ಬೆಂಗಳೂರು: ಆಟವಾಡುತ್ತಾ ಆಯತಪ್ಪಿ ಮನೆಯ ಮಹಡಿಯಿಂದ ಬಿದ್ದ ಬಾಲಕಿಯೊಬ್ಬಳ ಮೆದುಳು ನಿಷ್ಕ್ರಿಯಗೊಂಡಿದ್ದು (Brain dead), ಕುಟುಂಬಸ್ಥರು ಮಗಳ ಅಗಲಿಕೆಯ ನೋವಿನಲ್ಲೂ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ (Organ Donation) ಮೆರೆದಿದ್ದಾರೆ.
ನಗರದ ಬಾಲ್ಡಿವಿನ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಕೃತಿ ಜೈನ್ (14) ಅಂಗಾಂಗ ದಾನದ ಮೂಲಕ 9 ಮಂದಿಯ ಬದುಕಿಗೆ ಆಸರೆಯಾಗಿದ್ದಾಳೆ. ತಂದೆ ವಿರೇಂದ್ರ ಕುಮಾರ್ ಜೈನ್, ತಾಯಿ ಮೋನಿಕಾ ಅವರು ತಮ್ಮ ಪ್ರೀತಿಯ ಪುತ್ರಿಯ ಅಂಗಾಂಗಳನ್ನು ದಾನ ಮಾಡಿದ್ದಾರೆ.
ಬೆಂಗಳೂರಿನ ಕಾಟನ್ ಪೇಟೆಯಲ್ಲಿ ವಾಸವಿರುವ ಕೃತಿ ಜೈನ್, ಕಳೆದ ಮೇ 24 ರಂದು ಮನೆಯ ಮಹಡಿ ಮೇಲೆ ತನ್ನ ಸಹೋದರ ಸಂಬಂಧಿಗಳೊಂದಿಗೆ ಆಟ ಆಡುತ್ತಿದ್ದರು. ಈ ವೇಳೆ ಆಯತಪ್ಪಿ 8 ರಿಂದ 10 ಅಡಿ ಮೇಲಿನಿಂದ ಬಿದ್ದಿದ್ದಳು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರ ಸತತ ಪರಿಶ್ರಮದ ನಡುವೆಯೂ ಮೇ 28 ರಂದು ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಆಕೆಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಲಾಯಿತು.
ಕೃತಿ ಅಗಲಿಕೆಯ ದುಃಖದಲ್ಲೂ ಕುಟುಂಬಸ್ಥರು ಆಕೆಯ ಅಂಗಾಂಗಳನ್ನು ದಾನ ಮಾಡುವ ಧೈರ್ಯದ ನಿರ್ಧಾರ ಮಾಡಿದ್ದಾರೆ. ಜೀವ ಸಾರ್ಥಕತೆ ಸಂಸ್ಥೆಯೊಂದಿಗೆ ಸಮನ್ವಯದಿಂದ ಅಂಗಾಂಗಗಳ ದಾನ ಪ್ರಕ್ರಿಯೆ ನಡೆಸಲಾಗಿದೆ. ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆ ಯಶಸ್ವಿಯಾಗಿ ಕೃತಿ ಅವರ ಶ್ವಾಸಕೋಶ, ಯಕೃತ್, ಮೂತ್ರಪಿಂಡಗಳು, ಹೃದಯದ ಕವಾಟ ಮತ್ತು ಅಕ್ಷಿಪಟಲಗಳನ್ನು ಪಡೆದುಕೊಂಡಿದೆ.
ಅಪಾಯಕಾರಿ ಪರಿಸ್ಥಿತಿಯಲ್ಲಿದ್ದವರಿಗೆ ಅಂಗಾಂಗಳನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಶ್ವಾಸಕೋಶವನ್ನು ಚೆನ್ನೈಗೆ ವಾಯುಮಾರ್ಗದ ಮೂಲಕ ರವಾನಿಸಿದ್ದು, ಉಳಿದ ಅಂಗಾಂಗಳನ್ನು ಕರ್ನಾಟಕದಲ್ಲಿಯೇ ಕಸಿ ಮಾಡಿ ಹಲವು ಜೀವಗಳನ್ನು ರಕ್ಷಿಸಲಾಗಿದೆ.
ಅಂಗಾಂಗಳನ್ನು ದಾನ ಮಾಡಿದ ಕುಟುಂಬಸ್ಥರಿಗೆ ಬಿಜಿಎಸ್ ಗ್ಲೋಬಲ್ ಗ್ಲೆನಿಗಲ್ಸ್ ಆಸ್ಪತ್ರೆಯ ತಜ್ಞರಾದ ಡಾ. ಸರಳಾ ಅನಂತ ರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ. ಕೃತಿಯ ಅಂಗಾಂಗಳ ಮೂಲಕ ಬದುಕಿನಲ್ಲಿ ಎರಡನೇ ಅವಕಾಶ ಪಡೆದಿರುವವರು ಮತ್ತು ತೊಂದರೆಯಲ್ಲಿದ್ದ ಕುಟುಂಬದವರು ಇವರ ನಿಸ್ವಾರ್ಥ ಕಾರ್ಯವನ್ನು ಸದಾ ಕಾಲ ಸ್ಮರಿಸುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Delhi Murder: ಮಾಜಿ ಗೆಳತಿಗೆ 21 ಬಾರಿ ಚಾಕು ಇರಿದು ಕೊಂದಿದ್ದಕ್ಕೆ ಪಶ್ಚಾತ್ತಾಪ ಇಲ್ಲ ಎಂದ ಆರೋಪಿ ಸಾಹಿಲ್
ಅಂಗಾಂಗ ದಾನ ಒಂದು ಮಹತ್ತರ ಕಾರ್ಯ. ಕೃತಿ ಅವರ ಕುಟುಂಬದ ಈ ಮಹತ್ವದ ನಿರ್ಧಾರ ಅಂಗಾಂಗ ದಾನದ ಮಹತ್ವವವನ್ನು ಸಾರುತ್ತದೆ. ಅಲ್ಲದೆ ಇತರರಿಗೂ ಪ್ರೇರಣೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ