯಾಸ್ಟ್ ಬೆದರಿಕೆ ಪತ್ರ; ಕಳ್ಳತನ ಮುಚ್ಚಿಡಲು ಕಳ್ಳನ ಕೃತ್ಯ